Siddaramaiah: ಸೋನಿಯಾ-ರಾಹುಲ್ ವಿರುದ್ಧ ಚಾರ್ಜ್‌ಶೀಟ್ ಮೋದಿ ಸರ್ಕಾರ ಸೇಡಿನ ರಾಜಕಾರಣ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯವು (ಇಡಿ) ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಕೇಂದ್ರ ಸರ್ಕಾರದ ಪಾಲಿಗೆ ಸಿಂಹಸ್ವಪ್ನರಾಗಿರುವ ರಾಹುಲ್ ಗಾಂಧಿ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಕ್ರಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಸೇಡಿನ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದು ಆರೋಪ ಮಾಡಿದ್ದಾರೆ.
ಇದು ಕೇವಲ ನಮ್ಮ ಪಕ್ಷದ ಇಬ್ಬರು ನಾಯಕರ ಇಲ್ಲವೇ ಕಾಂಗ್ರೆಸ್ ಪಕ್ಷದ ವಿರುದ್ಧದ ಸೇಡಿನ ಕ್ರಮ ಅಲ್ಲ. ಇದು ವಿರೋಧದ ದನಿಯನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ದೇಶದ ವಿರೋಧ ಪಕ್ಷಗಳು ಮತ್ತು ಪ್ರಜಾಪ್ರಭುತ್ವ ಪ್ರೇಮಿ ನಾಗರಿಕರಿಗೆ ನರೇಂದ್ರ ಮೋದಿ ಸರ್ಕಾರ ನೀಡಿರುವ ಎಚ್ಚರಿಕೆಯಾಗಿದೆ. ದ್ವೇಷದ ರಾಜಕಾರಣವನ್ನು ಎದುರಿಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ಇದನ್ನು ಕೂಡ ಸತ್ಯ ಮತ್ತು ನ್ಯಾಯದ ಬಲದಿಂದ ಎದುರಿಸಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸ್ವಾಯತ್ತ ತನಿಖಾ ಸಂಸ್ಥೆಯಾದ ಇಡಿಯನ್ನು ವಿರೋಧ ಪಕ್ಷದ ನಾಯಕರ ವಿರುದ್ಧ ದ್ವೇಷ ಸಾಧಿಸಲು ಆಯುಧವನ್ನಾಗಿ ಬಳಸುತ್ತಾ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯಾಗಿರುವ ಸುಳ್ಳು ಆರೋಪವನ್ನು ಬಳಸಿಕೊಂಡಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆಯೇ ಈ ದ್ವೇಷದ ರಾಜಕಾರಣ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ದೂರಿದ್ದಾರೆ.
ವಿಚಾರಣೆಯ ನೆಪದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಸೇರಿದಂತೆ ನಮ್ಮ ಪಕ್ಷದ ಪ್ರಮುಖ ನಾಯಕರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿ ಪೀಡಿಸಿದ ಜಾರಿ ನಿರ್ದೇಶನಾಲಯ ಅದರಿಂದ ಯಾವುದೇ ಫಲ ಸಿಗದೆ ಇದ್ದಾಗ, ಕಲ್ಪಿತ ಕತೆಗಳನ್ನು ಕಟ್ಟಿ ಆರೋಪ ಪಟ್ಟಿ ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬೀದಿಗೆ ಇಳಿದು ಇದನ್ನು ಪ್ರತಿಭಟಿಸಲಿದ್ದಾರೆ. ಈ ಪ್ರತಿರೋಧಕ್ಕೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಏನಿದು ಪ್ರಕರಣ?: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಅಸೋಸಿಯೇಟೆಡ್ ಲಿಮಿಟೆಡ್ ಜರ್ನಲ್ (ಎಜೆಎಲ್) ಒಡೆತನದಲ್ಲಿದ್ದು, ಎಜೆಎಲ್‌ಗೆ ಎಐಸಿಸಿ ಮೂಲಕ 90 ಕೋಟಿ ರೂಪಾಯಿ ಸಾಲ ನೀಡಿತ್ತು. ಆದರೆ ಈ ಸಾಲ ಮರುಪಾವತಿ ಆಗಿರಲಿಲ್ಲ. ಎಜೆಎಲ್ ಸುಮಾರು 2,000 ಕೋಟಿ ರೂಪಾಯಿ ಆಸ್ತಿ ಹೊಂದಿತ್ತು. ಈ ನಡುವೆ ಎಜೆಎಲ್ ಆಸ್ತಿಯನ್ನು ಕಡಿಮೆ ತೋರಿಸಿ, ಕೇವಲ 50 ಲಕ್ಷ ರೂಪಾಯಿಗೆ ಯಂಗ್ ಇಂಡಿಯನ್ ಎಂಬ ಕಂಪನಿಗೆ ಎಜೆಎಲ್ ಅನ್ನು ಮಾರಾಟ ಮಾಡಲಾಗಿತ್ತು.
ಜಾರಿ ನಿರ್ದೇಶನಾಲಯವು ಕೆಲವು ವರ್ಷಗಳ ಹಿಂದೆಯೇ ಈ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಅವರನ್ನು ವಿಚಾರಣೆ ನಡೆಸಿತ್ತು. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಒಡೆತನದ ಖಾಸಗಿ ಕಂಪನಿಯಾದ ಯಂಗ್ ಇಂಡಿಯನ್, ಎಜೆಎಲ್‌ಗೆ ಸೇರಿದ 2,000 ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ ₹50 ಲಕ್ಷಕ್ಕೆ ತನ್ನದಾಗಿಸಿಕೊಂಡಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. 18 ಕೋಟಿ ಮೊತ್ತದ ನಕಲಿ ಡೊನೇಷನ್, 38 ಕೋಟಿ ಮೊತ್ತದ ನಕಲಿ ಮುಂಗಡ ಬಾಡಿಗೆ, 29 ಕೋಟಿ ಮೊತ್ತದ ನಕಲಿ ಜಾಹೀರಾತು ಹಣಕ್ಕೆ ಯಂಗ್ ಇಂಡಿಯನ್ ಮತ್ತು ಎಜೆಎಲ್‌ನ ಆಸ್ತಿಗಳನ್ನು ಮೂಲವೆಂದು ತೋರಿಸಲಾಗಿದೆ ಎಂದು ಇಡಿ ತಿಳಿಸಿದೆ.












Click it and Unblock the Notifications