ತಮಿಳುನಾಡಿಗೆ ಕಾವೇರಿ ನೀರು ಹರಿಸದಿರಲು ಕರ್ನಾಟಕ ನಿರ್ಧಾರ?

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 21 : ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಮಾನ್ಯ ಮಾಡಿ, ರಾಜ್ಯದ ರೈತರ ಒತ್ತಾಸೆಯನ್ನು ಕಡೆಗಣಿಸಿ ಕರ್ನಾಟಕ ಸರಕಾರ ತಮಿಳುನಾಡಿಗೆ ಇಂದಿನಿಂದ ಸೆಪ್ಟೆಂಬರ್ 27ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಬಿಡುತ್ತದಾ?

ಬಲ್ಲ ಮೂಲಗಳ ಪ್ರಕಾರ, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ತಮಿಳುನಾಡಿಗೆ ನೀರು ಹರಿಸದಿರಲು ಸಿದ್ದರಾಮಯ್ಯ ಸರಕಾರ ನಿರ್ಧಾರ ತೆಗೆದುಕೊಂಡಿದೆ. ಸಂಪುಟ ಸಚಿವರ ಅಭಿಮತ ಪಡೆದುಕೊಂಡು ಈ ಕಠಿಣ ನಿರ್ಧಾರಕ್ಕೆ ಬರಲು ಸರಕಾರ ನಿರ್ಧರಿಸಿದೆ ಮತ್ತು ಇದರಿಂದ ಮುಂದಾಗುವ ಪರಿಣಾಮ ಎದುರಿಸಲು ತಯಾರಾಗಿದೆ.

ಸಪ್ಟೆಂಬರ್ 20ರಂದು ಸರ್ವೋಚ್ಚ ನ್ಯಾಯಾಲಯ ತಮಿಳುನಾಡಿಗೆ 6000 ಕ್ಯೂಸೆಕ್ಸ್ ನೀರು ಬಿಡಬೇಕು ಎಂದುದ ರಾಜ್ಯ ಸರಕಾರಕ್ಕೆ ಮತ್ತು ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಿ, ಸರ್ವ ನಿಯಂತ್ರಣವನ್ನು ಮಂಡಳಿಗೆ ವಹಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. [ಸ್ವಾತಂತ್ರ್ಯ ಬಂದಾಗಿನಿಂದಲೂ ಇಂಥ ತೀರ್ಪು ನೋಡಿಲ್ಲ: ಎಸ್ಸೆಂ ಕೃಷ್ಣ]

Cauvery issue : Karnataka may not release water to Tamil Nadu

ಕೃಷ್ಣರಾಜ ಸಾಗರ, ಹೇಮಾವತಿ, ಕಬಿನಿ ಮತ್ತು ಹಾರಂಗಿ ಜಲಾಶಯಗಳು ಬರಿದಾಗಿರುವ ಹಿನ್ನೆಲೆಯಲ್ಲಿ, ಈ ಸಂಕಷ್ಟಮಯ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚಿಸಲು ಸಿದ್ದರಾಮಯ್ಯ ಸಂಪುಟ ಸಚಿವರ ಸಭೆಯನ್ನು ಕರೆದಿದ್ದರು. ಬಹುತೇಕ ಸಚಿವರು ತಮಿಳುನಾಡಿಗೆ ನೀರು ಬಿಡಬಾರದು ಎಂಬ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ. [ಕೆಆರ್ ಎಸ್ ಖಾಲಿ ಖಾಲಿ: ಎಲ್ಲಿಂದ ನೀರು ಬಿಡೋಣ ಹೇಳಿ?]

ಆದರೆ, ಅಂತಿಮ ನಿರ್ಧಾರವನ್ನು ಇಂದು ಸಂಜೆ ಕರೆಯಲಾಗಿರುವ ಮತ್ತೊಂದು ಕ್ಯಾಬಿನೆಟ್ ಸಭೆಯ ನಂತರ ತೆಗೆದುಕೊಳ್ಳಲಾಗುವುದಾಗಿಯೂ ಹೇಳಿದೆ. ಕಳೆದ ಬಾರಿಯ ಸಭೆಯಲ್ಲಿ, ನೀರು ಬಿಡಬಾರದೆಂಬ ವಿರೋಧ ಪಕ್ಷದ ಅನಿಸಿಕೆಯನ್ನು ಪಕ್ಕಕ್ಕಿಟ್ಟು ನೀರು ಬಿಟ್ಟಿದ್ದರಿಂದ ಮುನಿಸಿಕೊಂಡಿರುವ ವಿರೋಧ ಪಕ್ಷಗಳು ಸರ್ವಪಕ್ಷ ಸಭೆಯನ್ನು ಬಾಯ್ಕಾಟ್ ಮಾಡಿವೆ.

ಈ ನಡುವೆ, ನೀರು ಹರಿಸುವುದನ್ನು ನಿಲ್ಲಿಸುವುದರಿಂದ ಆಗುವ ಸಾಧಕ ಬಾಧಕಗಳನ್ನು ಚರ್ಚಿಸಲು ಒಂದು ದಿನದ ವಿಧಾನಮಂಡಲ ಅಧಿವೇಶನವನ್ನು ಕೂಡ ಕರೆಯಲು ಕಾಂಗ್ರೆಸ್ ಸರಕಾರ ನಿರ್ಧಾರ ಮಾಡಿದೆ. ಒಟ್ಟಿನಲ್ಲಿ, ರೈತರ ಹಿತ ಕಾಪಾಡಲು ಸರಕಾರ ಮುಂದಾಗಿರುವ ಸುದ್ದಿ ಹೋರಾಟ ಮಾಡುತ್ತಿರುವ ರಾಜ್ಯದ ಜನತೆಗೆ ಸಂತಸ ಖಂಡಿತ ತರಲಿದೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]

ಸಂಜೆ ದೇವೇಗೌಡರ ಭೇಟಿ : ನೀರು ಬಿಡುವ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಹತ್ತು ದಿನಗಳ ಹಿಂದೆ ಇದೇ ರೀತಿ ಪರಿಸ್ಥಿತಿ ಎದುರಾಗಿದ್ದಾಗ, ಸರ್ವೋಚ್ಚ ನ್ಯಾಯಾಲಯದ ಆಜ್ಞೆಗೆ ಮಾನ್ಯತೆ ನೀಡಿ ನೀರು ಬಿಡುವಂತೆ ದೇವೇಗೌಡರು ಸೂಚಿಸಿದ್ದರು. ಈ ಬಾರಿ ಗೌಡರ ಅಭಿಮತ ಏನಿರಲಿದೆ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In all probability Karnataka may not release Cauvery water to Tamil Nadu as per order passed by Supreme Court of India. Siddaramaiah held cabinet meeting to discuss the pros and cons of releasing or not releasing water. Final decision will be taken after another cabinet meeting today.
Please Wait while comments are loading...