Cauvery Dispute; ಸುಪ್ರೀಂಕೋರ್ಟ್ ಕೊಟ್ಟ ಸೂಚನೆಗಳು
ಬೆಂಗಳೂರು, ಆಗಸ್ಟ್ 25; ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ತ್ರಿ ಸದಸ್ಯ ಪೀಠ ಕೆಲವು ಸೂಚನೆಗಳನ್ನು ನೀಡಿ, ಸೆಪ್ಟೆಂಬರ್ 1ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಶುಕ್ರವಾರ ತಮಿಳುನಾಡು ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಬಿ. ಆರ್. ಗವಾಯಿ, ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಬಿ. ಕೆ. ಮಿಶ್ರಾ ಒಳಗೊಂಡ ತ್ರಿ ಸದಸ್ಯಪೀಠದಲ್ಲಿ ನಡೆಯಿತು.

ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಎರಡೂ ರಾಜ್ಯಗಳ ಜಲಾಶಯಗಳ ವಾಸ್ತವ ಸ್ಥಿತಿಯ ಕುರಿತು ವರದಿ ಸಲ್ಲಿಕೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿ, ಅರ್ಜಿ ವಿಚಾರಣೆ ಮುಂದೂಡಿತು.
ಸೆಪ್ಟೆಂಬರ್ 1ರ ಮಧ್ಯಂತರ ಅವಧಿಯೊಳಗೆ ಕಾವೇರಿ ನದಿ ಪಾತ್ರದ ರಾಜ್ಯಗಳ ಸಭೆಯನ್ನು ನಡೆಸಬೇಕು ಎಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಸೆಪ್ಟೆಂಬರ್ 28ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ.
24 ಸಾವಿರ ಕ್ಯುಸೆಕ್ ನೀರು ಕೊಡಿ; ಕಳೆದ ಸೋಮವಾರ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಹಾಲಿ ಇರುವ ಬೆಳೆಗಳ ರಕ್ಷಣೆಗಾಗಿ ಪ್ರತಿನಿತ್ಯ 24 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆ. ಬಿ. ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಈ ಅರ್ಜಿಯ ವಿಚಾರಣೆಗೆ ತ್ರಿ ಸದಸ್ಯ ಪೀಠವನ್ನು ರಚನೆ ಮಾಡಲಾಗುತ್ತದೆ ಎಂದು ಹೇಳಿತ್ತು. ಬಳಿಕ ನ್ಯಾಯಪೀಠ ರಚನೆ ಮಾಡಲಾಗಿತ್ತು.
ತಮಿಳುನಾಡು ಸರ್ಕಾರ ಅಂತರರಾಜ್ಯ ನದಿ ನೀರು ಹರಿವು ಮಾಪನ ಕೇಂದ್ರವಾದ ಬಿಳಿಗುಂಡ್ಲುವಿನಲ್ಲಿ ದಾಖಲಾಗುವಂತೆ ಆಗಸ್ಟ್ ತಿಂಗಳ ಅಂತ್ಯದ ತನಕ ಪ್ರತಿನಿತ್ಯ 24 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದೆ.
ಮಳೆ ಕೊರತೆಯ ಹಿನ್ನಲೆಯಲ್ಲಿ ಕಾವೇರಿ ನದಿ ಪಾತ್ರದ ಡ್ಯಾಂಗಳು ಭರ್ತಿಯಾಗಿಲ್ಲ. ಆದ್ದರಿಂದ ಕಾವೇರಿ ನೀರು ಹಂಚಿಕೆ ಅಂತಿಮ ಆದೇಶದಂತೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಿ ಮಂಡ್ಯದಲ್ಲಿರುವ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಈಗ 102 ಅಡಿಗೆ ಕುಸಿತಕಂಡಿದೆ. ಜುಲೈನಲ್ಲಿ ಸುರಿದ ಮಳೆಯ ಬಳಿಕ ಡ್ಯಾಂ ಭರ್ತಿಯಾಗಲು 11 ಅಡಿ ಬಾಕಿ ಇತ್ತು.
ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ಪ್ರಬಲವಾಗಿ ವಾದ ಮಂಡಿಸುವ ಜೊತೆಗೆ ಎಲ್ಲಾ ಪಕ್ಷಗಳನ್ನು ಈ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಕಾವೇರಿ ವಿಚಾರದ ಕುರಿತು ಚರ್ಚೆ ನಡೆಸಲು ಸರ್ವಪಕ್ಷಗಳ ಸಭೆಯನ್ನು ನಡೆಸಿದ್ದಾರೆ.
ಕಳೆದ ವಾರ ದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಯೂ ಕರ್ನಾಟಕ ಪ್ರತಿನಿತ್ಯ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆಗ ತಮಿಳುನಾಡು ಸರ್ಕಾರ ಸಭೆಯಿಂದ ಹೊರ ನಡೆದಿತ್ತು. ಈಗ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ಮತ್ತೆ ಸಭೆಯನ್ನು ಕರೆಯಲು ಸೂಚನೆ ಕೊಟ್ಟಿದೆ.












Click it and Unblock the Notifications