ಮಾರ್ಚ್ 9ರಿಂದ ಕೇಂದ್ರ ಚುನಾವಣಾ ಆಯೋಗ ತಂಡದಿಂದ ಕರ್ನಾಟಕ ಪ್ರವಾಸ
ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಯನ್ನು ಪರಿಶೀಲಿಸಲು ರಾಜೀವ್ ಕುಮಾರ್ ಅವರು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರೊಂದಿಗೆ ಬರಲಿದ್ದಾರೆ.
ಬೆಂಗಳೂರು, ಮಾರ್ಚ್ 8: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕಗಳ ಘೋಷಣೆಗೆ ಪೂರ್ವಭಾವಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಾರ್ಚ್ 9ರಂದು ಮೂರು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಯನ್ನು ಪರಿಶೀಲಿಸಲು ರಾಜೀವ್ ಕುಮಾರ್ ಅವರು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರೊಂದಿಗೆ ಬರಲಿದ್ದಾರೆ. ತಂಡವು ಸರಣಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. 15ನೇ ವಿಧಾನಸಭೆಯ ಅವಧಿ ಮೇ ತಿಂಗಳಿಗೆ ಮುಕ್ತಾಯವಾಗಲಿದೆ.

ಮೊದಲ ದಿನ ಚುನಾವಣಾ ಆಯೋಗದ ತಂಡವು ಚುನಾವಣಾ ತಯಾರಿ ಕುರಿತು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದೆ. ನಂತರ ರಾಜಕೀಯ ಪಕ್ಷಗಳ ಜತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಪಡೆಯಲಾಗುವುದು. ಸಂಜೆ ರಾಜೀವ್ ಕುಮಾರ್ ಒಳಗೊಳ್ಳುವಿಕೆ ಮತ್ತು ಪ್ರಜಾಪ್ರಭುತ್ವದ ಸಮಗ್ರತೆ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ.

ಎರಡನೇ ದಿನ ಚುನಾವಣಾ ತಂಡವು ಎಲ್ಲಾ 34 ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ರಾಜೀವ್ ಕುಮಾರ್ ಮತ್ತು ಅವರ ತಂಡವು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಇಒ ಮತ್ತು ಬಿಬಿಎಂಪಿ ಆಯೋಜಿಸಿರುವ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಅದರ ನಂತರ ಕುಮಾರ್ ಅವರು ಚುನಾವಣಾ ರಾಯಭಾರಿಗಳು, ವಿದ್ಯಾರ್ಥಿಗಳು, ವಿಶೇಷಚೇತನರು ಮತ್ತು ಇತರರೊಂದಿಗೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 11 ರಂದು, ಕುಮಾರ್ ನವದೆಹಲಿಗೆ ಹಿಂತಿರುಗುವ ಮೊದಲು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ.












Click it and Unblock the Notifications