ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರದ ಒಪ್ಪಿಗೆ: ಬಸವರಾಜ ಬೊಮ್ಮಾಯಿ
ಬಳ್ಳಾರಿ, ಜನವರಿ 5: ಆರು ಸಾವಿರ ಕೋಟಿ ರೂ.ಗಳನ್ನು ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದ್ದು, ಬೆಂಗಳೂರಿನ ಫೆರಿಫೆರಲ್ ರಸ್ತೆ ಹಾಗೂ ಕೆರೆಗಳ ಅಭಿವೃದ್ಧಿಗೆ ನಾವು ಕ್ರಮ ವಹಿಸಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಳ್ಳಾರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ ಕೆ ಆರ್ ಡಿ ಬಿಯಾಗಲಿ ಬಜೆಟ್ ಅನುದಾನವಾಗಲಿ ಯಾವುದಕ್ಕೂ ಕಡಿಮೆ ಮಾಡಿಲ್ಲ. ಹೊಸ ಕಾಮಗಾರಿಗಳ ಉದ್ಘಾಟನೆ ಬಗ್ಗೆ ಚಿಂತನೆ ಇದೆಯೇ ಎಂಬ ಬಗ್ಗೆ ಪಕ್ಷದ ಮಟ್ಟದಲ್ಲಿ ಚಿಂತನೆ ಮಾಡಿ ಹೇಳಿದ್ದಾರೆ. ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ. ಅವರ ಬಳಿ ಚರ್ಚೆ ಮಾಡಿ ಸರ್ಕಾರದ ನಿಲುವನ್ನು ತಿಳಿಸಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯನ ಕಾಲದಲ್ಲಿ 15 ನೇ ಹಣಕಾಸಿನ ಆಯೋಗ ತೀರ್ಮಾನವಾಗಿದೆ. ರಾಜ್ಯ ಸರ್ಕಾರದ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಸರಿಯಾದ ಮಾಹಿತಿಗಳನ್ನು ನೀಡಿ, ದೃಷ್ಟಿಯಲ್ಲಿ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಯೋಗಕ್ಕೆ ತಿಳಿಸುವಲ್ಲಿ ಇದು ಅಂದಿನ ಸರ್ಕಾರದ ವಿಫಲವಾಗಿದೆ. ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಈಗಿರುವ ಮುಖ್ಯ ಬಜೆಟ್, ಕೆಕೆಆರ್ ಡಿ ಬಿ ಬಜೆಟ್, ಮಿನರಲ್ ಫಂಡ್‍ಗಳನ್ನು ಉಪಯೋಗ ಮಾಡಲು, ಈಗಾಗಲೇ ಮಂಜೂರಾಗಿರುವ ಕೆಲಸಗಳನ್ನು ನಿರ್ವಹಿಸಿಲು ವಿಶೇಷ ಇಂಜಿನಿಯರ್ ಸೆಲ್ ಅಗತ್ಯವಿದೆ. ಅದರ ಕಡೆ ಲಕ್ಷ್ಯ ಕೊಡಲಾಗುತ್ತಿದೆ. ಶೇ 50 ರಷ್ಟು ರಿಂಗ್ ರಸ್ತೆಯನ್ನು ಮಿನರಲ್ ಫಂಡ್ ನಲ್ಲಿ ಕೈಗೊಳ್ಳಲಾಗಿದೆ ಉಳಿದ ಶೇ 50 ರಷ್ಟು ಕಾಮಗಾರಿ ಎಮೆನ್ -ಇಂಡಿಯಾ ಕಾಮಗಾರಿಯ ಭಾಗವಾಗಿದೆ ಎಂದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸಲಾಗುವುದು
ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಡೀ ಕರ್ನಾಟಕದಲ್ಲಿ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಲ್ಲೂ ಇಲ್ಲ. ಇಲಾಖೆಯಿಂದ ನಿರ್ಮಾಣ ಮಾಡುವಾಗ ಸಾಮಾನ್ಯವಾಗಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾವಾಗುತ್ತದೆ. ಆದರೆ ಇಂದು ನಾಲ್ಕು ಪಟ್ಟು ಹೆಚ್ಚಾಗಿದೆ. ಜಿಂದಾಲ್ ಸಂಸ್ಥೆ ಕಟ್ಟಿಕೊಡಲು ಒಪ್ಪಿದ್ದು, ಸರ್ಕಾರ ಸಲಕರಣೆಗಳನ್ನು ಒದಗಿಸಲಿದೆ. 400 ಹಾಸಿಗೆಗಳ ಆಸ್ಪತ್ರೆ, ಸಮಗ್ರ ಬಳ್ಳಾರಿ ಜಿಲ್ಲೆಯ ಮಕ್ಕಳಿಗೆ ಹಾಗೂ ತಾಯಂದಿರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಿದೆ ಎನ್ನುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದರು.
ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನ
ನಮ್ಮ ದೇಶದಲ್ಲಿ ಪೌಷ್ಠಿಕತೆ ಮುಖ್ಯವಾದ ಸವಾಲು ಪೌಷ್ಟಿಕತೆಯ ಕೊರತೆಯಿಂದ ಮಕ್ಕಳ ಬೆಳವಣಿಗೆ ಸರಿಯಾಗುವುದಿಲ್ಲ. ಪದೇ ಪದೇ ಕಾಯಿಲೆಗೆ ಒಳಪಡುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನವನ್ನು ಒದಗಿಸಲಾಗಿದೆ. ನಮ್ಮ ರಾಜ್ಯದ ಬಜೆಟ್ ನಲ್ಲಿ ಪೌಷ್ಟಿಕತೆಗೆ ಅನುದಾನ ಒದಗಿಸಲಾಗಿದೆ. ತೀವ್ರ ಮತ್ತು ಮಧ್ಯಮ ಎಂಬ ಎರಡು ಬಗೆಯ ಅಪೌಷ್ಟಿಕತೆಯಿದೆ. ಹಿಂದಿನ ಸರ್ಕಾರ ಮದ್ಯಮಕ್ಕೆ ಕಡಿಮೆ ಪೌಷ್ಟಿಕ ಆಹಾರ ತೀವ್ರಕ್ಕೆ ಮಾತ್ರ ಪೌಷ್ಟಿಕಾಂಶವುಳ್ಳ ಆಹಾರ ಕೊಡುತ್ತಿದ್ದರು. ನಮ್ಮ ಸರ್ಕಾರ ಅದನ್ನು ಬದಲಾವಣೆ ಮಾಡಿ ತೀವ್ರ ಪೌಷ್ಟಿಕಾಂಶದ ಕೊರತೆಯಿರುವವರಿಗೆ ನೀಡುವ ಆಹಾರವನ್ನೇ ಎಲ್ಲರಿಗೂ ನೀಡಬೇಕೆಂಬ ಪ್ರಮುಖ ತೀರ್ಮಾನ ಮಾಡಿದ್ದೇವೆ. ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಕಲ್ಯಾಣ ಕರ್ನಾಟಕಕ್ಕೆ 24 ಪಿಹೆಚ್ ಸಿ ಕೇಂದ್ರವನ್ನು ಸಿ ಹೆಚ್ ಸಿ ಕೇಂದ್ರವಾಗಿ ಮೇಲ್ದರ್ಜೇಗೇರಿಸಲಾಗುತ್ತಿದೆ. ಹಾಗು ಹೊಸ ಪಿಹೆಚ್ ಸಿ ಗಳನ್ನು ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆ ಬಂದಿರುವುದು ನಮ್ಮೆಲ್ಲ ಪ್ರಯತ್ನಕ್ಕೆ ಜಿಂದಾಲ್ ಕಂಪನಿ ಶಕ್ತಿ ಹಾಗೂ ಬೆಂಬಲ ನೀಡಿದೆ. ಜಿಂದಾಲ್ ಸಂಸ್ಥೆಗೆ ಶಕ್ತಿ ಇದೆ. ಇನ್ನಷ್ಟು ಸಿಎಸ್ ಆರ್ ನಿಧಿಯನ್ನು ಬಳ್ಳಾರಿ, ಹೊಸಪೇಟೆ, ಎರಡೂ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಲ್ಲಿ ಜಿಂದಾಲ್ ಕೊಡುಗೆಯನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಬಿ ನಾಗೇಂದ್ರ, ಸೋಮಶೇಖರರೆಡ್ಡಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.












Click it and Unblock the Notifications