CJ Roy: ಅಧಿಕಾರಿಗಳು ಇದ್ದಾಗಲೇ ಸಿಜೆ ರಾಯ್ ಆತ್ಮಹತ್ಯೆ, ಮೈಸೂರಲ್ಲಿ ಡ್ರಗ್ ಪತ್ತೆ: ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರು: ಕಾನ್ಫೆಡೆಂಟ್ ಗ್ರೂಪ್‌ನ ಚೇರ್ಮನ್ ಮತ್ತು ಖ್ಯಾತ ಉದ್ಯಮಿ ಸಿಜೆ ರಾಯ್ (CJ Roy) ಅವರ ಕಂಪನಿ ಮೇಲೆ ಡಿಸೆಂಬರ್ ತಿಂಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದಾದ ಮೇಲೆ 60 ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಸಬೇಕೆಂಬ ಕಡ್ಡಾಯ ನಿಯಮವಿದೆ. ಅದನ್ನು ಅಂತಿಮಗೊಳಿಸಲು ರಾಯ್ ಅವರನ್ನು ಅಧಿಕಾರಿಗಳು ಕರೆದಿದ್ದರು ಎಂದು ಬೆಂಗಳೂರಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಮೈಸೂರಲ್ಲಿ ಡ್ರಗ್ ಪತ್ತೆ, ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಸೇರಿ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ರಾಯ್ ಕಂಪನಿ ಮೇಲಿನ ಐಟಿ ದಾಳಿಗೆ ಸಂಬಂಧಿಸಿದಂತೆ ಪೆಬ್ರವರಿ 4 ರೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕಿತ್ತು. ಅದನ್ನು ಫೈನಲ್ ಮಾಡಬೇಕು ಎಂದು ರಾಯ್ ಅವರನ್ನು ಕರೆದಿದ್ದರು. ಮೂರು ದಿನದ ಹಿಂದೆ ದುಬೈನಿಂದ ರಾಯ್ ಅವರು ಆಗಮಿಸಿದ್ದರು. ಅವರ ಕಚೇರಿಗೆ ಹೋಗಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಅದಕ್ಕೆ ರಾಯ್ ಅವರು ಸ್ಪಂದಿಸಿದ್ದಾರೆ ಎಂದು ಸಾವಿಗೂ ಮುನ್ನ ನಡೆದ ಒಂದಷ್ಟು ಸಂಗತಿಯಗಳನ್ನು ಸಚಿವರು ವಿವರಿಸಿದ್ದಾರೆ.

ಐಟಿ ದಾಳಿ, ಚಾರ್ಜ್ ಶೀಟ್ ಸಂಬಂಧಿಸಿದಂತೆ ಸ್ಪಂದಿಸಿದ ರಾಯ್ ಅವರು, ಕಚೇರಿಯಲ್ಲಿ ಅಧಿಕಾರಿಗಳು ಕೇಳಿದ ಮಾಹಿತಿ ರಾಯ್ ನೀಡಿದ್ದಾರೆ. ಇದೇ ವೇಳೆ ಅಧಿಕಾರಿಗಳು ಕಚೇರಿಯಲ್ಲಿದ್ದಾಗಲೇ ಐದು ನಿಮಿಷ ಒಳಗಡೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ. ಬಳಿಕ 20 ನಿಮಿಷ ಆದರೂ ರಾಯ್ ಹೊರಗಡೆ ಬಂದಿಲ್ಲ. ಆಗ ಬಾಗಿಲು ಒಡೆದು ನೋಡಿದ್ದಾರೆ. ಆಗ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ ಎಂದು ತಿಳಿಸಿದರು.
ರಾಯ್ ಪ್ರಕರಣದ ತನಿಖೆಗೆ ಸೂಚನೆ
ಉದ್ಯಮಿ ಸಿಜೆ ರಾಯ್ ಅವರು ಯಾಕೆ ಈ ರೀತಿ ಮಾಡ್ಕೊಂಡಿದ್ದಾರೆಂದು ತಿಳಿಯುವ ಸಲುವಾಗಿ ಪ್ರಾಥಮಿಕ ತನಿಖೆಗೆ ಸೂಚನೆ ನೀಡಿದ್ದೇನೆ. ತನಿಖೆಯಿಂದ ಹಲವು ವಿಷಯಗಳು, ಸತ್ಯಗಳು ಗೊತ್ತಾಗುತ್ತವೆ ಎಂದರು. ಐಟಿ ದಾಳಿಯಿಂದ ಉದ್ಯಮಿಗಳ ಕಿರುಕುಳ ವಿಚಾರ ಎಂಬ ಆಂಗಲ್‌ನಲ್ಲಿ ನಾವು ಯೋಚನೆ ಮಾಡಿಲ್ಲ. ವಿಚಾರಣೆ ಯಾವ ರೀತಿ ಆಗಿದೆ ಎಂದು ನೋಡಲಾಗುತ್ತದೆ. ತನಿಖೆಯಿಂದ ಎಲ್ಲವು ತಿಳಿಯಲಿದೆ.
ರಾಯ್ ಸಾವಿನ ಬಗ್ಗೆ ಸಹೋದರ ಆರೋಪ
ರಾಯ್ ಅವರ ಸಹೋದರೊಬ್ಬರು ಐಟಿ ಅಧಿಕಾರಿಗಳ ದಾಳಿಯಿಂದ ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಪೊಲೀಸ್ ಇಲಾಖೆ ಇನ್ನೂ ಕೂಡ ಆ ಆಂಗಲ್ ನಲ್ಲಿ ನೋಡಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಐಟಿ ಕಿರುಕುಳ ಆರೋಪ ಮಾಡಿದ್ದರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, ಗೃಹ ಸಚಿವನಾಗಿ ಹೇಳೋದು ಇಷ್ಟೇ. ಅವರು ಆತ್ಮಹತ್ಯೆ ಆಂಗಲ್ ಅಷ್ಟೇ ನೋಡುತ್ತಾರೆ. ಉಳಿದೆಲ್ಲವು ತನಿಖೆಯಿಂದ ಹೊರ ಬಂದ ಮೇಲೆ ತಿಳಿಯುತ್ತದೆ. ಪ್ರಾಥಮಿಕ ತನಿಖೆಯ ಅಂಶಗಳನ್ನು ಗಮನಿಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಖರ್ಗೆ ಭೇಟಿ ಬಗ್ಗೆ ಗೃಹ ಸಚಿವರು ಹೇಳಿದ್ದೇನು?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿ ವಿಚಾರ ಮಾತನಾಡಿದ ಅವರು, ಆತ್ಮೀಯರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದೇನೆ. ಇದು ಸೌಜನ್ಯದ ಭೇಟಿ. ನಮ್ಮ ಅವರ ಸಂಬಂಧ ಕುಟುಂಬದ ಸಂಬಂಧ. ಹಾಗಾಗಿ ಅವರು ಬಂದಾಗಲೆಲ್ಲ ಭೇಟಿ ಮಾಡುತ್ತಲೇ ಇರುತ್ತೇನೆ. ಈ ವೇಳೆ ರಾಜ್ಯದ ರಾಜಕಾರಣ ಅವರ ಗಮನಕ್ಕೆ ತಂದಿದ್ದೇನೆ. ಕರ್ನಾಟಕ ಬಜೆಟ್ ಮಂಡನೆ ಆಗಲಿದೆ. ಕಲಬುರಗಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿದೆ. ಪ್ರತ್ಯೇಕವಾಗಿ ಕುಡಿಯವ ನೀರಿಗೆ ಅನುದಾನ ನೀಡುವ ಪ್ರಯತ್ನ ಬಗ್ಗೆ ಚರ್ಚಿಸಿದ್ದೇವೆ. ಅದನ್ನು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಿಎಂ ಗಮನಕ್ಕೆ ತರುತ್ತೇನೆ ಎಂದರು.

ಇನ್ನೂ ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅವರು, ಜಿಎಸ್‌ಟಿ ಹಳೇ ಹಾಕಿ ಇದೆ. ಅದನ್ನು ಕರ್ನಾಟಕಕ್ಕೆ ಕೊಡಬೇಕು. ಜೊತೆಗೆ ಹೊಸದಾಗಿ ನಮ್ಮ ತೆರಿಗೆ ಪಾಲು ನೀಡಬೇಕೆಂಬ ಬೇಡಿಕೆಯು ಇದೆ. ಜಲಜೀವನ್ ಮಿಷನ್ ಮೂಲಕ ಮನೆಮನೆಗೆ ಗಂಗೆ ಎಂದು ಹೇಳಿದ್ದಾರೆ. 50-50 ಅನುಪಾತದಲ್ಲಿ ಯೋಜನೆ ಜಾರಿ ಮಾಡಬೇಕು. ಕರ್ನಾಟಕ ಖರ್ಚು ಮಾಡಿದ ಹಣದ ಪೈಕಿ13 ಸಾವಿರ ಕೋಟಿ ಹಣ ಬರಬೇಕಿದೆ. ಇನ್ನೂ ಭದ್ರಾ ಮೇಲ್ದಂಡೆ ಯೋಜನೆಗೂ 5,300 ಕೋಟಿ ಹಣ ಘೋಷಣೆ ಮಾಡಿದ್ದರು, ಅದಿನ್ನು ಬಂದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಕೇಂದ್ರ ಬಜೆಟ್ ಮೇಲೆ ಕುರಿತಂತೆ ಇವೆಲ್ಲ ಬೇಡಿಕೆಗಳು ಇವೆ. ಬೇಡಿಕೆ ಪೂರೈಕೆ ಜೊತೆಗೆ ಹೊಸ ಯೋಜನೆಯನ್ನು ಕೊಡಬೇಕು. ಕಾಂಗ್ರೆಸ್ ಸರ್ಕಾರ ಅನ್ನೋದನ್ನು ಹೊರತುಪಡಿಸಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ಮಾತ್ರವಲ್ಲದೇ ಬೇರೆ ಬೆರೆ ಜಿಲ್ಲೆಗಳಿಗಾದರೂ ಹೊಸ ಯೋಜನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪಿಐ ಗೋವಿಂದರಾಜು ಭ್ರಷ್ಟಾಚಾರ: ಭಾರೀ ಮುಜುಗರ
ಪಿಐ ಗೋವಿಂದರಾಜು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ನನ್ನ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ಕಮಿಷನರ್ ಗೆ ಹೇಳಿ ಅವರನ್ನು ಅಮಾನತು ಮಾಡಿದ್ದೇವೆ. ಮುಂದಿನ ಕ್ರಮವನ್ನು ಜರುಗಿಸಲಿದ್ದೇವೆ. ಪೋಲಿಸ್ ಸಮ್ಮೇಳನದಲ್ಲಿ ಭ್ರಷ್ಟಾಚಾರದ ಬಗ್ಗೆ ಎಚ್ಚರಿಸಿದ್ದೆವು. ಪದೇ ಪದೇ ಇಂಥಹ ಘಟನೆ ಆದಾಗ ಸರ್ಕಾರಕ್ಕೆ ಮುಜುಗರ ಆಗುತ್ತದೆ.
ನೂರಕ್ಕೂ ಹೆಚ್ಚು ಜನ ಪೊಲೀಸರನ್ನು ಬೇರೆ ಬೇರೆ ಕಾರಣಗಳಿಂದ ಅಮಾನತು ಮಾಡಿದ್ದೇವೆ. ಅದರಲ್ಲಿ ಭ್ರಷ್ಟಾಚಾರ ಮಾಡಿದವರು ಇದ್ದಾರೆ. ಭ್ರಷ್ಟಾಚಾರ ಆದ ಮೇಲೆ ಕ್ರಮ ತಗೆದುಕೊಳ್ಳುವುದು ಬೇರೆ. ಆದರೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬ ಮನಸ್ಸು ಪೊಲೀಸರಿಗೂ ಇರಬೇಕು. ಹಾಗಾದಿದ್ದಲ್ಲೆ ಗೃಹ ಇಲಾಖೆ, ಸರ್ಕಾರ ಮತ್ತು ವೈಯಕ್ತಿಕವಾಗಿ ನಮಗೂ ಮುಜುಗರ ಆಗುತ್ತಿದೆ ಎಂದು ಒಪ್ಪಿಕೊಂಡಿರುವ ಅವರು ಇಂಥಹ ಘಟನೆ ಮರುಕಳಿಸದಂತೆ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಡ್ರಗ್ಸ್ ಪತ್ತೆ: ಬಿಜೆಪಿ ಟೀಕೆಗೆ ಪ್ರತಿಕ್ರಿಯೆ
ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಡ್ರಗ್ಸ್ ತಡೆಯುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ನಿತ್ಯವೂ ದಾಳಿ ಮಾಡುತ್ತಲೇ ಇದ್ದೇವೆ. ಡ್ರಗ್ಸ್ ವ್ಯವಹಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತದೆ. ಥೈಲ್ಯಾಂಡ್ ನಿಂದ ಡ್ರಗ್ ಸರಬರಾಜು ಆಗುವ ಮಾಹಿತಿ ಇದೆ. ಅದನ್ನು ಪತ್ತೆ ಮಾಡುತ್ತಿದ್ದೇವೆ. ಈಗ ಹೊಸದಾಗಿ ಹೈಡ್ರೋ ಗಾಂಜಾ ಬರುತ್ತಿದೆ. ನಿತ್ಯವೂ ಒಂದಲ್ಲ ಒಂದು ದಿವಸ ಐದರಿಂದ ಹತ್ತು ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಸಿಗುತ್ತಲೇ ಇದೆ.
ಇನ್ನೂ ಮೈಸೂರು ಪ್ರಕರಣದಲ್ಲಿ, ಕರ್ನಾಟಕದಿಂದ ಹೋದವವರೊಬ್ಬರ ಕಾರು ಸಿಕ್ಕಿ ಹಾಕಿಕೊಂಡಾಗ ಅದರಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಆ ವ್ಯಕ್ತಿಯನ್ನು ಟ್ರ್ಯಾಕ್ ಮಾಡಿದಾಗ ಫೀನಾಯಿಲ್ ಫ್ಯಾಕ್ಟರಿ ಮಾದರಿ ಸೆಟ್ ಅಪ್ ಮಾಡಿಕೊಂಡು ಇದೆಲ್ಲ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಆದರೆ ಮೈಸೂರಲ್ಲಿ ಎನ್‌ಸಿಬಿ ಪತ್ತೆ ಮಾಡಿದ ಡ್ರಗ್ ಅನ್ನು ಕರ್ನಾಟಕದಲ್ಲಿ ಸಿಕ್ಕಿದೆ ಎಂದು ಪ್ರಕಟಣೆ ಕೊಟ್ಟಿದ್ದು ನೋಡಿ ಆಶ್ಚರ್ಯವಾಗಿದೆ. ಮೈಸೂರಿಗೆ ಭೇಟಿ ನೀಡಿದಾಗ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.
ವರ್ಗಾವಣೆಗೆ ಲಂಚ ತಗೆದುಕೊಳ್ಳುತ್ತಿರುವುದಕ್ಕೆ ಪೊಲೀಸರು ಭ್ರಷ್ಟರಾಗಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ ಸಚಿವರು, ಈ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ಲಂಚ ತಗೆದುಕೊಳ್ಳೋದಕ್ಕೆ ಯಾವುದು ಕಾರಣವಿದೆ ಎಂದು ನೋಡೋಣ. ನಮಗೆ ಜವಾಬ್ದಾರಿ ಇದೆ. ಜನರಿಗೆ ನಾವು ಉತ್ತರ ಕೊಡಬೇಕು. ಈ ತರಹದ ಘಟನೆ ಆಗದ ಹಾಗೇ ನೋಡಿಕೊಳ್ಳುತ್ತಿದ್ದೇನೆ. ಬೇರೆ ಬೇರೆ ಹಂತದಲ್ಲಿ ಏನಾದರೂ ಆಗಿದ್ದರೆ ಅದು ತನಿಖೆ ಬಳಿಕವೇ ಗೊತ್ತಾಗುತ್ತದೆ ಎಂದು ಸಬೂಬು ನೀಡಿದರು.












Click it and Unblock the Notifications