ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್: ಚುನಾವಣೆಗೂ ಮುನ್ನ ಬಿಎಸ್‌ವೈ ಭೇಟಿಯಾಗಿದ್ದ ಸ್ವಾಮೀಜಿ, ಪೂಜಾರಿ
ಬೆಂಗಳೂರು, ಸೆಪ್ಟೆಂಬರ್ 18: ವಂಚನೆ ಪ್ರಕರಣದಲ್ಲಿ ಬಂಧಿತರಾದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಹಿಂದುತ್ವವಾದಿ ಕಾರ್ಯಕರ್ತೆ ಚೈತ್ರಾ ಕುಂದಾಪುರ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಮೂರು ದಿನಗಳ ಬಳಿಕ ಪೊಲೀಸರು ಅವರನ್ನು ಚಾಮರಾಜಪೇಟೆಯ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಕಚೇರಿಗೆ ಕರೆತಂದಿದ್ದಾರೆ.
ಉದ್ಯಮಿ ಗೋವಿಂದ್ ಬಾಬು ಪೂಜಾರಿ ಅವರ ದೂರಿನ ಆಧಾರದ ಮೇಲೆ ಚೈತ್ರಾ ಸೇರಿದಂತೆ ಏಳು ಮಂದಿಯನ್ನು ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಬೆಂಗಳೂರು ನ್ಯಾಯಾಲಯವು ಚೈತ್ರಾ ಮತ್ತು ಇತರ ಆರು ಜನರನ್ನು ಸೆಪ್ಟೆಂಬರ್ 23 ರ ವರೆಗೆ ( 10 ದಿನಗಳ ) ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಪೊಲೀಸರು ಈಗಾಗಲೇ ಹಣ ವಿನಿಮಯ ಮಾಡಿಕೊಂಡಿರುವ ಕುರಿತು ಒಂದು ಸುತ್ತಿನ ವಿಚಾರಣೆಯನ್ನು ಪೂರ್ಣಗೊಳಿಸಿದ್ದಾರೆ.
ಎಂಟು ಆರೋಪಿಗಳ ಪೈಕಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಂಬರ್ 3 ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಂಚನೆ ಪ್ರಕರಣದಲ್ಲಿ ಆರೋಪಿ ನಂಬರ್ 1 ಎಂದು ಹೆಸರಿಸಲಾಗಿರುವ ಚೈತ್ರಾ ಅವರ ವಿಚಾರಣೆಯನ್ನು ಸಿಸಿಬಿ ಪೊಲೀಸರು ಪುನರಾರಂಭಿಸಲಿದ್ದಾರೆ. ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಮತ್ತಿತರರು ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪರಾರಿಯಾಗಿದ್ದ ಸ್ವಾಮೀಜಿ ಚುನಾವಣೆಗೂ ಮುನ್ನ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊ ಸಹ ಹರಿದಾಡುತ್ತಿದೆ.
ಆರೋಪಿ ಗೋವಿಂದ್ ಬಾಬು ಎಂಬಾತನನ್ನು ಚುನಾವಣೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪರಿಚಯಿಸಿ ಹಣ ಪಡೆಯುವ ಉದ್ದೇಶವನ್ನು ಸ್ವಾಮೀಜಿ ಹೊಂದಿದ್ದ ಎನ್ನಲಾಗಿದೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ 80 ಲಕ್ಷ ನಗದು 500 ಗ್ರಾಂ ಚಿನ್ನಾಭರಣ, 1.8 ಕೋಟಿ ಸ್ಥಿರ ಠೇವಣಿ ಹಾಗೂ ಕೆಐಎ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಚೈತ್ರಾ ಮತ್ತು ಗ್ಯಾಂಗ್‌ಗೆ ಕಂತುಗಳಲ್ಲಿ 5 ಕೋಟಿ ನೀಡಿರುವುದಾಗಿ ದೂರುದಾರರು ಹೇಳಿಕೊಂಡಿದ್ದಾರೆ. ಅಭಿನವ ಹಾಲಶ್ರೀ ಸ್ವಾಮೀಜಿಗೆ 1.5 ಕೋಟಿ ನೀಡಿರುವುದಾಗಿ ದೂರುದಾರ ಆರೋಪಿಸಿದ್ದಾರೆ.












Click it and Unblock the Notifications