"ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮಂಗಳೂರು ಬಿಟ್ಟು ಬೆಂಗಳೂರು, ಮೈಸೂರಿಗೆ ಬರುತ್ತಿದ್ದಾರೆ"
ಕರ್ನಾಟಕದಲ್ಲಿ ಗೋಮುಗಲಭೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕರಾವಳಿಯ ಜೊತೆಗೆ ಉಳಿದ ಜಿಲ್ಲೆಗಳಲ್ಲೂ ಕೋಮುಗಲಭೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಕೋಮುಗಲಭೆ ಹಾಗೂ ಯುವಕರ ಕೈಗೆ ಸುಲಭವಾಗಿ ಡ್ರಗ್ಸ್ ಸಿಗುತ್ತಿರುವ ಬಗ್ಗೆ ಭಾರೀ ಚರ್ಚೆ ನಡೆದಿದೆ. ಅತ್ಯಂತ ಸುಲಭವಾಗಿ ಕೆಲವು ಯುವಕರ ಕೈಗೆ ಡ್ರಗ್ಸ್ ಸಿಗುತ್ತಿದ್ದು ಫೋಷಕರಲ್ಲಿ ಆತಂಕ ಮೂಡಿಸಿದೆ. ಈ ಎರಡೂ ವಿಚಾರಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಯಾವ ಕಾರಣಕ್ಕೆ ಈ ಎರಡೂ ಸಮಸ್ಯೆಗಳು ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ ಎನ್ನುವುದರ ಬಗ್ಗೆ ಅವರು ಮಾತನಾಡಿದ್ದಾರೆ.
ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿರುವ ವಾರ್ಷಿಕ ಸಮಾವೇಶದಲ್ಲಿ, ಪೊಲೀಸ್ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಪ್ರಕಾರ, ಕರಾವಳಿ ಭಾಗದಲ್ಲಿ ಸೌಹಾರ್ದತೆ ಕಾಪಾಡಲು ವಿವಿಧ ಧಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ನಿರಂತರವಾಗಿ ಸಭೆ ನಡೆಸಬೇಕು. ದ್ವೇಷ ಭಾಷಣ, ಪ್ರಚೋದನಾತ್ಮಕ ಭಾಷಣ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಿ. ಇದೇ ಕಾರಣದಿಂದ ಆ ಭಾಗದ ಜನ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮಂಗಳೂರು ಬಿಟ್ಟು ಬೆಂಗಳೂರು, ಮೈಸೂರಿಗೆ ಕಳುಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೋಮು ಗಲಾಟೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಇರಲಿಲ್ಲ. ಈಗ ಆ ಜಿಲ್ಲೆಗೂ ವ್ಯಾಪಿಸಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸದಿದ್ದಲ್ಲಿ ರಾಜ್ಯದಾದ್ಯಂತ ಮುಂದುವರಿಯುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಪೋಸ್ಟ್ ಹಾಕುವರ ವಿರುದ್ಧ, ಫೇಕ್ ನ್ಯೂಸ್ ಹರಡುವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ಆ್ಯಕ್ಷನ್ ಪ್ಲಾನ್ ರೂಪಿಸುವಂತೆ ಸೂಚನೆ ನೀಡಿದರು.
ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ಮಾದಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸಾಗಣೆಯಾಗುತ್ತಿದೆ. ಯುವಕರ ಕೈಗೆ ಗಾಂಜಾ ಸುಲಭವಾಗಿ ಸಿಗುತ್ತಿದೆ ಎಂಬುದರ ಸಾರ್ವಜನಿಕ ವಲಯದಲ್ಲಿ ತೀವ್ರ ಬೇಸರವಿದೆ. ಇದನ್ನು ಸಂಪೂರ್ಣವಾಗಿ ಮಟ್ಟಹಾಕಲು ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯವಹಿಸಿದರೆ ಯುವಜನತೆಯ ಭವಿಷ್ಯ ಹಾಳಾಗುತ್ತದೆ. ರಾಜ್ಯವನ್ನು ಉಡ್ತಾ ಪಂಜಾಬ್‌ನಂತೆ ಆಗಲು ಬಿಡಬಾರದು ಎಂದಿದ್ದಾರೆ.
ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇಂದು ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆ ನಡೆಸಿದರು. ಪೊಲೀಸ್ ಪ್ರಗತಿ ಪರಿಶೀಲನೆ ನಡೆಸಿ, ಸುವ್ಯವಸ್ಥೆ ಕುರಿತಂತೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾ, ಸಿಐಡಿ ಸೈಬರ್ ಅಪರಾಧಗಳು ಮತ್ತು ಮಾದಕ ವಸ್ತು ವಿಭಾಗದ ಪೊಲೀಸ್ ಮಹಾನಿರ್ದೇಶಕರಾದ ಡಾ.ಪ್ರಣವ್ ಮಹಾಂತಿ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿ ಪ್ರಶಾಂತ್ ಕುಮಾರ್ ಠಾಕೂರ್, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಡಿಜಿ ಮಾಲಿನಿ ಕೃಷ್ಣಮೂರ್ತಿ ಹಾಗೂ ರಾಜ್ಯದ ಎಲ್ಲಯಗಳ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದರು.












Click it and Unblock the Notifications