ಆರ್ ಎಸ್ ಎಸ್ ಟಾರ್ಗೆಟ್ ಮಾಡಿದ್ಯಾ ಕಾಂಗ್ರೆಸ್ ಸರ್ಕಾರ: ಖಡಕ್ ಉತ್ತರ ಕೊಟ್ಟ ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್ 18: ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ ಎಸ್ ಎಸ್ ಟಾರ್ಗೆಟ್ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆರೋಪಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಆರ್ ಎಸ್ ಎಸ್ ಟಾರ್ಗೆಟ್ ಮಾಡಿಲ್ಲ. ಎಲ್ಲಾ ಸಂಘಟನೆಗಳಿಗೂ ಕೂಡ ಅನ್ವಯ ಆಗುವಂತೆ ಆದೇಶ ಮಾಡಿದ್ದೇವೆ. ಬಿಜೆಪಿ ಇದರಲ್ಲಿ ವಿನಾಕಾರಣ ರಾಜಕಾರಣ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ಜನರಿಗೆ ತೊಂದರೆಯಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲು ಅನುಮತಿ ಪಡೆಯುವಂತೆ ಆದೇಶ ನೀಡಲಾಗಿದ್ದು, ಇದರಲ್ಲಿ ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ಗೊಂದಲ ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಹಿಂದೆ ಬಿಜೆಪಿಯ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದಂತೆ , ನಮ್ಮ ಸರ್ಕಾರವೂ ಆದೇಶವನ್ನು ಹೊರಡಿಸಿದೆ. ಬಿಜೆಪಿ ಸರ್ಕಾರ ಹೊರಡಿಸಿದ್ದ ಈ ಆದೇಶಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಈ ಆದೇಶದಲ್ಲಿ ಸರ್ಕಾರ ಯಾವುದೇ ನಿರ್ದಿಷ್ಟ ಸಂಘಸಂಸ್ಥೆಯನ್ನು ಗುರಿ ಮಾಡಿಲ್ಲ. ಬಿಜೆಪಿ ಜನರ ಹಿತಚಿಂತನೆ ಮಾಡುವುದನ್ನು ಬಿಟ್ಟು ರಾಜಕೀಯದಲ್ಲಿ ತೊಡಗಿದ್ದಾರೆ. ಈ ವಿಷಯದಲ್ಲಿ ಸಮಾಜದ ಶಾಂತಿಭಂಗವಾಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ.
ಗುತ್ತಿಗೆದಾರರ ಬಾಕಿ ಪಾವತಿಯಾಗದಿದ್ದರೆ ಮಾನ್ಯ ರಾಜ್ಯಪಾಲರನ್ನು ಭೇಟಿಮಾಡುವುದಾಗಿ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇನ್ನೂ ಮೈಸೂರಿನ ಉದ್ಯೋಗ ಮೇಳ ಯಶಸ್ವಿಯಾಗಿರುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾ, ನಿನ್ನೆಯ ಉದ್ಯೋಗ ಮೇಳ ಯಶಸ್ವಿಯಾಗಿ ನೆರವೇರಿದ್ದು, ಈ ಕಾರ್ಯಕ್ರಮವನ್ನು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಂಘ ಪರಿವಾರ ಮತ್ತು RSS ನವರು ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದರು. ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಇವರ ಬಗ್ಗೆ ಎಚ್ಚರಿಕೆ ಇಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆಕೊಟ್ಟರು. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ. ಇವರು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಸಂಪಾದನೆ ಮಾಡಿದರು. ಬಳಿಕ ತಮ್ಮ ಜ್ಞಾನವನ್ನು ಬದುಕಿನುದ್ದಕ್ಕೂ ಸಮಾಜದ ಬದಲಾವಣೆಗೆ ಬಳಸಿದರು ಎಂದು ಮೆಚ್ಚುಗೆ ಸೂಚಿಸಿದರು.
ಅಂಬೇಡ್ಕರ್ ಅವರ ಹೆಸರಲ್ಲಿ ಬಿಜೆಪಿಯವರು, ಸಂಘ ಪರಿವಾರದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಸತ್ಯ ಏನೆಂದರೆ "ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ" ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಬರೆದಿದ್ದಾರೆ. ಇಂಥಾ ಸತ್ಯಗಳನ್ನು ಸಮಾಜದ ಮುಂದಿಟ್ಟು ಸಂಘ ಪರಿವಾರದ ಸುಳ್ಳುಗಳನ್ನು ಬಹಿರಂಗಗೊಳಿಸಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ನಾನು ಸ್ಥಾಪಿಸಿದ್ದು ಏಕೆಂದರೆ ಅವರನ್ನು ಓದಿಕೊಂಡವರು ಅವರ ಮಾರ್ಗದಲ್ಲಿ ನಡೆಯಲಿ ಉದ್ದೇಶದಿಂದ. ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಅವರೇ ಸಾಟಿ. ಮತ್ತೊಬ್ಬ ಅಂಬೇಡ್ಕರ್ ಬರಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಿ ಅವರ ಹಾದಿಯಲ್ಲಿ ನಡೆಯಬೇಕು ಎಂದರು.












Click it and Unblock the Notifications