ಸರ್ಕಾರಿ ನೌಕರರಿಗೆ ರಿಯಾಯಿತಿ ದರದ ಕ್ಯಾಂಟೀನ್
ಶಿವಮೊಗ್ಗ, ಜನವರಿ 13: ಕರ್ನಾಟಕದ ಸರ್ಕಾರಿ ನೌಕರರಿಗೆ ಅತ್ಯಂತ ರಿಯಾಯಿತಿ ದರದಲ್ಲಿ ದಿನಪಯೋಗಿ ವಸ್ತುಗಳನ್ನು ಒದಗಿಸಲು ಕ್ಯಾಂಟೀನ್ ಆರಂಭವಾಗಲಿದೆ. ಶಿವಮೊಗ್ಗದಲ್ಲಿ ಜನವರಿ 17ರಂದು ಕ್ಯಾಂಟೀನ್‌ಗೆ ಚಾಲನೆ ಸಿಗಲಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಾಯಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದೊಂದಿಗೆ ರಿಯಾಯಿತಿ ದರದಲ್ಲಿ ದಿನಪಯೋಗಿ ವಸ್ತುಗಳನ್ನು ಒದಗಿಸಲು ಕ್ಯಾಂಟೀನ್ ಆರಂಭಿಸಲಿದೆ. ರಾಜೇಂದ್ರ ನಗರದಲ್ಲಿರುವ ನೂರಡಿ ರಸ್ತೆಯ ಕಂದಾಯ ಭವನದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜನವರಿ 17ರಂದು ಕ್ಯಾಂಟೀನ್ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಕ್ಯಾಂಟೀನ್ ಷೋ ರೂಂ ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಉಪಸ್ಥಿತರಿರುವರು.

ರಿಯಾಯಿತಿ ದರ: ಸರ್ಕಾರಿ ನೌಕರರಿಗೆ ಈ ಕ್ಯಾಂಟೀನ್‌ನಲ್ಲಿ ಸುಮಾರು 450ಕ್ಕೂ ಹೆಚ್ಚಿನ ಗೃಹೋಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. ಅಲ್ಲದೇ ಮಾಸಿಕ ಕಂತುಗಳಲ್ಲಿಯೂ ನೌಕರರು ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬಹುದಾಗಿದೆ.
ನೌಕರರು ಮೊದಲು ತಮ್ಮ ಆಧಾರ್ ಕಾರ್ಡ್, ವೇತನ ದೃಢೀಕರಣ ಪತ್ರ ಹಾಗೂ ಇತ್ತೀಚಿನ 2 ಭಾವಚಿತ್ರ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಜಿಲ್ಲೆಯ ಸರ್ಕಾರಿ ನೌಕರರು ಈ ಕ್ಯಾಂಟೀನ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications