ಬಿಜೆಪಿಯ ಫೈರ್ ಬ್ರಾಂಡ್ ಸೋಲಿಸಲು ಹೋಗಿ, ತಾನೇ ಸೋತ ಸಿಎಂ ಆಕಾಂಕ್ಷಿ
ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗಿನಿಂದ ಮೊನ್ನೆಮೊನ್ನೆ ಚುನಾವಣೆ ದಿನಾಂಕ ಘೋಷಣೆಯಾಗುವವರೆಗೆ ವಿರೋಧ ಪಕ್ಷಗಳ ಜೊತೆಗೆ ಸ್ವಪಕ್ಷೀಯರಾದ ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಬಿಜೆಪಿಯ ಕೆಲವು ಮುಖಂಡರನ್ನು ನೇರಾನೇರ ಟಾರ್ಗೆಟ್ ಮಾಡಿ ಟೀಕಾ ಪ್ರಹಾರ ನಡೆಸಿದ್ದರು. ಬಿಜೆಪಿಗೆ ಹಲವು ಬಾರಿ ಇದರಿಂದ ಇರಿಸುಮುರಿಸು ಉಂಟಾಗಿತ್ತು.
ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ದ ಹರಿಹಾಯುತ್ತಿದ್ದ ಯತ್ನಾಳ್ ನಂತರ ಟಾರ್ಗೆಟ್ ಮಾಡಿದ್ದು ಮುರುಗೇಶ್ ನಿರಾಣಿಯವರನ್ನು. ಪಂಚಮಶಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ನಿರಾಣಿ ಕಡೆಯಿಂದ ಸರಿಯಾದ ಬೆಂಬಲ ಸಿಗಲಿಲ್ಲ ಎಂದು ಯತ್ನಾಳ್ ಅವರು ನಿರಾಣಿ ವಿರುದ್ದ ತಿರುಗಿ ಬೀಳಲಾರಂಭಿಸಿದರು.

ಸಮುದಾಯಕ್ಕೆ ಮೀಸಲಾತಿಯ ಸಂಬಂಧ ಹೋರಾಟದಲ್ಲಿ ಯತ್ನಾಳ್ ಮಂಚೂಣಿಯಲ್ಲಿದ್ದರು. ಈ ವಿಚಾರದಲ್ಲಿ ಸರಕಾರದ ಸಂಧಾನದ ನಂತರವೂ ಯತ್ನಾಳ್ ಮತ್ತು ನಿರಾಣಿ ನಡುವೆ ಮಾತಿನ ಚಕಮಕಿ ಜೋರಾಗಿಯೇ ಮುಂದುವರಿದಿತ್ತು. ವಿಷಯಾಧಾರಿತ ಟೀಕೆಗಳನ್ನು ಬಿಟ್ಟು ಇಬ್ಬರೂ ನಾಯಕರು ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದರು.
ಯತ್ನಾಳ್ ಅವರನ್ನು ಟೀಕಿಸುವ ಭರದಲ್ಲಿ ಅವರ ಕಾರು ಚಾಲಕನ ಕೊಲೆಯನ್ನು ಹೊಸದಾಗಿ ಪ್ರಸ್ತಾವಿಸಿ, "ಬಿಜಾಪುದಲ್ಲಿ ಒಬ್ಬ ಇದ್ದಾನೆ, ಅವನಿಗೆ ಎಲುಬಿಲ್ಲದ ನಾಲಿಗೆ. ನಾವು ಬಿಜೆಪಿಯವರು ನಮಗೆ ಸಂಸ್ಕೃತಿಯನ್ನು ನಮ್ಮ ನಾಯಕರು ಕಲಿಸಿ ಕೊಟ್ಟಿದ್ದಾರೆ. ಆದರೆ ಆ ವ್ಯಕ್ತಿ ಸಂಸ್ಕಾರ ಇಲ್ಲದವನು, ಅಪ್ಪನಿಗೆ ಹುಟ್ಟಿದವನಾಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ"ಎಂದು ಮುರುಗೇಶ್ ನಿರಾಣಿ ಏಕವಚನದಲ್ಲಿ ಹರಿಹಾಯ್ದಿದ್ದರು.

ಯತ್ನಾಳ್ ಸೋಲಿಸಲು ವಿಶೇಷ ಕಾರ್ಯತಂತ್ರ
ಇದಕ್ಕೆ ಉತ್ತರಿಸುತ್ತಾ, "ಅವನ ನಾಲಿಗೆಯನ್ನು ಸೀಳಿ ಬಿಡುತ್ತೇನೆ, ಅವನೊಬ್ಬ ಎಂತಹ ಪಿಂಪ್ ಎನ್ನುವುದು ಗೊತ್ತು. ನಿನ್ನಂತೆ ಹಲ್ಕಾ ಕೆಲಸ ಮಾಡಿ ನಾನು ಶ್ರೀಮಂತನಾಗಿಲ್ಲ, ಸತ್ಯದ ದಾರಿಯಲ್ಲಿ ಸಂಪಾದನೆ ಮಾಡಿದವನು" ಎಂದು ಯತ್ನಾಳ್ ತಿರುಗೇಟು ನೀಡಿದ್ದರು. ಇದರ ಜೊತೆಗೆ, ಯತ್ನಾಳ್ ಸೋಲಿಸಲು ವಿಶೇಷ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನುವ ಸುದ್ದಿಯೂ ಮುನ್ನಲೆಗೆ ಬಂದಿತ್ತು.
ಯಾವ ನನ್ ಮಗನಿಂದಲೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ
ಖುದ್ದು ಯತ್ನಾಳ್ ಕೂಡಾ ಈ ವಿಚಾರವನ್ನು ಪ್ರಸ್ತಾವಿಸಿದ್ದರು. ನನಗೆ ಕ್ಷೇತ್ರದ ಜನತೆಯ ಶ್ರೀರಕ್ಷೆಯಿದೆ, ಯಾವ ನನ್ ಮಗನಿಂದಲೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಸೋಲಿಸುವ ಯಾವ ಸಂಚೂ ವರ್ಕೌಟ್ ಆಗುವುದಿಲ್ಲ ಎಂದು ಪರೋಕ್ಷವಾಗಿ ನಿರಾಣಿ ಹೆಸರನ್ನು ಉಲ್ಲೇಖಿಸದೇ ಯತ್ನಾಳ್ ಹೇಳಿದ್ದರು. ಈಗ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ಸಿನ ಅಬ್ದುಲ್ ಹಮೀದ್ ಖಾಜಾಸಾಬ್ ಮುಶಾರಿಫ್ ವಿರುದ್ದ 8,233 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನೊಂದು ಕಡೆ, ಬೀಳಗಿಯಿಂದ ಸ್ಪರ್ಧಿಸಿದ್ದ ಮುರುಗೇಶ್ ನಿರಾಣಿ ತಮ್ಮ ಪ್ರತಿಸ್ಪರ್ಧಿ ಜೆ.ಟಿ.ಪಾಟೀಲ್ ವಿರುದ್ದ 11,129 ಮತಗಳಿಂದ ಸೋಲುಂಡಿದ್ದಾರೆ.
ಸಿಎಂ ಆಗುವುದು ಬೇರೆ ಮಾತು, ಶಾಸಕರಾಗಿಯೂ ಆಯ್ಕೆಯಾಗಲಿಲ್ಲ
ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿದಾಗ, ಮುಂದಿನ ಸಿಎಂ ಪಟ್ಟಿಯಲ್ಲಿ ಮುರುಗೇಶ್ ನಿರಾಣಿ ಹೆಸರು ಕೂಡಾ ಮಂಚೂಣಿಯಲ್ಲಿತ್ತು. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಗೆದ್ದರೆ ನಿರಾಣಿ ಸಿಎಂ ಆಕಾಂಕ್ಷಿ ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು. ಆದರೆ, ಚುನಾವಣಾ ರಾಜಕೀಯದ ಏರಿಳಿತದಲ್ಲಿ ನಿರಾಣಿ ಸಿಎಂ ಆಗುವುದು ಬೇರೆ ಮಾತು, ಶಾಸಕರಾಗಿಯೂ ಆಯ್ಕೆಯಾಗಲಿಲ್ಲ.












Click it and Unblock the Notifications