ಕಾಂಗ್ರೆಸ್ ತೆಕ್ಕೆಗೆ ಬಿದ್ದ ಆನಂದ್ ಸಿಂಗ್, ಪ್ರತಾಪ್ ಗೌಡ; ಬಿಜೆಪಿಗೆ ಭಾರೀ ನಿರಾಸೆ
ಬೆಂಗಳೂರು, ಮೇ 19: ಬಿಜೆಪಿ ತಟ್ಟೆಯಲ್ಲಿದ್ದ ರೊಟ್ಟಿ ಜಾರಿ ಕಾಂಗ್ರೆಸ್ ತಟ್ಟೆಗೆ ಬಿದ್ದಿದೆ. ಇಲ್ಲಿಯವರೆಗೆ ಬಿಜೆಪಿ ಶಾಸಕರ ವಶದಲ್ಲಿದ್ದರು ಎನ್ನಲಾಗಿದ್ದ ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಬ್ಬರೂ ಕಾಂಗ್ರೆಸ್ ಪಾಲಾಗಿದ್ದಾರೆ.
ಇಂದು ಬೆಳಿಗ್ಗೆಯಿಂದ ಇಬ್ಬರೂ ಎಲ್ಲಿದ್ದಾರೆ ಎನ್ನುವುದರ ಬಗ್ಗೆ ಕ್ಷಣಕ್ಕೊಂದು ತಿರುವುಗಳು ಸಿಗುತ್ತಿತ್ತು. ಕೊನೆಗೆ ಇಬ್ಬರೂ ಹೋಟೆಲ್ ಗೋಲ್ಡ್ ಫಿಂಚ್ ನಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು.
ನಂತರ ಹೋಟೆಲ್ ಗೆ ಸ್ವತಃ ಡಿಜಿಪಿ ನೀಲಮಣಿ ರಾಜು ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಭೇಟಿ ನೀಡಿ ಶಾಸಕರಿಗೆ ಭದ್ರತೆ ನೀಡಿದರು.

ನಂತರ ಇಬ್ಬರೂ ಶಾಸಕರು ಸಿನಿಮೀಯ ರೀತಿಯಲ್ಲಿ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದರು.
#WATCH: Dramatic visuals of the moment when Congress MLA Pratap Gowda Patil who was said to be missing, entered Vidhana Soudha. #KarnatakaFloorTest pic.twitter.com/XINBGZvped
— ANI (@ANI) May 19, 2018
ಪ್ರತಾಪ್ ಗೌಡ ಪಾಟೀಲ್ ಮೊದಲಿಗೆ ಆಗಮಿಸಿದರು. ಆಗಿನ್ನೂ ಅಧಿವೇಶನ ಆರಂಭವಾಗಿರಲಿಲ್ಲ. ನಂತರ ಅವರು ಕಾಂಗ್ರೆಸ್ ಶಾಸಕರ ಜೊತೆಗೆ ಊಟ ಸೇವಿಸಿದರು.
ಬಳಿಕ ಆನಂದ್ ಸಿಂಗ್ ಅವರಿಗಾಗಿ ವಿಧಾನಸೌಧದ ಮುಂಭಾಗ ಡಿಕೆಶಿ ಕಾಯುತ್ತಾ ಕುಳಿತಿದ್ದರು. ನಂತರ ಆನಂದ್ ಸಿಂಗ್ ಆಗಮಿಸುತ್ತಿದ್ದಂತೆ ಕೈ ಹಿಡಿದು ನೇರವಾಗಿ ಸದನಕ್ಕೇ ಕರೆದೊಯ್ದರು. ಸದನಕ್ಕೆ ನಗುತ್ತಲೇ ಆಗಮಿಸಿದ ಆನಂದ್ ಸಿಂಗ್ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ನಾಗೇಂದ್ರ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಕೈಕುಲುಕಿ ಹೋಗಿ ತಮ್ಮ ಆಸೀನದಲ್ಲಿ ಕುಳಿತುಕೊಂಡರು.
#WATCH Congress MLA Anand Singh who was said to be missing, sits with Congress's DK Shivakumar in the assembly. #floortest pic.twitter.com/0INIdju2fs
— ANI (@ANI) May 19, 2018
ಈ ಮೂಲಕ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರ ಹೈಡ್ರಾಮ ಕೊನೆಗೂ ಇಂದು ಅಂತ್ಯವಾಯಿತು.












Click it and Unblock the Notifications