ಕೇರಂ, ಚೆಸ್ ಆಟಗಳಿಗೆ ಪೊಲೀಸ್ ಅನುಮತಿ ಅನಗತ್ಯ; ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 19; ಸದಸ್ಯರಿಗೆ ಮಾತ್ರ ಪ್ರವೇಶವಿರುವ ಕ್ಲಬ್‌ಗಳಲ್ಲಿ ಕೇರಂ, ಚೆಸ್, ರಮ್ಮಿ, ಸ್ನೂಕರ್ ಮತ್ತಿತರ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪರವಾನಗಿ ಪಡೆಯಲು ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.
ಇದರಿಂದಾಗಿ ಕ್ಲಬ್‌ಗಳ ಮೇಲೆ ದಿನವೂ ನಡೆಯುತ್ತಿರುವ ಪೊಲೀಸರ ಕಿರುಕುಳ ತಗ್ಗಲಿದೆ.
ಅಲ್ಲದೆ, ಪ್ರತಿಯೊಂದು ಸಂಘ, ಸೊಸೈಟಿ ಅಥವಾ ಕ್ಲಬ್ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿವೆ ಎಂದು ಪೊಲೀಸರು ಊಹಿಸಿಕೊಳ್ಳಬಾರದು. ಪೊಲೀಸ್ ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಅಧಿಕಾರ ಬಳಸಬೇಕು ಎಂದೂ ನ್ಯಾಯಾಲಯ ಸೂಚ್ಯವಾಗಿ ಹೇಳಿದೆ.
ಆದರೆ, ಕ್ಲಬ್ ಆವರಣದಲ್ಲಿಯಾವುದೇ ಅಕ್ರಮ ಚಟುವಟಿಕೆಗಳು ನಡೆಸಬಾರದು. ಈ ವಿಚಾರದಲ್ಲಿ ಅಗತ್ಯ ಬಿದ್ದರೆ ಪರಿಶೀಲನೆ ನಡೆಸಿ ಕ್ಲಬ್ ಚಟುವಟಿಕೆಗಳ ಸ್ವರೂಪ ತಿಳಿಯಲು ಪೊಲೀಸ್ ಪ್ರಾಧಿಕಾರಗಳು ಮುಕ್ತವಾಗಿವೆ ಎಂದಿರುವ ನ್ಯಾಯಾಲಯ, ಅರ್ಜಿದಾರ ಕಬ್ಲ್‌ನ ಕಾನೂನಾತ್ಮಕ ಚಟುವಟಿಕೆಗಳಿಗೆ ಅಡ್ಡಿಪಡಿಸಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ.

ಚೆಸ್ ಹಾಗೂ ಕೇರಂ ಸೇರಿ ಮನೋರಂಜನಾ ಚಟುವಟಿಕೆ ನಡೆಸಲು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆಯಬೇಕೆಂದು ಒತ್ತಾಯಿಸಿದ ಪೊಲೀಸರ ಕ್ರಮ ಪ್ರಶ್ನಿಸಿ ಮೈಸೂರಿನ ಲಕ್ಷ್ಮೀದೇವಿ ರಿಕ್ರಿಯೇಷನ್ ಕ್ಲಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಕೋರ್ಟ್ ಏನು ಹೇಳಿದೆ?; ಕ್ಲಬ್ ತನ್ನ ಸದಸ್ಯರಿಗೆ ಮನರಂಜನಾ ಚಟುವಟಿಕೆ ಒದಗಿಸುವ ಸಂಘವಾಗಿದೆ. ಉಚಿತವಾಗಿ ಹಾಗೂ ಯಾವುದೇ ಮೊತ್ತ ಪಾವತಿಸಿ ಪ್ರವೇಶ ಕೋರಲು ಸಾರ್ವಜನಿಕ ಸದಸ್ಯರು ಅರ್ಹರಿಲ್ಲ. ಸದಸ್ಯರಿಗೆ ಮಾತ್ರ ಪ್ರವೇಶವಿದೆ. ಹಾಗಾಗಿ, ಯಾವುದೇ ಕ್ಲಬ್ ಅಥವಾ ಸಂಘವು ಮನೋರಂಜನಾ ಚಟುವಟಿಕೆ ಆಯೋಜಿಸಲು ಯಾವುದೇ ಅನುಮತಿ ಅಥವಾ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದೆ.
ಜತೆಗೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆಯುವಂತೆ ಪೊಲೀಸರು ಒತ್ತಾಯ ಮಾಡುತ್ತಿರುವುದು ಏಕಪಕ್ಷೀಯ ಮತ್ತು ನ್ಯಾಯಸಮ್ಮತವಲ್ಲದ ಕ್ರಮವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರವೇನು?; ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಟಿ. ಮೇಘದಹಳ್ಳಿ ಗ್ರಾಮದ 'ಸಿಗರಳ್ಳಿ ಲಕ್ಷ್ಮಿದೇವಿ ರಿಕ್ರಿಯೇಷನ್ ಕ್ಲಬ್' 2022ರ ಏ.13ರಂದು ನೋಂದಣಿಯಾಗಿತ್ತು. ಚೆಸ್, ಕೇರಂ, ಬಿಲಿಯರ್ಡ್‌ರ್/ ಸ್ನೂಕರ್ ಸೇರಿದಂತೆ ಇನ್ನಿತರ ಒಳಾಂಗಣ ಕ್ರೀಡೆ ಮತ್ತು ಹೊರಾಂಗಣ ಕ್ರೀಡೆ ನಡೆಸುವುದಕ್ಕೆ ಅನುಮತಿ ಕೋರಿ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ತಲಕಾಡು ಪೊಲೀಸ್ ಠಾಣಾಧಿಕಾರಿಗೆ ಮನವಿ ಸಲ್ಲಿಸಿತ್ತು.
ಆದರೆ, ಮನೋರಂಜನಾ ಕ್ರೀಡೆ ನಡೆಸಲು ಅನುಮತಿ ನೀಡುವುದಕ್ಕೆ ಪೊಲೀಸರು ನಿರಾಕರಿಸಿದ್ದರು. ಅಲ್ಲದೆ, ಈ ಮನೋರಂಜನೆ ಚಟುವಟಿಕೆ ನಡೆಸಲು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪರವಾನಗಿ ಪಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದರು.
ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಕ್ಲಬ್, ತನ್ನೆಲ್ಲಾ ಸದಸ್ಯರಿಗೆ ಪ್ರಯೋಜನವಾಗುವಂತೆ ರಮ್ಮಿ, ಚೆಸ್, ಕೇರಂ, ಬಿಲಿಯರ್ಡ್‌ರ್/ ಸ್ನೂಕರ್ ಸೇರಿ ಒಳಾಂಗಣ ಕ್ರೀಡೆ ಮತ್ತು ಹೊರಾಂಗಣ ಕ್ರೀಡೆ ನಡೆಸುವುದಕ್ಕೆ ಸಾರ್ವಜನಿಕ ಮನೋರಂಜನಾ ಸ್ಥಳಗಳ ಪರವಾನಗಿ ಮತ್ತು ನಿಯಂತ್ರಣ ನಿಯಮಗಳ ಅಡಿಯಲ್ಲಿ ಪರವಾನಗಿ ಅಥವಾ ಅನುಮತಿ ಪಡೆಯುವ ಅಗತ್ಯವಿಲ್ಲಎಂಬುದಾಗಿ ಘೋಷಿಸಬೇಕು. ಮನೋರಂಜನಾ ಚಟುವಟಿಕೆಗಳನ್ನು ನಡೆಸಲು ಅನುಮತಿ ಪಡೆಯಲು ಒತ್ತಾಯಿಸದಂತೆ ಪೊಲೀಸ್ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯವನ್ನು ಕ್ಲಬ್ ಕೋರಿತ್ತು.












Click it and Unblock the Notifications