• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಇಟಿ ಕಾಯ್ದೆ ಯಾರಿಗೆ ಲಾಭ? ಯಾರಿಗೆ ನಷ್ಟ?

By ಪ್ರಿಯಾಂಕ್ ಕೆಎಸ್
|

ಕರ್ನಾಟಕ ವೃತ್ತಿಪರ ಶಿಕ್ಷಣ ಕಾಯ್ದೆ 2006ನ್ನು 2014ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಸಿದ್ದರಾಮಯ್ಯನವರ ಮುಂದಾಳ್ತನದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಈ ಕಾಯ್ದೆ ಜಾರಿಯಾದಲ್ಲಿ, ರಾಜ್ಯದಲ್ಲಿರುವ ಇಪ್ಪತ್ತು ಎಂಜಿನಿಯರಿಂಗ್ ಕಾಲೇಜುಗಳೂ ಮತ್ತು ಹತ್ತು ಮೆಡಿಕಲ್ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಕಮ್ಮಿ ಇರುತ್ತದೆ. ಮಿಕ್ಕ 101 ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಮತ್ತು 23 ಮೆಡಿಕಲ್ ಕಾಲೇಜುಗಳಲ್ಲೂ ಶುಲ್ಕ ಹೆಚ್ಚಳವಾಗುತ್ತದೆ. ಒಂದೊಂದು ಕಾಲೇಜಿನಲ್ಲೂ ಒಂದೊಂದು ಬಗೆಯ ಶುಲ್ಕವಿರಬಹುದು.

ಪ್ರೈವೇಟ್ ಕಾಲೇಜುಗಳಲ್ಲಿ ಶುಲ್ಕ ನಿರ್ಧರಿಸುವ ಬಗೆ : ಖಾಸಗಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಬೇರೆ ಬೇರೆ ಬಗೆಯ ಶುಲ್ಕವಿರಬಹುದು. ಕಾಲೇಜು ಇರುವ ಊರು, ಕಾಲೇಜಿನಲ್ಲಿರುವ ಸೌಲಭ್ಯಗಳು, ಕಾಲೇಜನ್ನು ಮುನ್ನಡೆಸಲು ಆಡಳಿತದವರಿಗೆ ತಗಲುವ ವೆಚ್ಚ ಮುಂತಾದವನ್ನು ಪರಿಗಣಿಸಿ, ಆಡಳಿತದವರು ಶುಲ್ಕವನ್ನು ನಿಗದಿಪಡಿಸಬಹುದಾಗಿದೆ. ಹೀಗೆ ನಿಗದಿಪಡಿಸಲಾದ ಶುಲ್ಕವನ್ನು "ಶುಲ್ಕ ಮೇಲ್ವಿಚಾರಣೆ ಕಮಿಟಿ"ಯೊಂದರ ಮುಂದಿಡಬೇಕಾಗುತ್ತದೆ. "

ಶುಲ್ಕ ಮೇಲ್ವಿಚಾರಣೆ ಕಮಿಟಿಯನ್ನು ಸರ್ಕಾರವೇ ಮಾಡಲಿದ್ದು, ಅದರ ಮುಂದಾಳ್ತನವು ನಿವ್ರುತ್ತಿ ಹೊಂದಿದ ಹೈಕೋರ್ಟ್ ಜಡ್ಜ್ ಒಬ್ಬರದ್ದಾಗಿರುತ್ತದೆ. "ಶುಲ್ಕ ಮೇಲ್ವಿಚಾರಣೆ ಕಮಿಟಿ"ಯು ಪ್ರತಿಯೊಂದು ಕಾಲೇಜಿನ ಶುಲ್ಕವನ್ನೂ ಒರೆಗೆ ಹಚ್ಚಿ, ಬಳಿಕ ಒಪ್ಪಿಗೆ ಸೂಚಿಸುತ್ತದೆ ಅಥವಾ 'ಶುಲ್ಕವನ್ನು ಕಮ್ಮಿ ಮಾಡುವಂತೆ' ಸೂಚಿಸುತ್ತದೆ. ಹೀಗೆ ಒಪ್ಪಿಗೆಯಾದ ಶುಲ್ಕವನ್ನು ಮಾತ್ರ ಕಾಲೇಜುಗಳು ಮಕ್ಕಳಿಂದ ಪಡೆದುಕೊಳ್ಳಬಹುದಾಗಿದೆ. ಈಗಿನ ಏರ್ಪಾಡಿನಲ್ಲಿ ಪ್ರೈವೇಟ್ ಕಾಲೇಜುಗಳಿಗೆ ಶುಲ್ಕ ನಿಗದಿಪಡಿಸುವ ಅವಕಾಶ ಕಮ್ಮಿಯಿದ್ದುದರಿಂದ, ಈ ರೀತಿಯ ಏರ್ಪಾಡಿನೆಡೆಗೆ ಹೊರಳಲಾಗುತ್ತಿದೆ. ಮತ್ತು, ಈ ಹೊಸ ಏರ್ಪಾಡಿನಲ್ಲಿ ಶುಲ್ಕವು ಖಂಡಿತವಾಗಿ ಹೆಚ್ಚಾಗಿರುತ್ತದೆ.

ಸೀಟುಗಳ ಹಂಚಿಕೆ ಬಗೆ : ಕರ್ನಾಟಕ ಸರ್ಕಾರವು ನಡೆಸುತ್ತಿರುವ ಅಥವಾ ಹಣಸಂದಾಯ ಮಾಡುತ್ತಿರುವ ಒಟ್ಟು ಇಪ್ಪತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಮತ್ತು ಹತ್ತು ಮೆಡಿಕಲ್ ಕಾಲೇಜುಗಳಲ್ಲೂ ಸೀಟು ಹಂಚಿಕೆಯಲ್ಲಿ ಇವತ್ತಿರುವ ಏರ್ಪಾಡೇ ಮುಂದುವರೆಯಲಿದೆ.

ಹಿಂದುಳಿದ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಸೀಟು ತುಂಬದಿದ್ದರೆ? ಈ ಹೊಸದಾದ ಏರ್ಪಾಡಿನಲ್ಲಿ ಕನ್ನಡಿಗರಿಗೆ ಒಳಿತೋ, ಕೆಡುಕೋ? ಇದು ವೋಟ್ ಬ್ಯಾಂಕ್ ರಾಜಕಾರಣದ ಬಗ್ಗೆ ಮುಂದೆ ಓದಿ...

ಸೀಟುಗಳ ಹಂಚಿಕೆ ಬಗೆ

ಸೀಟುಗಳ ಹಂಚಿಕೆ ಬಗೆ

ಮಿಕ್ಕೆಲ್ಲಾ ಕಾಲೇಜುಗಳಲ್ಲಿ ಸೀಟು ಹಂಚಿಕೆ ಏರ್ಪಾಡು ಬದಲಾಗಲಿದೆ. ಪ್ರೈವೇಟು ಕಾಲೇಜುಗಳಲ್ಲಿ 50%ನಷ್ಟು ಸೀಟುಗಳನ್ನು ಕರ್ನಾಟಕದಲ್ಲಿ ನೆಲೆಸಿರುವ ಹಿಂದುಳಿದ ಜಾತಿ ಮತ್ತು ಪಂಗಡಗಳಿಗೆ ಮೀಸಲಿಡಲಾಗಿದೆ. ಮಿಕ್ಕ 50% ಸೀಟುಗಳನ್ನು ಸಾಮಾನ್ಯ ಕೆಟಗರಿ ಎಂದು ಗುರುತಿಸಲಾಗಿದ್ದು, ಅದರಲ್ಲಿ 15%ನಷ್ಟು ಸೀಟುಗಳನ್ನು ಎನ್.ಆರ್.ಇ (Non Resident Indian) ಮಕ್ಕಳಿಗೆ ಎತ್ತಿಡಬಹುದಾದ ಅಧಿಕಾರ ಕಾಲೇಜುಗಳಿಗಿದೆ. ಮಿಕ್ಕುಳಿದ ಸೀಟುಗಳನ್ನು ಇಡೀ ಇಂಡಿಯಾ ಮಟ್ಟದಲ್ಲಿ ನಡೆಸುವ ಕಾಮೆಡ್-ಕೆ ಪರೀಕ್ಷೆಯಲ್ಲಿ ಪಾಲ್ಗೊಂಡವರು ತಮ್ಮ ಶ್ರೇಯಾಂಕ(Rank)ಕ್ಕೆ ತಕ್ಕಂತೆ ಸೀಟುಗಳನ್ನು ಆರಿಸಿಕೊಳ್ಳಬಹುದಾಗಿದೆ.

ಮೀಸಲಾತಿ ಸೀಟು ತುಂಬದಿದ್ದರೆ?

ಮೀಸಲಾತಿ ಸೀಟು ತುಂಬದಿದ್ದರೆ?

ಒಂದು ವೇಳೆ ಹಿಂದುಳಿದ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ 50% ಸೀಟುಗಳು ತುಂಬಲಿಲ್ಲವೆಂದರೆ, ಆಯಾ ಸೀಟುಗಳನ್ನು ಕರ್ನಾಟಕ ಸರ್ಕಾರವು ನಡೆಸುವ ಸಿ.ಇ.ಟಿ. ಪರೀಕ್ಷೆಯಲ್ಲಿ ಪಾಲ್ಗೊಂಡ ಹಿಂದುಳಿದ ಜಾತಿ ಅಥವಾ ಪಂಗಡಗಳಿಗೆ ಸೇರಿದ ಮಕ್ಕಳು ಪಡೆದುಕೊಳ್ಳಬಹುದಾಗಿದೆ. ಹಾಗೆ ಮಾಡಿಯೂ ಸೀಟುಗಳು ತುಂಬದೇ ಉಳಿದಲ್ಲಿ, ಕಾಮೆಡ್-ಕೆ ಪರೀಕ್ಷೆಯಲ್ಲಿ ಪಾಲ್ಗೊಂಡ ಸಾಮಾನ್ಯ ಕೆಟಗರಿ ಮಕ್ಕಳಿಗೆ ಆ ಸೀಟುಗಳನ್ನು ತಮ್ಮ Rankಗೆ ತಕ್ಕಂತೆ ಪಡೆದುಕೊಳ್ಳುವ ಅವಕಾಶವಿರುತ್ತದೆ.

ಈ ಏರ್ಪಾಡಿನಲ್ಲಿ ಕನ್ನಡಿಗರ ಪಾಡು

ಈ ಏರ್ಪಾಡಿನಲ್ಲಿ ಕನ್ನಡಿಗರ ಪಾಡು

ಈ ಹೊಸದಾದ ಏರ್ಪಾಡಿನಲ್ಲಿ ಕನ್ನಡಿಗರಿಗೆ ಒಳಿತೋ, ಕೆಡುಕೋ ಎಂದು ನೋಡಿದರೆ ನಿರಾಸೆ ಕಾದಿದೆ. ಕರ್ನಾಟಕದ ಜನರಿಂದ ಆರಿಸಲ್ಪಟ್ಟ ಸರ್ಕಾರವು ಇಲ್ಲಿನ ಜನರ ಹಿತ ಕಾಯುವುದನ್ನು ಮುಖ್ಯವೆಂಬಂತೆ ನೋಡಿಯೇ ಇಲ್ಲವೇನೋ ಎಂದನಿಸುತ್ತದೆ. ಹಾಗೆನಿಸಲು ಕಾರಣ, ಉತ್ತರ ಸಿಗದ ಈ ಕೆಲವು ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಉತ್ತರ ನೀಡುವ ಗಂಭೀರ ಪ್ರಯತ್ನ ಸರ್ಕಾರದಿಂದ ಆಗಬೇಕಾಗಿದೆ.

ಹೆಚ್ಚಿನ ಸ್ಪರ್ಧೆ

ಹೆಚ್ಚಿನ ಸ್ಪರ್ಧೆ

ಸುಮಾರು 100 ಎಂಜಿನಿಯರಿಂಗ್ ಮತ್ತು 20 ಮೆಡಿಕಲ್ ಕಾಲೇಜುಗಳಲ್ಲಿ 50% ಸೀಟುಗಳು ಕನ್ನಡಿಗರಿಗೆ ಮೀಸಲಿಲ್ಲ. ಇವನ್ನು ಪಡೆದುಕೊಳ್ಳಲು ಕನ್ನಡಿಗರು ಹೊರರಾಜ್ಯದವರೊಂದಿಗೆ ಸ್ಪರ್ಧಿಸಬೇಕು. ಇಲ್ಲಿ ಕಾಲೇಜುಗಳನ್ನು ಕಟ್ಟಿನಡೆಸಲು ನೀಡಿದ ಜಾಗ ಮತ್ತು ಒದಗಿಸಲಾದ ನೀರು, ವಿದ್ಯುತ್ ಸವಲತ್ತುಗಳು ಕನ್ನಡಿಗರದ್ದು. ಆದರೆ, ಈ ಕಾಲೇಜುಗಳಲ್ಲಿ ಸೀಟು ನೀಡುವಾಗ ಮಾತ್ರ ಕನ್ನಡಿಗರು ಮಿಕ್ಕವರಂತೆ ಸರತಿಯಲ್ಲಿ ಬರಬೇಕು ಎಂದಾದರೆ, ಇಲ್ಲಿ ಇನ್ನೂ ಹೆಚ್ಚಿನ ಕಾಲೇಜುಗಳು ಯಾಕೆ ಬೇಕು? ಯಾರಿಗಾಗಿ ಬೇಕು?

ಮೀಸಲಿನ ಗತಿಯೇನು?

ಮೀಸಲಿನ ಗತಿಯೇನು?

ಸಿ.ಇ.ಟಿ.ಯ ವ್ಯವಸ್ಥೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮತ್ತು ಹತ್ತು ವರುಷಗಳ ಕಾಲ ಹಳ್ಳಿಗಳಲ್ಲಿ ಓದಿದವರಿಗೆಂದೇ ಸೀಟುಗಳು ಮೀಸಲಿದ್ದವು. ಈಗ, ಅಂತಹ ಮೀಸಲಿನ ಗತಿಯೇನು? ಹಳ್ಳಿ, ಪಟ್ಟಣಗಳಲ್ಲಿ ಓದಿಬಂದ ಪ್ರತಿಭಾವಂತ ಮಕ್ಕಳಿಗೆ ಯಾವ ರೀತಿಯಲ್ಲಿ ನಮ್ಮ ಸರಕಾರ ಬೆಂಬಲ ನೀಡುತ್ತಿದೆ?

ಮೀಸಲಿಲ್ಲ ಏಕೆ?

ಮೀಸಲಿಲ್ಲ ಏಕೆ?

ಹಿಂದುಳಿದ ಜಾತಿ, ಪಂಗಡಗಳಿಗೆ ಮೀಸಲಾದ 50% ಸೀಟುಗಳು ತುಂಬಲಿಲ್ಲವೆಂದಾದರೆ ಆ ಸೀಟುಗಳು ಸಾಮಾನ್ಯ ಕೆಟಗರಿಗೆ ಹೋಗುತ್ತದೆ. ಸಾಮಾನ್ಯ ಕೆಟಗರಿ ಎಂದಾದ ಕೂಡಲೇ ಅದರಲ್ಲಿ ಕರ್ನಾಟಕದ ಮಕ್ಕಳು ಎಂದು ವಿಶೇಷವಾಗಿ ನೋಡುವುದೇ ಇಲ್ಲ. ಸಾಮಾನ್ಯ ಕೆಟಗರಿಯಲ್ಲಿ ಕರ್ನಾಟಕದ ಮಕ್ಕಳು ಹೊರರಾಜ್ಯದವರೊಂದಿಗೆ ಸ್ಪರ್ಧಿಸಿ ಸೀಟು ಗಳಿಸಿಕೊಳ್ಳಬೇಕಾಗಿದೆ. ಕರ್ನಾಟಕದ ಜನರನ್ನು ಮೇಲೆತ್ತಲು ದುಡಿಯಬೇಕಾದ ಸರಕಾರವು, ಸಾಮಾನ್ಯ ಕೆಟಗರಿಯಲ್ಲಿ ಒಂದು ಪಾಲನ್ನು ಕರ್ನಾಟಕದ ಮಕ್ಕಳಿಗೆಂದೇ ಮೀಸಲು ಯಾಕಿಟ್ಟಿಲ್ಲ?

ವ್ಯಾಪಾರವೇ ಮುಖ್ಯವೇ?

ವ್ಯಾಪಾರವೇ ಮುಖ್ಯವೇ?

ನಿಜಕ್ಕೂ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಶಿಕ್ಷಣವನ್ನು ಒಂದು ವ್ಯಾಪಾರವಾಗಿ ಮಾಡಿಕೊಳ್ಳುವುದಾದರೆ, ಅವರಿಗೆ ನೀಡುವ ನೆಲ, ನೀರು ಮತ್ತು ವಿದ್ಯುತ್ತನ್ನು ಮಾರುಕಟ್ಟೆಯ ದರದಲ್ಲಿ ಯಾಕೆ ಮಾರಬಾರದು? ಇತರೆ ವ್ಯಾಪಾರಗಳಂತೆಯೇ ಈ ಕಾಲೇಜುಗಳನ್ನೂ ನೋಡುವ ಮೂಲಕ, ಸರಕಾರದ ಬೊಕ್ಕಸಕ್ಕೆ ಒಂದಿಷ್ಟು ರೊಕ್ಕವನ್ನಾದರೂ ಹುಟ್ಟಿಸಿಕೊಳ್ಳಬಹುದು. ಮತ್ತು ಹಾಗೆ ಹುಟ್ಟುವ ರೊಕ್ಕವನ್ನು ಕನ್ನಡಿಗರಿಗಾಗಿರುವ ಪ್ರಾಥಮಿಕ ಶಾಲೆಗಳಲ್ಲಿ ತೊಡಗಿಸಬಹುದು.

ಯಾವುದೇ ಮಾಹಿತಿಯಿಲ್ಲ

ಯಾವುದೇ ಮಾಹಿತಿಯಿಲ್ಲ

ಹಳೆಯ ಏರ್ಪಾಡಿನಲ್ಲಿ, ಕರ್ನಾಟಕ ಮೂಲದವರ ಮಕ್ಕಳಿಗೆ ಕರ್ನಾಟಕ ಕೋಟಾದಡಿಯಲ್ಲಿ ಸೀಟು ನೀಡಲಾಗುತ್ತಿತ್ತು. ಕರ್ನಾಟಕದವರು ಕಾರಣಾಂತರಗಳಿಂದ ಬೇರೆ ರಾಜ್ಯಗಳಲ್ಲಿ ನೆಲೆಸಬೇಕಾಗಿ ಬಂದಿದ್ದರೂ, ಅವರ ಮಕ್ಕಳಿಗೆ ಇಲ್ಲಿಯವರಂತೆಯೇ ನೋಡಿಕೊಂಡು ಅವರ rankಗೆ ತಕ್ಕಂತೆ ಸೀಟು ನೀಡಲಾಗುತ್ತಿತ್ತು. ಈ ಹೊಸ ಮಾದರಿಯಲ್ಲಿ ಅಂತಹ ಯಾವುದೇ ಏರ್ಪಾಡಿನ ಬಗ್ಗೆ ಮಾಹಿತಿಯಿಲ್ಲ. ಈ ಏರ್ಪಾಡನ್ನು ಕೈಬಿಡಲಾಗಿದೆಯೇ?

ಎನ್.ಆರ್.ಐ ಕೋಟಾ

ಎನ್.ಆರ್.ಐ ಕೋಟಾ

ಎನ್.ಆರ್.ಐ ಕೋಟಾ ಎಂದು ಹೇಳಲಾಗುತ್ತಿರುವ ಕೋಟಾದಡಿಯಲ್ಲಿ ಬರುವವರಿಗೆ 15%ವರೆಗೆ ಸೀಟುಗಳನ್ನು ಮೀಸಲಿಡಲಾಗುತ್ತಿದೆ. ಇದರಲ್ಲಿ ಕನ್ನಡನಾಡಿನ ಮೂಲದವರನ್ನೂ, ಬೇರೆ ರಾಜ್ಯದ ಮೂಲದವರನ್ನೂ ಒಂದೇ ಬಗೆಯಲ್ಲಿ ನೋಡಲಾಗುತ್ತದೆ. ಕನ್ನಡನಾಡಿನ ಮೂಲದ ಎನ್.ಆರ್.ಐ.ಗಳಿಗೆ ಕರ್ನಾಟಕದಲ್ಲಿನ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಬೇರೆಯಾಗಿ ಸೀಟುಗಳನ್ನು ಮೀಸಲು ಯಾಕಿಟ್ಟಿಲ್ಲ?

ಯಾರ ಹಿತಾಸಕ್ತಿ ಮುಖ್ಯ

ಯಾರ ಹಿತಾಸಕ್ತಿ ಮುಖ್ಯ

ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ನಡೆಸುವವರ ಹಿತಾಸಕ್ತಿ ಕಾಯುವಂತೆ ಈ ಕಾಯ್ದೆಯನ್ನು ರೂಪಿಸಲಾಗಿದೆ. ಆಳುವವರಲ್ಲಿ ಹಲವರು ನೇರವಾಗಿ ಅಥವಾ ಪರೋಕ್ಷವಾಗಿ ಕಾಲೇಜುಗಳನ್ನು ನಡೆಸುತ್ತಿರುವುದರಿಂದ, ಈ ಕಾಯ್ದೆಗೆ ಹೆಚ್ಚಿನ ಬೆಂಬಲ ದೊರೆತಿರಲೂ ಸಾಕು.

ಈ ಕಾಯ್ದೆಗೆ ಸಾಮಾನ್ಯ ಕನ್ನಡಿಗರೆಲ್ಲರಿಂದ ವಿರೋಧ ಮೂಡದಂತೆ ನೋಡಿಕೊಳ್ಳಲು ಬಲು ಜಾಣತನದಿಂದ ಕಾಯ್ದೆಯನ್ನು ಹೆಣೆದಂತೆ ಕಾಣುತ್ತದೆ. ಕನ್ನಡಿಗರಲ್ಲಿ ಕೆಲವರಿಗೆ ಅನುಕೂಲ ಮಾಡಿಕೊಟ್ಟು ಮಿಕ್ಕಂತೆ ಗಡಿನಾಡ ಕನ್ನಡಿಗರು, ಹೊರನಾಡ ಕನ್ನಡಿಗರು, ಹಿಂದುಳಿಯದ ಜಾತಿ ಧರ್ಮಗಳ ಕನ್ನಡಿಗರನ್ನು ಕನ್ನಡನಾಡಿನ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳಿಗಾಗಿ ಹೊರರಾಜ್ಯದವರೊಡನೆ ಸ್ಪರ್ಧಿಸುವಂತೆ ಮಾಡುವ ಈ ಏರ್ಪಾಡು ಕನ್ನಡಿಗರ ನಡುವೆಯೇ ಒಡಕು ಮೂಡಿಸುವ ಪ್ರಯತ್ನದಂತೆ ಕಾಣುತ್ತಿದೆ.

ವೋಟ್ ಬ್ಯಾಂಕ್ ರಾಜಕೀಯವೇ?

ವೋಟ್ ಬ್ಯಾಂಕ್ ರಾಜಕೀಯವೇ?

ಈ ಒಂದು ಹೆಜ್ಜೆಯ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತನ್ನ ವೋಟ್ ಬ್ಯಾಂಕ್ ಗಟ್ಟಿಯಾಗಬಹುದು, ಆದರೆ ಮುಂದಿನ ಹಲವಾರು ವರುಶಗಳ ಮಟ್ಟಿಗೆ ಕನ್ನಡಿಗರ ನಡುವೆ ಒಗ್ಗಟ್ಟು ಮೂಡಿಸುವುದು ಕಷ್ಟವಾಗುತ್ತದೆ. ಮೇಲಾಗಿ, ಹೊರರಾಜ್ಯಗಳಿಂದ ಕನ್ನಡನಾಡಿನ ನಗರಗಳಿಗೆ ಈಗಾಗಲೇ ನಡೆಯುತ್ತಿರುವ ವಲಸೆ ಇನ್ನೂ ಹೆಚ್ಚಾಗುತ್ತಾ ಸಾಗುತ್ತದೆ.

ರಾಜಕೀಯವಾಗಿ ಕನ್ನಡಿಗರು ಒಂದಾಗದಂತೆ ನೋಡಿಕೊಳ್ಳುವ, ಮತ್ತು ಕನ್ನಡಿಗರಿಗೆ ಪರ್ಯಾಯವಾಗಿ ಇನ್ನೊಂದು ರಾಜಕೀಯ ಬಲಕ್ಕೆ ಹೆಚ್ಚಿದ ವಲಸೆ ಮೂಲಕ ಶಕ್ತಿ ತುಂಬಿಸುವ ಕೆಲಸ ಇದಾಗಿದೆಯೇನೋ ಎಂಬ ಗುಮಾನಿ ಕಾಯ್ದೆಯನ್ನು ಹತ್ತಿರದಿಂದ ನೋಡಿದವರಿಗೆ ಮೂಡದೇ ಇರದು. ಒಡೆದು ಆಳುವ ನೀತಿಯ ಇನ್ನೊಂದು ಮುಖವಿದು ಎಂದರೆ ತಪ್ಪಾಗಲಾರದು.

English summary
Siddaramaiah government proposal to implement Karnataka CET 2006 law will only be beneficial to 20 Engineeting and 10 Medical Colleges in the State. The illogical move by government will leave more than 101 Engineering and 23 Medical Colleges suffer reports Priyank KS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more