ಇದು ಸಿದ್ದರಾಮಯ್ಯ ಸರ್ಕಾರ ಅಲ್ಲ, ಸಿದ್ದರಾಮಯ್ಯ ಸರ್ಕಸ್!
ಬೆಂಗಳೂರು, ಅಕ್ಟೋಬರ್ 11: ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವ ಪಕ್ಷದಲ್ಲಿಯೇ ವಿರೋಧ ಎದುರಿಸುತ್ತಿದ್ದಾರೆಯೇ?. ರಾಜ್ಯದ ಪ್ರತಿಪಕ್ಷ ಬಿಜೆಪಿ ಪ್ರಕಾರ ಹೌದು. ರಾಜ್ಯದ ಜ್ವಲಂತ ಸಮಸ್ಯೆಗಳ ಜೊತೆ ಸಿದ್ದರಾಮಯ್ಯ ಪಕ್ಷದ ನಾಯಕರಿಂದಲೇ ಸಮಸ್ಯೆ ಎದುರಿಸುತ್ತಿದ್ದಾರೆ.
ಬಿಜೆಪಿ ಕರ್ನಾಟಕ ಬುಧವಾರ ಟ್ವೀಟ್ ವೊಂದನ್ನು ಮಾಡಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕಿಸಿದೆ. 'ದಿನಕ್ಕೊಬ್ಬರಿಂದ ಛೀ.. ಥೂ..., ದಿನಕ್ಕೊಬ್ಬರ ಅಸಮಾಧಾನದೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿದ್ದರಾಮಯ್ಯರವರ ಸರ್ಕಾರ, ಅಲ್ಲ ಅಲ್ಲಾ, ಸಿದ್ದರಾಮಯ್ಯರವರ ಸರ್ಕಸ್...' ಎಂದು ಲೇವಡಿ ಮಾಡಿದೆ.

ಬಿಜೆಪಿ ಟ್ವೀಟ್ ಹೇಳುವುದೇನು?
* 'ನನ್ನೂ ಮಂತ್ರಿ ಮಾಡಿ'...
* 'ಲಿಂಗಾಯತ್ ವಿರೋಧಿ ಸಿಎಂ'...
* 'ಹಿಂದುಳಿದ ವರ್ಗ ತುಳಿಯುತ್ತಿರುವ ಸಿಎಂ'...
* 'ನಮ್ಮ್ ಸರ್ಕಾರ ಇದ್ರು, ನಾವೇ ದುಡ್ಡು ಕೊಡಬೇಕು ಸಾರ್'...
* 'ಮೂರು DCM ಮಾಡಿ, ನೋ ನೋ, ಆರು DCM ಮಾಡಿ'...
ಎಂದು ಕರ್ನಾಟಕ ಬಿಜೆಪಿ ಪಟ್ಟಿಯೊಂದನ್ನು ನೀಡಿದೆ ಮತ್ತು 'ಇನ್ನಷ್ಟು, ಮತ್ತಷ್ಟು ಸ್ವಪಕ್ಷೀಯರ ಸೂಪರ್ ಹಿಟ್ ಡೈಲಾಗ್‌ಗಳಿಗೆ Keep Following ಸಿದ್ದರಾಮಯ್ಯರವರ ಸರ್ಕಸ್...' ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಆಡಳಿತದ ಬಗ್ಗೆ ಬಿಜೆಪಿ ಸರಣಿ ಟ್ವೀಟ್ ಮಾಡುತ್ತಿದೆ. 'ಬರದ ಬೇಗೆಯಲ್ಲಿ ಬಸವಳಿಯುತ್ತಿದ್ದ ರಾಜ್ಯದ ಜನತೆಗೆ, ಈಗ ಗಾಯದ ಮೇಲೆ ಉಪ್ಪು ಸುರಿದಂತೆ ಲೋಡ್ ಶೆಡ್ಡಿಂಗ್ ಹೊರೆಯನ್ನು ಹೊರೆಸಿದೆ ಕಾಂಗ್ರೆಸ್ ಸರ್ಕಾರ. ಗ್ರಾಮೀಣ ಪ್ರದೇಶದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಒಂದು ಗಂಟೆ ಸಹ ಮೂರು ಫೇಸ್ ವಿದ್ಯುತ್ ಪೂರೈಸದೆ, ರೈತರ ಹೊಲದಲ್ಲಿನ ಬೆಳೆಗಳು ಒಣಗುತ್ತಿವೆ. ಅತ್ತ ಮೂರು ಫೇಸ್ ವಿದ್ಯುತ್ ಇಲ್ಲ, ಇತ್ತ ಗೃಹ ಬಳಕೆಗೆ ಸಿಂಗಲ್ ಫೇಸ್ ವಿದ್ಯುತ್ ಸಹ ಇಲ್ಲ. ಕರ್ನಾಟಕ ಈ ರೀತಿ ಕತ್ತಲಲ್ಲಿ ಮುಳುಗಿರುವುದು ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲು' ಎಂದು ಹೇಳಿದೆ.
ಬರಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ಸಹ ಬಿಜೆಪಿ ಆರೋಪ ಮಾಡಿದೆ. 'ಬರ ನಿರ್ವಹಣೆಯ ವಿಚಾರದಲ್ಲಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ
ಕಾಂಗ್ರೆಸ್ ಸರ್ಕಾರದ ಎಡವಟ್ಟುಗಳು!' ಎಂದು ಬಿಜೆಪಿ ಪಟ್ಟಿಯೊಂದನ್ನು ನೀಡಿದೆ.
* ಮುಂಗಾರು ಕೈಕೊಟ್ಟಾಗ ಎಚ್ಚೆತ್ತುಕೊಳ್ಳದೆ ಮೈಮರೆತು ಕೂತಿದ್ದು..!
* ಬರಗಾಲ ಘೋಷಣೆ ಮಾಡದೆ ಕಾವೇರಿ ವಿಚಾರ ಮುಂದಿಟ್ಟು ಕಾಲಹರಣ ಮಾಡಿದ್ದು..!
* ಕಾವೇರಿ ವಿಚಾರದಲ್ಲಿ ಸ್ಟಾಲಿನ್ ಸರ್ಕಾರದ ವಿರುದ್ಧ ನಿಲುವಳಿ ಮಂಡಿಸದೆ ಪುಕ್ಕಲುತನ ತೋರಿದ್ದು..!
* ಬರ ಪೀಡಿತ ಪಟ್ಟಿಯಿಂದ ಹಲವು ತಾಲೂಕುಗಳನ್ನು ಕೈ ಬಿಟ್ಟಿದ್ದು..!
* ಕೇಂದ್ರ ತಂಡ ಪರಿಶೀಲನೆ ಮಾಡಿ ಹೋದ ಮೇಲೆ ಮತ್ತೆ 21 ತಾಲೂಕು ಸೇರಿಸಲು ಮುಂದಾಗಿದ್ದು..!
* ಸಿದ್ದರಾಮಯ್ಯ ಅವರು ಹಸಿರು ಬರವೆಂದು ಬರ ಅಧ್ಯಯನ ತಂಡದ ದಾರಿ ತಪ್ಪಿಸಿದ್ದು..!
* ಕೇಂದ್ರದ ಬರ ಅಧ್ಯಯನ ತಂಡಕ್ಕೆ ಸರಿಯಾದ ಮಾಹಿತಿ ನೀಡದೆ ಕಳುಹಿಸಿದ್ದು..!
ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಕರ್ನಾಟಕ ಹೈಕೋರ್ಟ್ ಆದೇಶವೊಂದನ್ನು ಉಲ್ಲೇಖ ಮಾಡಿದೆ. 'ರಾಜ್ಯದಲ್ಲಿ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಮಿಕ್ಕೆಲ್ಲಾ ಹಳವಂಡಗಳನ್ನು ಮಾಡುತ್ತಿರುವ ಸಿದ್ದರಾಮಯ್ಯ ಅವರ ಅಸಮರ್ಥ ಅಡಳಿತಕ್ಕೆ ಬೇಸತ್ತು ಹೈಕೋರ್ಟ್ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಶಾಲೆಗಳನ್ನು ದುಸ್ಥಿತಿಗೆ ತಳ್ಳಿ ಬಡ ಮಕ್ಕಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಸರ್ಕಾರಿ ಶಾಲೆಗಳನ್ನು ಉಳಿಸಬೇಕಾದ ಸರ್ಕಾರ, ಸರ್ಕಾರಿ ಸೌಲತ್ತಿನಲ್ಲಿ ಮಜಾ ಮಾಡುತ್ತಾ ಡೆಲ್ಲಿ, ಫಾರಿನ್ ಟೂರ್ ಮಾಡುತ್ತಿದೆ' ಎಂದು ಟೀಕಿಸಿದೆ.












Click it and Unblock the Notifications