ಚೈತ್ರಾ ಕುಂದಾಪುರ ಪ್ರಕರಣ: ವಂಚನೆ ಹಣದಲ್ಲಿ ಸ್ವಾಮೀಜಿ ಮಾಡಿದ್ದು ಏನೇನು ಗೊತ್ತೇ? ತಿಳಿದರೆ ಗಾಬರಿ ಗ್ಯಾರಂಟಿ
ಬೆಂಗಳೂರು, ಸೆಪ್ಟೆಂಬರ್ 14: ಹಿಂದುತ್ವವಾದಿ ಉಗ್ರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಅವರ ವಂಚನೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರು ಮಂದಿಯನ್ನು ಬಂಧಿಸಿದ್ದಾರೆ. ಚೈತ್ರಾ ಕುಂದಾಪುರ ಅವರನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ. ಆದರೆ, ಈ ಪ್ರಕರಣ ಮಾತ್ರ ಅಗೆದಷ್ಟೂ ಆಳವಾಗುತ್ತಲೇ ಇದೆ.
ದೂರುದಾರ ಗೋವಿಂದ ಬಾಬು ಪೂಜಾರಿಯಿಂದ 1.5 ಕೋಟಿ ರೂ.ಗಳನ್ನು ಪಡೆದು ತಲೆಮರೆಸಿಕೊಂಡಿರುವ ಸ್ವಾಮೀಜಿ ಬಗೆಗಿನ ವಿವರಗಳು ಹೊರಬಂದಿವೆ. ಅಕ್ರಮವಾಗಿ ಬಂದಿರುವ ಹಣದಿಂದಲೇ ಸ್ವಾಮೀಜಿ ಪೆಟ್ರೋಲ್ ಬಂಕ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ನೀರಾವರಿ ಜಮೀನುಗಳನ್ನೂ ಖರೀದಿಸಿರುವ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದಾನೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಸೇರಿ ಇತರ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಾಲಶ್ರೀ ಸ್ವಾಮೀಜಿ ಮಾತ್ರ ಪೊಲೀಸರಿಗೂ ಇನ್ನೂ ಸಿಕ್ಕಿಲವೆಂದು ತಿಳಿದುಬಂದಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರಿನಿಂದ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಈ ಸಂಬಂಧ ಐದು ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿರುವ ಪೂಜಾರಿ ಅವರು ಒಟ್ಟು ಎಂಟು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಪೂಜಾರಿಯವರು ಕಂತುಗಳಲ್ಲಿ ಹಣ ಪಾವತಿಸಿದ್ದು, ಅದರಲ್ಲಿ ಒಂದನ್ನು ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಅವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಚೈತ್ರಾ ಕುಂದಾಪುರ ಅವರು ದೂರುದಾರರನ್ನು ಮಠಕ್ಕೆ ಕರೆದೊಯ್ದು ಶ್ರೀಗಳಿಗೆ ಪರಿಚಯಿಸಿದರು ಎನ್ನಲಾಗಿದೆ.
ಟಿವಿ9 ಕನ್ನಡದ ವಾಹಿನಿಯ ಪ್ರಕಾರ, ಇತ್ತೀಚೆಗೆ ಸ್ವಾಮೀಜಿಯ ಜೀವನಶೈಲಿ ಬದಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. 68 ಲಕ್ಷ ಕೊಟ್ಟು ಮಾವನ ಹೆಸರಿನಲ್ಲಿ ಎಂಟು ಎಕರೆ ಜಮೀನು ಖರೀದಿಸಿದ್ದರು ಎನ್ನಲಾಗಿದೆ. ಚಂದ್ರಪ್ಪ ಎಂಬುವವರ ಒಡೆತನದ ಪೆಟ್ರೋಲ್ ಬಂಕ್ ನಲ್ಲಿಯೂ 40 ಲಕ್ಷ ರೂ. ಹೂಡಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.
ದೂರುದಾರರು ತಮ್ಮ ಹಣವನ್ನು ವಾಪಾಸ್ಸು ಬೇಕೆಂದು ಕೇಳಿದ ನಂತರ, ಸ್ವಾಮೀಜಿ ಸ್ಥಳೀಯ ಮುಖಂಡರಿಂದ 10 ಲಕ್ಷ ರೂಪಾಯಿ ಸಾಲವನ್ನು ಕೇಳಿದ್ದಾರೆ ಎನ್ನಲಾಗಿದೆ.
ಹಣವನ್ನು ದೂರುದಾರರಿಗೆ ಹಿಂತಿರುಗಿಸುವುದಾಗಿ ಸ್ವಾಮೀಜಿ ಹೇಳಿದ್ದರೆಂದು ದೂರದಾರ ತಿಳಿಸಿದ್ದಾರೆ.
ಹಣ ಹಿಂತಿರುಗಿಸಲು ಸಮಯಬೇಕೆಂದು ಸ್ವಾಮೀಜಿ ಕೇಳಿದ್ದರು. ತಮ್ಮ ಹೆಸರನ್ನು ಬಹಿರಂಗಪಡಿಸಕೂಡದು ಎಂದು ಅವರು ಮನವಿ ಮಾಡಿಕೊಂಡಿದ್ದರು ಎಂದು ದೂರುದಾರ ತಿಳಿಸಿದ್ದಾರೆ.
ಚೈತ್ರಾ ಕುಂದಾಪುರ ಅವರು ಸಿಟಿ ಕ್ರೈಂ ಬ್ರಾಂಚ್ ಕಚೇರಿಗೆ ಪ್ರವೇಶಿಸಿದಾಗ, ಸ್ವಾಮೀಜಿಯನ್ನು ಬಂಧಿಸಿದ ನಂತರ ಹಲವಾರು ದೊಡ್ಡ ನಾಯಕರ ಹೆಸರುಗಳು ಹೊರಬೀಳಲಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ಚೈತ್ರಾ ಅವರ ತಾಯಿ ತನ್ನ ಮಗಳು ನಿರಪರಾಧಿಯಾಗಿದ್ದು, ಆಕೆಯ ವಿರುದ್ಧ ನಡೆದ ಪಿತೂರಿ ಎಂದು ಆರೋಪಿಸಿದ್ದಾರೆ.












Click it and Unblock the Notifications