ಸಿಇಟಿ ಸೀಟು ಹಂಚಿಕೆ ಅಕ್ರಮದ ಬಗ್ಗೆ ಸಿಐಡಿ ತನಿಖೆ
ಬೆಂಗಳೂರು, ಫೆ.19 : ಸಿಇಟಿ ಸೀಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತ ತನಿಖೆಯನ್ನು ಸರ್ಕಾರ ಮಂಗಳವಾರ ಸಿಐಡಿಗೆ ಒಪ್ಪಿಸಿದೆ. ಸಿಐಡಿ 2012-13 ಮತ್ತು 2013-14ನೇ ಸಾಲಿನ ಎರಡು ವರ್ಷಗಳ ಅವಧಿಯಲ್ಲಿ ನಡೆದ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಲಿದೆ.
ಸೀಟು ಹಂಚಿಕೆ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್ ವಿ ದೇಶಪಾಂಡೆ ಫೆ.3ರಂದು ಹೇಳಿದ್ದರು. ಸದ್ಯ ಅದನ್ನು ಕಾರ್ಯರೂಪಕ್ಕೆ ತಂದಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ ಎಸ್.ಪಿ.ಕುಲಕರ್ಣಿ ಆಡಳಿತಾವಧಿಯಲ್ಲಿ ನಡೆದಿರುವ ಸಿಇಟಿ ಸೀಟು ಹಂಚಿಕೆಯ ಅವ್ಯವಹಾರವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿದೆ. [ಸಿಇಟಿ ಸೀಟು ಹಂಚಿಕೆ ಹಗರಣ ಸಿಐಡಿ ತನಿಖೆಗೆ]

2013ನೇ ಸಾಲಿನ ಸಿಇಟಿ ಸೀಟು ಹಂಚಿಕೆಗೆ ನಡೆದ ಆನ್‌ಲೈನ್ ಪ್ರಕ್ರಿಯೆಯಲ್ಲಿ ಮೂಲ ದಾಖಲೆಯನ್ನು ಬದಲಾವಣೆ ಮಾಡಿ ಬೇರೆ ಕೊಟಾದಡಿ ಸೀಟು ಹಂಚಿಕೆ ಮಾಡಿರುವುದು ಪ್ರಾಥಮಿಕ ವರದಿಯಲ್ಲಿ ಸಾಬೀತಾಗಿದೆ. ಆದ್ದರಿಂದ ಆನ್‌ಲೈನ್ ವ್ಯವಸ್ಥೆ ಜಾರಿಯಾದ 2012ನೇ ಸಾಲಿನಲ್ಲೂ ಈ ರೀತಿಯ ಅಕ್ರಮ ನಡೆದಿರಬಹುದೆಂಬ ಹಿನ್ನಲೆಯಲ್ಲಿ ಎರಡೂ ವರ್ಷದ ಪ್ರಕರಣಗಳ ತನಿಖೆಗೆ ಆದೇಶಿಸಲಾಗಿದೆ.
ಸರ್ಕಾರದ ನಿರ್ದೇಶನದ ಅನ್ವಯ ಉನ್ನತ ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು 2012-13 ಮತ್ತು 2013-14ನೇ ಸಾಲಿನ ಸಿಇಟಿ ಸೀಟು ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ತನಿಖೆ ನಡೆಸುತ್ತಿರುವ ಸಿಐಡಿಗೆ ಹಸ್ತಾಂತರಿಸಿವೆ. ತನಿಖೆ ಮುಗಿದು ವರದಿ ಸರ್ಕಾರದ ಕೈ ಸೇರಿದ ಬಳಿಕ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಾಗಿದೆ.
ಸಿಇಟಿ ನಿಯಮಾವಳಿ 7ರ ಪ್ರಕಾರ ಜಾತಿ ಪ್ರಮಾಣ ಪತ್ರವನ್ನು 2ನೇ ಬಾರಿ ಪರಿಶೀಲನೆ ಮಾಡಲು ಅವಕಾಶವಿಲ್ಲ. ಆದರೆ ಮೇ 24ರಂದು 120 ವಿದ್ಯಾರ್ಥಿಗಳು 2ನೇ ಬಾರಿ ಜಾತಿ ಪ್ರಮಾಣಪತ್ರ ಪರಿಶೀಲನೆ ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 91 ಮಂದಿ ಅಭ್ಯರ್ಥಿಗಳ ಜಾತಿ ಪ್ರಮಾಣಪತ್ರವನ್ನು ಪರಿಶೀಲನೆ ಮಾಡಿದಾಗ 70 ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರ ಬದಲಾಗಿರುವುದು ಬೆಳಕಿಗೆ ಬಂದಿತ್ತು. ಈ ವಿದ್ಯಾರ್ಥಿಗಳಿಗೆ ಸರ್ಕಾರ ನೋಟಿಸ್ ಜಾರಿಗೊಳಿಸಿ ಉತ್ತರಿಸುವಂತೆ ಈಗಾಗಲೇ ಸೂಚನೆ ನೀಡಿದೆ.
ಸಿಇಟಿ ಸೀಟು ಹಂಚಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಅವರನ್ನು ಸಿಐಡಿ ವಿಚಾರಣೆ ನಡೆಸಲಿದೆ. ತನಿಖೆಯ ವರದಿ ಬಂದ ನಂತರ ಅವ್ಯವಹಾರದ ಸತ್ಯಾಂಶ ಬೆಳಕಿಗೆ ಬರಲಿದೆ.












Click it and Unblock the Notifications