Breaking; ಆಜಾನ್ ವಿರುದ್ಧ ಅಭಿಯಾನ, ಮೊಳಗಿತು ಸುಪ್ರಭಾತ
ಬೆಂಗಳೂರು, ಮೇ 09; ಮಸೀದಿಗಳಲ್ಲಿನ ಬೈಕ್ ಬಳಕೆ, ಆಜಾನ್ ವಿರುದ್ಧ ಶ್ರೀರಾಮ ಸೇನೆ ಮತ್ತು ಹಿಂದೂಪರ ಸಂಘಟನೆಗಳ ಅಭಿಯಾನ ಆರಂಭಗೊಂಡಿದೆ. ಸೋಮವಾರ ಮುಂಜಾನೆ ಕರ್ನಾಟಕದ ವಿವಿಧ ಜಿಲ್ಲೆಗಳ ದೇವಾಲಯಗಳಲ್ಲಿ ಸುಪ್ರಭಾತ ಮೊಳಗಿದೆ.
ಮೈಕ್ ಬಳಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸುತ್ತಿವೆ. ಮಸೀದಿಗಳ ಮೇಲಿನ ಮೈಕ್ ತೆರವು ಮಾಡಲು ಸರ್ಕಾರಕ್ಕೆ ಮೇ 8ರ ಗಡುವು ನೀಡಲಾಗಿತ್ತು.
ಮೇ 9ರಿಂದ ದಿನಕ್ಕೆ ಒಂದು ಬಾರಿ ಸುಪ್ರಭಾತ ಹಾಕಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು. ಈ ಘೋಷಣೆಯಂತೆ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಮುಂಜಾನೆ ಸುಪ್ರಭಾತ ಹಾಕಲಾಗಿದೆ.

ಚಿಕ್ಕಮಗಳೂರು ನಗರದ ಶಂಕರಪುರದಲ್ಲಿರುವ ಕೊಂಗನಾಟಮ್ಮ ದೇವಾಲಯದಲ್ಲಿ ಮುಂಜಾನೆ ಸುಪ್ರಭಾತ ನುಡಿಸಲಾಗಿದೆ. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ನೇತೃತ್ವದಲ್ಲಿ ಪೂಜೆ ನಡೆಸಲಾಗಿದೆ. ದೇವಾಲಯದ ಮೇಲೆ ಮೈಕ್ ಕಟ್ಟಿಸಲಾಗಿದ್ದು, ಇಂದು ಮೂರು ಬಾರಿ ಸುಪ್ರಭಾತ ನುಡಿಸಲಾಗುತ್ತದೆ.
ಹಾಸನದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ಪಠಿಸಲಾಗಿದೆ. ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಹನುಮಾನ್ ಚಾಲೀಸಾ ಪಠಿಸಲಾಗಿದ್ದು, ಧ್ವನಿ ವರ್ಧಕದ ಮೂಲಕ ಪ್ರಸಾರ ಮಾಡಲಾಗಿದೆ.
ಗೃಹ ಸಚಿವರ ಪ್ರತಿಕ್ರಿಯೆ; ಶ್ರೀರಾಮ ಸೇನೆ ಮತ್ತು ಹಿಂದೂಪರ ಸಂಘಟನೆಗಳ ಅಭಿಯಾನದ ಬಗ್ಗೆ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು.
"ಕೋರ್ಟ್ ತೀರ್ಪಿನ ಅನ್ವಯ ಪೊಲೀಸರು ಸಂಬಂಧಿಸಿದವರಿಗೆ ನೋಟಿಸ್ ನೀಡುತ್ತಾರೆ. ಮೈಕ್‌ಗಳಲ್ಲಿ ಎಷ್ಟು ಡೆಸಿಬಲ್ ಪ್ರಾರ್ಥನೆ ಹಾಕಬಹುದು ಎಂದು ನಿಯಮವಿದೆ. ಅದನ್ನು ಮೀರಿದರೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರ ನೋಟಿಸ್‌ಗೆ ಬೆಲೆ ನೀಡದಿದ್ದರೆ ಮೈಕ್ ತೆರವುಗೊಳಿಸಲಾಗುತ್ತದೆ" ಎಂದರು.












Click it and Unblock the Notifications