ಚಿತ್ರದುರ್ಗ ಬಸ್ ಅಗ್ನಿ ದುರಂತ ಪ್ರಕರಣ: ಪ್ರಯಾಣಿಕರ ಲಗೇಜ್ ಕುರಿತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ
Chitradurga Bus Accident: ಚಿತ್ರದುರ್ಗದ ಬಳಿ ಸಂಭವಿಸಿದ ಖಾಸಗಿ ಬಸ್ ಅಗ್ನಿ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ರಾಶಿ ರಾಶಿ ಆಯಿಲ್ ಬಾಟಲಿಗಳ ಬಾಕ್ಸ್‌ಗಳು ಇದ್ದ ಕಾರಣ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಪ್ರಯಾಣಿಕರ ಲಗೇಜ್ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದೆ.
ಅದರಲ್ಲೂ ಕರ್ನೂಲ್‌ನಲ್ಲಿ ಖಾಸಗಿ ಬಸ್‌ನ ಬೆಂಕಿ ದುರಂತದ ಬಳಿಕ ರಾಜ್ಯದಲ್ಲಿಯೂ ಬಸ್ಸುಗಳಲ್ಲಿ ಪ್ರಯಾಣಿಕರ ಲಗೇಜ್, ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾನುಗಳ ಸಾಗಾಟಕ್ಕೆ ಅವಕಾಶ ಇಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.

ಚಿತ್ರದುರ್ಗದಲ್ಲಿ ದುರಂತಕ್ಕೆ ಒಳಗಾದ ಬಸ್‌ಗಳಲ್ಲಿ ಹೆಚ್ಚು ಲಗೇಜ್ ಇದ್ದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ. 2013ರಲ್ಲಿ ನಾನು ಸಾರಿಗೆ ಸಚಿವನಾಗುದ್ದಾಗ ಹಾವೇರಿಯಲ್ಲೂ ಇದೇ ರೀತಿ ಅಪಘಾತ ಆಗಿತ್ತು. ಆಗ ಎಮರ್ಜೆನ್ಸಿ ಎಕ್ಸಿಟ್ ಇರಲಿಲ್ಲ, ಲಕ್ಷುರಿ ಬಸ್ಸುಗಳಲ್ಲೂ ಗ್ಲಾಸ್ ಒಡೆದು ಹೊರಗಡೆ ಬರಬೇಕಾದ ಪರಿಸ್ಥಿತಿ ಇತ್ತು. ಈಗ ಸಾರಿಗೆ ಇಲಾಖೆಯ 25,000 ಬಸ್ಸುಗಳು ಸೇರಿ ಎಲ್ಲಾ ಖಾಸಗಿ ಮತ್ತು ಶಾಲಾ ಬಸ್ಸುಗಳಿಗೆ ಎಮರ್ಜೆನ್ಸಿ ಎಕ್ಸಿಟ್ ಇದೆ ಎಂದು ಹೇಳಿದರು.
ಸಾರ್ವಜನಿಕ ಸಾರಿಗೆಗಳಲ್ಲಿ ತುರ್ತು ನಿರ್ಗಮದ ಬಾಗಿಲುಗಳಿಲ್ಲದಿದ್ದರೆ ಭೌತಿಕ ಕ್ಷಮತೆ ದೃಢೀಕರಣ ಪತ್ರ - ಎಫ್‌ಸಿ ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಬಸ್‌ಗಳಲ್ಲಿ ಯಾವುದೇ ರೀತಿಯ ಸ್ಫೋಟಕಗಳನ್ನು ಸಾಗಿಸಬಾರದು. ಪ್ರಯಾಣಿಕರನ್ನು ಹೊರತುಪಡಿಸಿ ಅನಗತ್ಯ ಲಗೇಜ್‌ಗಳನ್ನು ಸಾಗಣೆ ಮಾಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಐವರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ: ಇನ್ನೂ ಹಿರಿಯೂರು ಬಳಿ ನಡೆದ ಸೀಬರ್ಡ್ ಬಸ್ ದುರಂತದಲ್ಲಿ ಮೃತಪಟ್ಟ ಐವರ ಮೃತದೇಹದ ಗುರುತು ಡಿಎನ್‌ಎ ವರದಿಯಿಂದ ಪತ್ತೆಯಾಗಿದ್ದು, ಶವಗಳನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಸೀಬರ್ಡ್ ಬಸ್‌ನಲ್ಲಿ ಗೋಕರ್ಣ ಶಿವಮೊಗ್ಗ ಹಾಗೂ ಕುಮಟಕ್ಕೆ ತೆರಳಲು ಒಟ್ಟು 32 ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಈ ಬಸ್‌ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊರ್ಲಡಕು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿಕ್ಕಿ ಹೊಡೆದಿತ್ತು. ದುರಂತದಲ್ಲಿ ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ಸುಟ್ಟು ಕರಕಲಾಗಿದ್ದರು. ಮೃತದೇಹ ಕರಕಲಾಗಿದ್ದ ಕಾರಣ ಗುರುತು ಪತ್ತೆ ಆಗಿರಲಿಲ್ಲ. ಈ ಹಿನ್ನೆಲೆ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಬಂದಿದ್ದು, ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications