ಕನ್ನಡಿಗರಿಗೇ ಕಾವೇರಿ 'ನೀರು ಕುಡಿಸಿದ' ರಾಜಕಾರಣಿಗಳು : ಟೈಮ್ ಲೈನ್

By: ಬಾಲರಾಜ್ ತಂತ್ರಿ
Subscribe to Oneindia Kannada

ಗಣೇಶ ಹಬ್ಬದಂದು (ಸೆ5) ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ನಂತರ, ನದಿನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಇದರಿಂದ, ಮಹಾದಾಯಿ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಪರವಾಗಿ ತೀರ್ಪು ಬರಬಹುದು ಅನ್ನೋ ಆಶಾವಾದವೇ ಇಟ್ಟುಕೊಳ್ಳದಂತಾಗಿದೆ. ಪ್ರತೀ ಬಾರಿಯ ತೀರ್ಪಿನಲ್ಲೂ ರಾಜ್ಯಕ್ಕೆ ಹಿನ್ನಡೆ..ಹಿನ್ನಡೆ..

ಇದಕ್ಕೆ ಯಾರನ್ನು ದೂಷಿಸುವುದು? ರಾಜ್ಯದ ಪರವಾಗಿ ವಾದ ಮಂಡಿಸುತ್ತಿರುವ ವಕೀಲರೇ, ಅಸಮರ್ಥ ನೀರಾವರಿ ಸಚಿವರೇ, ಸರಕಾರದ ಇಚ್ಛಾಶಕ್ತಿಯ ಕೊರತೆಯೇ, ಏಕಪಕ್ಷೀಯವಾಗಿ ತಮಿಳುನಾಡು ಪರ ನಿಂತಿರುವ ಕಾವೇರಿ ಪ್ರಾಧಿಕಾರವೋ? ಒಟ್ಟಿನಲ್ಲಿ ರಾಜ್ಯಕ್ಕೆ ಮುಖಭಂಗ, ನೀರಿಲ್ಲದಿದ್ದರೂ ಪಕ್ಕದ ರಾಜ್ಯಕ್ಕೆ ನೀರು ಬಿಡಬೇಕಾದ ಅನಿವಾರ್ಯತೆ. (ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ)

ಮೂಲತಃ ಕನ್ನಡತಿಯಾಗಿರುವ ಮತ್ತು ತಾನೆಂದೂ ಕನ್ನಡಿಗರ ಪರವಾಗಿಲ್ಲ ಎಂದು ತಮಿಳರಿಗೆ ರುಜುವಾತು ಪಡಿಸಲೋ ಏನೋ, ಜಯಲಲಿತಾ ಸಿಎಂ ಆಗಿದ್ದ ಅವಧಿಯಲ್ಲೇ ಈ ವಿವಾದ ಕೋರ್ಟ್ ಬಾಗಿಲು ತಟ್ಟುವುದು ಹೆಚ್ಚು.

ಕೋರ್ಟ್ ಮೂಲಕವಾಗಲಿ ಪ್ರಾಧಿಕಾರದ ಮೂಲಕವಾಗಲಿ ತಮ್ಮ ಪಾಲಿಗೆ ಸಂದ ಬೇಕಾಗಿರುವ ನೀರನ್ನು ಹಠಕ್ಕೆ ಬಿದ್ದಾದರೂ ಪಡೆದುಕೊಳ್ಳುವ ಜಯಲಲಿತಾ ಅವರ 'ರಾಜಕೀಯ'ವನ್ನು ಮೆಚ್ಚಲೇಬೇಕು. ಈ ಛಲ ನಮ್ಮವರಿಗೆ ಇಲ್ಲದಾಗಿರುವುದು ಕನ್ನಡಿಗರ ದುರಂತ.

ಶತಮಾನಗಳಿಂದ ನಡೆಯುತ್ತಿರುವ ಕಾವೇರಿ ವಿವಾದದಿಂದಾಗಿ, ಕನ್ನಡಿಗರ ಮತ್ತು ತಮಿಳರ ನಡುವಿನ ಭಾಂದವ್ಯ 'ಇಂಡೋ ಪಾಕ್' ಸಂಬಂಧದಂತಾಗಿದೆ. ಅದೇನೆ ಇರಲಿ ಪೂರ್ವತಯಾರಿ ಮಾಡಿಕೊಂಡು, ಕೋರ್ಟಿನಲ್ಲಿ ಸಮರ್ಥವಾಗಿ ರಾಜ್ಯದ ಸಾಂಬಾ ಬೆಳೆಗಾರರಿಗಾಗಿ ವಾದ ಮಂಡಿಸುವ ತಮಿಳುನಾಡು ಸರಕಾರದ ಬೆನ್ನುತಟ್ಟುವುದು.. ಪ್ರತಿಕೃತಿ ದಹಿಸುವುದು ಮತ್ತು ಬಂದ್ ಕರೆನೀಡುವುದಕ್ಕಿಂತ ಉತ್ತಮ.

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದಾಗ ಬೇಡವೆಂದರೂ ಬಿಳಿಗುಂಡ್ಲು ಮಾಪನಕೇಂದ್ರದಿಂದ ಮೆಟ್ಟೂರು ಜಲಾಶಯಕ್ಕೆ ಕಾವೇರಿ ನದಿ ಹರಿದುಹೋಗುತ್ತಿದೆ. ಆದರೆ ನೀರಿನ ಸಮಸ್ಯೆ ಉಂಟಾದಾಗ ನೀರು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳು (ಸಿದ್ದರಾಮಯ್ಯನವರಿಗೆ ಮಾತ್ರ ಅನ್ವಯಿಸುವುದಿಲ್ಲ) ಪ್ರಾಧಿಕಾರ/ ತ.ನಾ ಸರಕಾರದ ಜೊತೆ ಪತ್ರವ್ಯವಹಾರ ನಡೆಸುವ ಗೋಜಿಗೂ ಹೋಗದಿದ್ದದ್ದು ವಿಷಾದನೀಯ.
(ಕಾವೇರಿ ವಿವಾದ, : ಸೆ9ರಂದು ಕರ್ನಾಟಕ ಬಂದ್)

ಇದುವರೆಗಿನ ಕಾವೇರಿ ನದಿನೀರು ಹಂಚಿಕೆಯ ಟೈಂಲೈನ್ ಸ್ಲೈಡಿನಲ್ಲಿ

ತಲಕಾವೇರಿಯಿಂದ ಬಂಗಾಳ ಕೊಲ್ಲಿಯವರೆಗೆ

ತಲಕಾವೇರಿಯಿಂದ ಬಂಗಾಳ ಕೊಲ್ಲಿಯವರೆಗೆ

ಕಾವೇರಿ ನದಿ ಹುಟ್ಟಿ ಸಮುದ್ರ ಸೇರುವವರೆಗಿನ ಒಟ್ಟು ಉದ್ದ ಅಂದಾಜು 802 ಕಿ.ಮೀ. ಅದರಲ್ಲಿ ರಾಜ್ಯದ ಕಾವೇರಿ ಜಲಾಯನ ಪ್ರದೇಶ 34ಸಾವಿರ ಮತ್ತು ತಮಿಳುನಾಡಿನ 44ಸಾವಿರ ಕಿ.ಮೀ ಒಳಗೊಂಡಿದೆ. ಕೇರಳ ಮತ್ತು ಪುದುಚೇರಿಯ ಪಾಲೂ ಇದರಲ್ಲಿದೆ.

ಅಂದಿನ ಒಪ್ಪಂದ

ಅಂದಿನ ಒಪ್ಪಂದ

ಮದ್ರಾಸ್ ಮತ್ತು ಮೈಸೂರು ಒಪ್ಪಂದದ ಪ್ರಕಾರ, ಕಾವೇರಿ ನದಿ ಪಾತ್ರದಲ್ಲಿ ಈಗ ಅಸ್ತಿತ್ವದಲ್ಲಿರುವ ಕಾಮಗಾರಿಗಳನ್ನು ಹೊರತು ಪಡಿಸಿ ಹೊಸ ನೀರಾವರಿ ಜಲಾಶಯಗಳನ್ನು ನಿರ್ಮಿಸಬಾರದು. ಒಂದು ವೇಳೆ ನಿರ್ಮಿಸಬೇಕಾದ ಅನಿವಾರ್ಯತೆ ಇದ್ದರೆ ಅದರ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ನೀಡಬೇಕೆಂದು ಕ್ರಿ.ಶ 1892ರಲ್ಲಿ ನಿರ್ಣಯಕ್ಕೆ ಬರಲಾಗಿತ್ತು.

ರಾಜ್ಯಗಳ ಪುನರ್ವಿಂಗಡೆ

ರಾಜ್ಯಗಳ ಪುನರ್ವಿಂಗಡೆ

1956ರಲ್ಲಿ ರಾಜ್ಯಗಳ ಪುನರ್ವಿಂಗಡೆಯಾದ ನಂತರ ಕಾವೇರಿ ನದಿಗೆ ಉಪನದಿಯ ಮುಖಾಂತರ ಕಬಿನಿ, ಹೇಮಾವತಿ, ಹಾರಂಗಿ ಮತ್ತು ಸುವರ್ಣಾವತಿ ಜಲಾಶಯವನ್ನು ನಿರ್ಮಿಸಿತು. ಇದಕ್ಕೆ ವರ್ಷಾನುಗಟ್ಟಲೆ ತಮಿಳುನಾಡು ರೈತರ ಪ್ರತಿಭಟನೆ ನಡೆಯುತ್ತಲೇ ಇದ್ದವು. ಅಲ್ಲಿನ ರೈತರ ಬೇಡಿಕೆಯಂತೆ, ನ್ಯಾಯ ಮಂಡಳಿ ರಚಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಮೇ 1990ರಂದು ಆದೇಶ ನೀಡಿತು.

ಅಸ್ತಿತ್ವಕ್ಕೆ ಬಂದ ಪ್ರಾಧಿಕಾರ

ಅಸ್ತಿತ್ವಕ್ಕೆ ಬಂದ ಪ್ರಾಧಿಕಾರ

ಕೋರ್ಟ್ ಆದೇಶದಂತೆ 1990ರಲ್ಲಿ ಅಸ್ತಿತ್ವಕ್ಕೆ ಬಂದ ಮುಖರ್ಜಿ ನೇತೃತ್ವದ ಪ್ರಾಧಿಕಾರ, ನಿರ್ದಿಷ್ಟ ಮಿತಿಗಿಂತ ಜಾಸ್ತಿಯಾಗಿ ಜಲಾಯನ ಪ್ರದೇಶವನ್ನು ವಿಸ್ತರಿಸಿಕೊಳ್ಳಬಾರದೆಂದು ಕರ್ನಾಟಕಕ್ಕೆ ಆದೇಶ ನೀಡಿತು. ರಾಜ್ಯಕ್ಕೆ ಮೊದಲ ಪೆಟ್ಟು ಬಿದ್ದಿದ್ದೇ ಇಲ್ಲಿ. ಪ್ರಾಧಿಕಾರದ ಆದೇಶದ ವಿರುದ್ದ ರಾಜ್ಯದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಯಿತು.

ಕಾವೇರಿ ಪ್ರಾಧಿಕಾರ

ಕಾವೇರಿ ಪ್ರಾಧಿಕಾರ

95-96 ರಲ್ಲಿ ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಆದರೂ, ತಮಿಳುನಾಡು ಮಧ್ಯಂತರ ಆದೇಶದ ಮೂಲಕ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಮೊರೆಹೋಯಿತು. ಸುಪ್ರೀಂ ಕೋರ್ಟ್ ಇದನು ನ್ಯಾಯಮಂಡಳಿಗೆ ವರ್ಗಾಯಿಸಿತು. ಕೊನೆಗೆ 6 ಟಿಎಂಸಿ ನೀರು ಪಡೆದುಕೊಳ್ಳುವಲ್ಲಿ ತ.ನಾ ಸಫಲವಾಯಿತು.

ಕಾವೇರಿ ಮಾನಿಟರಿಂಗ್ ಕಮಿಟಿ

ಕಾವೇರಿ ಮಾನಿಟರಿಂಗ್ ಕಮಿಟಿ

1997 ರಲ್ಲಿ ಕೇಂದ್ರ ಸರ್ಕಾರ, ಜಲಾಯನ ಪ್ರದೇಶದ ನಾಲ್ಕು ರಾಜ್ಯಗಳ ಒಪ್ಪಿಗೆಯ ಮೇರೆಗೆ ಕಾವೇರಿ ರಿವರ್ ಅಥಾರಿಟಿ/ ಕಾವೇರಿ ಮಾನಿಟರಿಂಗ್ ಕಮಿಟಿಯಂಬ ಎರಡು ಸಮಿತಿಗಳನ್ನು ಸ್ಥಾಪಿಸಿತು. ನದಿನೀರು ಹಂಚಿಕೆಯ ವಿಚಾರದಲ್ಲಿ ಏನೇ ಕುಂದುಕೊರತೆಯಿದ್ದರೂ ಕಮಿಟಿ ಮೂಲಕವೇ ಇತ್ಯರ್ಥವಾಗಬೇಕು ಎನ್ನುವ ನಿರ್ಣಯಕ್ಕೆ ಬರಲಾಯಿತು.

2002ರಲ್ಲಿ ಮತ್ತೆ ಕಿರಿಕ್

2002ರಲ್ಲಿ ಮತ್ತೆ ಕಿರಿಕ್

ಕರ್ನಾಟಕದಿಂದ ಸರಿಯಾದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ ಎಂದು ಮತ್ತೆ ತಮಿಳುನಾಡು 2002ರಲ್ಲಿ ಸುಪ್ರೀಂ ಮೊರೆ ಹೋಯಿತು. ಕರ್ನಾಟಕ ಸರ್ಕಾರಕ್ಕೆ ಪ್ರತಿ ದಿನ 1.25 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಆದೇಶ ನೀಡಿತು. ಆದರೆ ರಾಜ್ಯದಲ್ಲಿ ಹೋರಾಟ ಭುಗಿಲೆದ್ದಾಗ ಕರ್ನಾಟಕ ನೀರು ಬಿಡುವುದನ್ನು ನಿಲ್ಲಿಸಿತು. ಆದರೆ, ನ್ಯಾಯಾಂಗ ನಿಂದನೆ ಭಯಕ್ಕಾಗಿ ಮತ್ತೆ ನೀರು ಬಿಡಲಾರಂಭಿಸಿತು.

ಕಾವೇರಿ ನ್ಯಾಯಮಂಡಳಿ ತೀರ್ಪು

ಕಾವೇರಿ ನ್ಯಾಯಮಂಡಳಿ ತೀರ್ಪು

05.02.2007ರಲ್ಲಿ ಕಾವೇರಿ ನ್ಯಾಯಮಂಡಳಿ ಪ್ರತೀ ವರ್ಷ ಕರ್ನಾಟಕ, ತಮಿಳುನಾಡಿಗೆ 192, ಪುದುಚೇರಿಗೆ 7 ಮತ್ತು ಕೇರಳಕ್ಕೆ 30 ಟಿಎಂಸಿ ನೀರನ್ನು ಬಿಡಬೇಕು ಎನ್ನುವ ತೀರ್ಪನ್ನು ನೀಡಿತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಮೇಲ್ಮನವಿ ಸಲ್ಲಿಸಿತು.

ಜಂತರ್ ಮಂತರ್

ಜಂತರ್ ಮಂತರ್

ನ್ಯಾಯಮಂಡಳಿಯ ತೀರ್ಪಿನ ವಿರುದ್ದ ನಾಡಿನ ಜನತೆ ಬೀದಿಗಿಳಿದರು. ಸುಮಾರು 25ಸಾವಿರಕ್ಕೂ ಹೆಚ್ಚು ಜನರು ದೆಹಲಿಗೆ ತೆರಳಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದರು. ಚಿತ್ರೋದ್ಯಮವೂ ಪ್ರತಿಭಟನೆಯಲ್ಲಿ ಭಾಗವಹಿಸಿತು.

ಮೇಕೆದಾಟು ಯೋಜನೆ

ಮೇಕೆದಾಟು ಯೋಜನೆ

ಕಾವೇರಿ ಜಲಾಯನ ಪ್ರದೇಶದ ರೈತರಿಗಾಗಿ ಮೇಕೆದಾಟು ಯೋಜನೆಯನ್ನ ಜಾರಿ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿತ್ತು. ಆದರೆ ಅದಕ್ಕೂ ಕಲ್ಲು ಹಾಕಿದ ತಮಿಳುನಾಡು ಸರಕಾರ, ಯಾವುದೇ ಕಾರಣಕ್ಕೂ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿಬಾರದೆಂದು ಸುಪ್ರೀಂಕೋರ್ಟ್ ಮೆಟ್ಟಲೇರಿತು.

ಮನಮೋಹನ್ ಸಿಂಗ್

ಮನಮೋಹನ್ ಸಿಂಗ್

ಪ್ರಾಧಿಕಾರದ ಚೇರ್ಮನ್ ಆಗಿರುವ, ಪಿಎಂ ಮನಮೋಹನ್ ಸಿಂಗ್, 19.09.12ರಂದು ನಡೆದ ಸಭೆಯಲ್ಲಿ ಕರ್ನಾಟಕ ಪ್ರತೀದಿನ 9ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಸೂಚಿಸಿದರು. ಆದರೆ ಕರ್ನಾಟಕ ಈ ಸೂಚನೆಯನ್ನು ಪಾಲಿಸಲು ಸಾಧ್ಯವಿಲ್ಲವೆಂದು, ಸಭೆ ನಡೆದ ಎರಡು ದಿನದ ನಂತರ ಪ್ರಾಧಿಕಾರಕ್ಕೆ ಪಿಟಿಷನ್ ಸಲ್ಲಿಸಿತು.

ರಾಜ್ಯಕ್ಕೆ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್

ರಾಜ್ಯಕ್ಕೆ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್

ರಾಜ್ಯದ ನಿರ್ಧಾರದಿಂದ ತ.ನಾ ಮತ್ತೆ ಸುಪ್ರೀಂ ಮೊರೆಹೋಯಿತು. ರಾಜ್ಯದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ 28.09.12ರಂದು ನೀರು ಬಿಡುವಂತೆ ಸೂಚಿಸಿತು. 04.10.12ರಂದು ರಾಜ್ಯ ಸರಕಾರ ತೀರ್ಪು ಮರುಪರಿಶೀಲಿಸುವಂತೆ ಸುಪ್ರೀಂಗೆ ಮನವಿ ಮಾಡಿತು.

ತಮಿಳುನಾಡಿಗೆ ಮತ್ತೆ ಮುನ್ನಡೆ

ತಮಿಳುನಾಡಿಗೆ ಮತ್ತೆ ಮುನ್ನಡೆ

09.10.12ರಂದು ಮತ್ತೆ ಪಿಟಿಷನ್ ಸಲ್ಲಿಸಿದೆ ತ.ನಾ, 48 ಟಿಎಂಸಿ ನೀರು ಬಿಡುವಂತೆ ಮನವಿ ಸಲ್ಲಿಸಿತು. ಪ್ರಾಧಿಕಾರ 16.11.12 ರಿಂದ 30.11.12ರ ವರೆಗೆ 4.81 ಟಿಎಂಸಿ ನೀರು ಬಿಡಬೇಕೆಂದು ಆದೇಶ ನೀಡಿತು. 06.12.12ರಂದು ಸುಪ್ರೀಂಕೋರ್ಟ್ ಪ್ರಾಧಿಕಾರದ ತೀರ್ಪನ್ನು ಎತ್ತಿಹಿಡಿದು, ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚಿಸಿತು.

ಪರಿಹಾರಕ್ಕೆ ಮನವಿ

ಪರಿಹಾರಕ್ಕೆ ಮನವಿ

ಸೂಚನೆಯಂತೆ ಕರ್ನಾಟಕ ನೀರು ಬಿಟ್ಟಿಲ್ಲ, ಹಾಗಾಗಿ ಬೆಳೆ ಪರಿಹಾರವಾಗಿ 2,480 ಕೋಟಿ ಪರಿಹಾರ ಕೊಡಲು ನಿರ್ದೇಶನ ನೀಡುವಂತೆ 28.05.13ರಂದು ತಮಿಳುನಾಡಿನಿಂದ ಸುಪ್ರೀಂಕೋರ್ಟಿಗೆ ಮನವಿ. 26.06.13ರಂದು ಕಾವೇರಿ ಮ್ಯಾನೇಜ್ಮೆಂಟ್ ಬೋರ್ಡ್ ಸ್ಥಾಪಿಸುವಂತೆ ಜಯಲಲಿತಾ ಅವರಿಂದ ಸುಪ್ರೀಂಕೋರ್ಟಿಗೆ ಮನವಿ.

ಸಭೆಯಲ್ಲಿ ಜಟಾಪಟಿ

ಸಭೆಯಲ್ಲಿ ಜಟಾಪಟಿ

ಜುಲೈ ತಿಂಗಳಲ್ಲಿ 34, ಆಗಸ್ಟ್ ನಲ್ಲಿ 50 ಟಿಎಂಸಿ ನೀರು ಬಿಡಬೇಕು ಎನ್ನುವ ತ.ನಾ ವಾದಕ್ಕೆ, 15.07.2013ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪ್ರತಿನಿಧಿಗಳ ನಡುವೆ ಜಟಾಪಟಿ ನಡೆದು, ಕರ್ನಾಟಕ ಸಭೆಯಿಂದ ಹೊರನಡೆಯಿತು.

ತಮಿಳುನಾಡು ಮತ್ತೆ ಅರ್ಜಿ

ತಮಿಳುನಾಡು ಮತ್ತೆ ಅರ್ಜಿ

40 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಸಾಂಬಾ ಬೆಳೆಗೆ ಕಾವೇರಿ ನದಿಯಿಂದ 50.52 ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಆಗಸ್ಟ್ 2016ರಂದು ಮತ್ತೆ ಅರ್ಜಿ.

ಮತ್ತೆ ತಮಿಳುನಾಡು ಪರ ಸುಪ್ರೀಂ ತೀರ್ಪು

ಮತ್ತೆ ತಮಿಳುನಾಡು ಪರ ಸುಪ್ರೀಂ ತೀರ್ಪು

ಮುಂದಿನ 10 ದಿನಗಳ ಕಾಲದಲ್ಲಿ ಪ್ರತೀದಿನ 15ಸಾವಿರ ಕ್ಯೂಸೆಕ್ಸ್ ನೀರನ್ನು ಕರ್ನಾಟಕ, ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂಕೋರ್ಟ್ 05.09.2016ರಂದು ಆದೇಶ. ಸುಪ್ರೀಂ ಆದೇಶದ ವಿರುದ್ದ ಬೀದಿಗಿಳಿದ ರೈತರು, ಕನ್ನಡಪರ ಹೋರಾಟಗಾರರು. ಸೆ6ರಂದು ಮಂಡ್ಯ, ಸೆ 9ರಂದು ಕರ್ನಾಟಕ ಬಂದ್ ಗೆ ಕರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cauvery river water dispute between Tamil Nadu and Karnataka. The complete time line of Cauvery water issue.
Please Wait while comments are loading...