ಕಾವೇರಿ ಜಲವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಸಿಡಬ್ಲ್ಯೂಆರ್ಸಿ ಆದೇಶ ಪ್ರಶ್ನಿಸಲಿದೆ ಕರ್ನಾಟಕ
ಬೆಂಗಳೂರು, ಸೆಪ್ಟೆಂಬರ್ 27: ಸೆಪ್ಟೆಬರ್ 28ರಿಂದ ಮುಂದಿನ 18 ದಿನಗಳ ಕಾಲ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲು ಮುಂದಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ತಮಿಳುನಾಡಿಗೆ ನಿತ್ಯವೂ 3,000 ಕ್ಯೂಸೆಕ್ಸ್ ನೀರನ್ನು ಕೆಆರ್‌ಎಸ್ ಜಲಾಶಯದಿಂದ ಬಿಡುವಂತೆ ಆದೇಶ ನೀಡಿದ ಒಂದು ದಿನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಸಿಡಬ್ಲ್ಯುಆರ್‌ಸಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳನ್ನೊಳಗೊಂಡ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಕರ್ನಾಟಕವು ತಮಿಳುನಾಡಿಗೆ ಸೆಪ್ಟೆಂಬರ್ 28ರಿಂದ ಮುಂದಿನ 18 ದಿನಗಳ ಕಾಲ ಪ್ರತಿ ದಿನವೂ 3,000 ಕ್ಯೂಸೆಕ್ಸ್ ಹರಿಸುವಂತೆ ಆದೇಶ ನೀಡಿದೆ.
ಈ ಕುರಿತು ಮಾತನಾಡಿದ ಸಿಎಂ, ಕಾವೇರಿ ನೀರು ನಿಯಂತ್ರಣ ಸಮಿತಿ ಪ್ರತಿದಿನ 3,000 ಕ್ಯೂಸೆಕ್ಸ್ ಹರಿಸುವಂತೆ ಸೂಚಿಸಿದೆ. ಈ ಬಗ್ಗೆ ನಮ್ಮ ಕಾನೂನು ತಜ್ಞರೊಂದಿಗೆ ಈಗಾಗಲೇ ಸಮಾಲೋಚನೆ ಮಾಡಿದ್ದೇವೆ. ಬಳಿಕ ಅವರು ಸಿಡಬ್ಲ್ಯುಆರ್‌ಸಿ ಆದೇಶವನ್ನು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ತಮಿಳುನಾಡಿಗೆ ನೀರು ಬಿಡಲು ನೀರಿಲ್ಲ. ಈ ಆದೇಶವನ್ನು ನಾವು ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ತಿಳಿಸಿದರು.
45 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನ 5,000 ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಆದೇಶ ಮಾಡಿದ್ದ ಸಿಡಬ್ಲ್ಯುಆರ್‌ಸಿ ಬಳಿಕ ಮಂಗಳವಾರ ನಡೆದ ಸಭೆಯ ನಂತರ ತಮಿಳುನಾಡಿಗೆ ಬಿಡುವ ನೀರಿನ ಪ್ರಮಾಣವನ್ನು 3,000 ಕ್ಯೂಸೆಕ್ಸ್‌ಗೆ ಇಳಿಸಿತ್ತು. ಅದು ರಾಜ್ಯದ ಪರ ವಕೀಲರ ವಾದಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಮತ್ತು ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ನೀರಿನ ಸಂಗ್ರಹದ ಮಟ್ಟವನ್ನು ತಗ್ಗಿದ ಕಾರಣ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ವಾದಿಸಿತ್ತು. ಆದರೆ ಕಳೆದ ಎರಡು ತಿಂಗಳಿಂದ ನೀರಿನ ಬಿಡುಗಡೆ ಪ್ರಮಾಣವು ಕಡಿಮೆಯಾಗಿದ್ದು, ಈ ಪ್ರಮಾಣ ಸರಿದೂಗಿಸಲು ಕರ್ನಾಟಕಕ್ಕೆ 12,500 ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶನ ನೀಡುವಂತೆ ತಮಿಳುನಾಡಯ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಒತ್ತಾಯ ಮಾಡಿತ್ತು.
ಈ ಹಿಂದೆ ಕೂಡ ತಮಿಳುನಾಡಿಗೆ ಪ್ರತಿ ದಿನ 5,000 ಕ್ಯೂಸೆಕ್ಸ್ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಆದರೆ ಅದರ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಕರ್ನಾಟಕ ಬಂದ್:
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಮಂಗಳವಾರ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ 50 ಸಂಸ್ಥೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಯಶಸ್ವಿಯಾದ ಬೆನ್ನಲ್ಲೇ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ, ಮಂಗಳವಾರದ ಬಂದ್‌ಗೆ ಬೆಂಗಳೂರು ಸೇರಿದಂತೆ ಹಲವಾರು ಕಡೆ ಬೆಂಬಲ ವ್ಯಕ್ತಪಡಿಸಿದ್ದ ಹಲವಾರು ಸಂಘಸಂಸ್ಥೆಗಳು ಮುಂದಿನ ಕರ್ನಾಟಕ ಬಂದ್‌ಗೂ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ.












Click it and Unblock the Notifications