ಕಾವೇರಿ ವಿವಾದ: ಹೋರಾಟದ ನಡುವೆ ಮತ್ತೆ ಶಾಕ್: 18 ದಿನ ತಮಿಳುನಾಡಿಗೆ ನೀರು ಹರಿಸಲು ಆದೇಶ
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್ ಮಾಡುತ್ತಿರುವ ನಡುವೆಯೇ ರಾಜ್ಯಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ನಮಗೇ ನೀರು ಇಲ್ಲ ಎಂದರೂ ತಮಿಳುನಾಡಿಗೆ ಮತ್ತೆ 18 ದಿನ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿದೆ.
ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ರಾಜ್ಯಕ್ಕೆ ಈ ಆದೇಶ ನೀಡಿದೆ. ಪ್ರತಿ ದಿನ 3 ಸಾವಿರ ಕ್ಯೂಸೆಕ್‌ನಂತೆ ಮುಂದಿನ 18 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿದೆ. ಕಾವೇರಿ ನೀರು ಹರಿಸಲು ಕಳೆದ ಬಾರಿ ನೀಡಿದ್ದ ಆದೇಶ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಮಂಗಳವಾರ ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಿತು.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರೂ ಕೂಡ, ಎರಡೂ ರಾಜ್ಯಗಳ ವಾದವನ್ನು ಆಲಿಸಿದ ಸಮಿತಿ ಮತ್ತೆ 18 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ರಾಜ್ಯಕ್ಕೆ ಆದೇಶ ನೀಡಿದೆ.
ಸಭೆಯ ಮುಖ್ಯಾಂಶಗಳು
ಕರ್ನಾಟಕ ಸರ್ಕಾರ ಸಭೆಯಲ್ಲಿ ರಾಜ್ಯದ ಸ್ಥಿತಿಯನ್ನು ಅಂಕಿ ಅಂಶಗಳ ಸಮೇತ ಮುಂದಿಟ್ಟಿತು. ಸೆಪ್ಟೆಂಬರ್ 25ರವರೆಗೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಿಗೆ 53.04 ಪ್ರತಿಶತ ಒಳಹರಿವಿನ ಕೊರತೆ ಇದೆ ಎಂದು ವಾದ ಮಾಡಿತು.
ಕರ್ನಾಟಕ ಸರ್ಕಾರವು ಸೆ.13ರಂದು ನೀಡಿದ್ದ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಅಂಶವು ಸಮಿತಿ ಪರಿಗಣಿಸಬೇಕು ಎಂದು ಹೇಳಿತ್ತು.
ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ ಅಥವಾ ಅದರ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಬೇಕಾದ ಹರಿವುಗಳಿಗೆ ಕೊಡುಗೆ ನೀಡುವುದಿಲ್ಲ ಎಂದು ವಾದಿಸಿತ್ತು.
ತಮಿಳುನಾಡಿನ ವಾದವೇನು?
ಕರ್ನಾಟಕವೂ ಸಹ ಸಂಕಷ್ಟದ ಅನುಪಾತದ ಆಧಾರದ ಮೇಲೆ ನೀರಾವರಿ ಪೂರೈಕೆಯನ್ನು ಕಡಿಮೆ ಮಾಡಬೇಕು. ಕರ್ನಾಟಕವು ತಕ್ಷಣವೇ ಕೊರತೆಯ ಪ್ರಮಾಣವನ್ನು ಬಿಡುಗಡೆ ಮಾಡಬೇಕು ಮತ್ತು ಸಂಕಷ್ಟದ ಅನುಪಾತಕ್ಕೆ ಅನುಗುಣವಾಗಿ ಮತ್ತಷ್ಟು ನೀರು ಹರಿಸಬೇಕು ಎಂದು ಒತ್ತಾಯಿಸಿತು.
ಎರಡೂ ಕಡೆಯ ವಾದ ಆಲಿಸಿದ ಸಮಿತಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ 3000ಕ್ಯೂಸೆಕ್ಸ್ ನೀರನ್ನು ಬಿಳಿಗುಂಡ್ಲುವಿನಲ್ಲಿ ಹರಿಸುವಂತೆ ಶಿಫಾರಸ್ಸು ಮಾಡಿದೆ.












Click it and Unblock the Notifications