Shivamogga Subbanna : ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಬೆಂಗಳೂರು, ಆಗಸ್ಟ್ 12- ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂಗೀತ ಪರಂಪರೆಯ ಮನೆತನದಿಂದ ಬಂದ ಸುಬ್ಬಣ್ಣ ಅವರು ಸುಗಮ ಸಂಗೀತ ಹಾಗೂ ಚಲನ ಚಿತ್ರ ಹಿನ್ನಲೆ ಗಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದರು.
ಅವರ ' ಕಾಡು ಕುದುರೆ ಓಡಿ ಬಂದಿತ್ತಾ ' ಗೀತೆಯು ಇಂದಿಗೂ ಅಭಿಮಾನಿಗಳು ಗುನುಗುನಿಸುವ ಹಾಡು. ಇದಕ್ಕಾಗಿ ಭಾರತ ಸರ್ಕಾರದ ರಜತ ಕಮಲ ಪ್ರಶಸ್ತಿಗೂ ಭಾಜನರಾದರು. ಸಂತ ಶಿಶುನಾಳ ಶರೀಫರ ಗೀತೆಗಳಿಗೆ ದನಿಯಾಗಿ ಅವುಗಳನ್ನು ಇನ್ನಷ್ಟು ಎತ್ತರಕ್ಕೆ ಒಯ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ಶಿವಮೊಗ್ಗ ಸುಬ್ಬಣ್ಣ ನಿಧನದಿಂದ ಸುಗಮ ಸಂಗೀತ ಕ್ಷೇತ್ರದ ಒಬ್ಬ ಶ್ರೇಷ್ಠ ಗಾಯಕನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಾಂಸ್ಕೃತಿಕ ಲೋಕದ ರಾಯಭಾರಿ:
ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯವರಾದ ಶ್ರೀಯುತರು, ಕರ್ನಾಟಕದ ಸಾಂಸ್ಕೃತಿಕ ಲೋಕದ ರಾಯಬಾರಿ ಗಳಲ್ಲಿ ಒಬ್ಬರಾಗಿದ್ದರು. ಸಂಗೀತ ಕ್ಷೇತ್ರದಲ್ಲಿ ತಮ್ಮ ಅಧ್ಬುತ ಕಂಠಸಿರಿ ಗೆ ಹೆಸರಾಗಿದ್ದ ಸುಬ್ಬಣ್ಣ ನವರು, ಕನ್ನಡ ಚಿತ್ರರಂಗಕ್ಕೆ ಪ್ರಪ್ರಥಮ ರಾಷ್ಟ್ರಮಟ್ಟದ ರಜತಕಮಲ ಪ್ರಶಸ್ತಿ ದೊರಕಿಸಿ ಕೊಟ್ಟವರು. ಸುಗಮ ಸಂಗೀತ ಹಾಗೂ ಚಲನ ಚಿತ್ರ ಹಿನ್ನಲೆ ಗಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದ ಸುಬ್ಬಣ್ಣವರ ನಿಧನದಿಂದ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಆದ ದೊಡ್ಡ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಪ್ರಾರ್ಥಿಸುವುದಾಗಿ ಗೃಹ ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ನಾಡಿಗೆ ಬಹದೊಡ್ಡ ನಷ್ಟ:
ಸುಗಮ ಸಂಗೀತ ಲೋಕದ ಅನನ್ಯ ಪ್ರತಿಭೆ, ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಕುವೆಂಪು, ಬೇಂದ್ರೆ ಸೇರಿ ಹೆಸರಾಂತ ಕವಿಗಳ ಗೀತೆಗಳಿಗೆ ಸ್ವರ ಕಟ್ಟಿದ ಸುಬ್ಬಣ್ಣ ಅವರ ಅಗಲಿಕೆ ನಾಡಿಗೆ ಬಹದೊಡ್ಡ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುಬ್ಬಣ್ಣ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರು, ಅವರ ಸಂಗೀತ ಪರಿವಾರ ಹಾಗೂ ನಾಡಿನ ಜನತೆಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications