CET Exam 2026: ಸಿಇಟಿ 2026 ದಿನಾಂಕ ಪ್ರಕಟ, ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗೆ ಮುಹೂರ್ತ
ಕರ್ನಾಟಕ ರಾಜ್ಯದಲ್ಲಿ ಪರೀಕ್ಷೆಗಳು ಮೆಲ್ಲಗೆ ಹತ್ತಿರವಾಗುತ್ತಿವೆ, ಇನ್ನು ಕೆಲವೇ ದಿನಗಳಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ದಿನಗಳು ಬರಲಿವೆ. ಇದರ ಜೊತೆಗೆ ಸಿಇಟಿ ಪರೀಕ್ಷೆ 2026ರ ಬಗ್ಗೆ ಮಾಹಿತಿ ಪಡೆಯಲು ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಸಿಇಟಿ ಪರೀಕ್ಷೆ 2026ರ ಬಗ್ಗೆ ಇಂದು ಮಾಹಿತಿ ಹೊರಬಿದ್ದಿದ್ದು, ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.
ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ ಎಂದರೆ ಸಿಇಟಿ-CET ಅತ್ಯಂತ ಮುಖ್ಯವಾದ ಹಂತ. ಹೀಗಾಗಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ 2026ರ ಬಗ್ಗೆ ಮಾಹಿತಿಗಾಗಿ ಕಾಯುತ್ತಿದ್ದರು. ಇಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2026ನೇ ಸಾಲಿನ ಸಿಇಟಿ ಬಗ್ಗೆ ಸಂಪೂರ್ಣ ಮಾಹಿತಿ ಒಳಗೊಂಡಿರುವ ಸಿಇಟಿ ದಿಕ್ಕೂಚಿ ಎಂಬ ಕಿರು ಹೊತ್ತಿಗೆ ಬಿಡುಗಡೆ ಕೂಡ ಮಾಡಲಾಗಿದೆ.

2026 ಸಿಇಟಿ ಪರೀಕ್ಷೆಗಳು ಯಾವಾಗ?
ಇನ್ನು ಸಿಇಟಿ ದಿಕ್ಕೂಚಿ ಕಿರು ಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವರ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಉಪಸ್ಥಿತರಿದ್ದರು. ಏಪ್ರಿಲ್ 23 ಹಾಗೂ 24ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನ ಸಲ್ಲಿಸಲು ಜನವರಿ 17ರಿಂದ ಅವಕಾಶ ಕಲ್ಪಿಸಲಾಗಿದ್ದು, ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಸಿಇಟಿ ದಿಕ್ಕೂಚಿ ಕಿರು ಹೊತ್ತಿಗೆ ರಿಲೀಸ್ ಮಾಡಲಾಯಿತು. ಈ ಮೂಲಕ ವಿದ್ಯಾರ್ಥಿಗಳಿಗೆ ಮತ್ತೊಂದು ಟೆನ್ಷನ್ ಕಡಿಮೆ ಆದಂತೆ ಆಗಿದ್ದು, ಅರ್ಜಿ ಸಲ್ಲಿಸಲು ಸಿದ್ಧರಾಗುತ್ತಿದ್ದಾರೆ.












Click it and Unblock the Notifications