ಸಿದ್ದರಾಮಯ್ಯ ಸಂಪುಟದ ಐದಾರು ಸಚಿವರಿಗೆ ಕೊಕ್? ಯಾರಿದ್ದಾರೆ ಲಿಸ್ಟ್‌ನಲ್ಲಿ
ಬೆಂಗಳೂರು, ಆಗಸ್ಟ್ 24: ರಾಜ್ಯದಲ್ಲಿ ಸದ್ಯ ಮುಡಾ ಹಗರಣದ ಚರ್ಚೆ ಜೋರಾಗಿದೆ. ಮುಡಾ ಹಗರಣದ ಸಂಕಷ್ಟದ ಮಧ್ಯೆಯೇ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಾಯಕರ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಕೆಲ ಸಚಿವರಿಗೆ ಕೊಕ್ ನೀಡುವ ಕುರಿತು ಚರ್ಚೆಯಾಗಿದೆ ಎಂದು ಹೇಳಲಾಗಿದೆ.
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಶುಕ್ರವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಮತ್ತೊಮ್ಮೆ ದೆಹಲಿಯ ನಾಯಕರ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಈಗಾಗಲೇ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಲುಕಿದ್ದು, ಇತ್ತ ವಿಪಕ್ಷಗಳ ನಾಯಕರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಈ ನಡುವೆ ಮುಂದಿನ ಎರಡು ತಿಂಗಳಲ್ಲಿ ಕರ್ನಾಟಕ ಸಚಿವ ಸಂಪುಟದ ಐದಾರು ಸಚಿವರಿಗೆ ಸಿದ್ದರಾಮಯ್ಯ ಕೊಕ್ ನೀಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಸಂಪುಟದ ಕೆಲ ಸಚಿವರ ಕಾರ್ಯವೈಖರಿ ಕುರಿತು ಸಿದ್ದರಾಮಯ್ಯ ಅವರು ಬೇಸರ ಹೊರಹಾಕಿದ್ದು, 5 ರಿಂದ 6 ಮಂದಿ ಸಚಿವರನ್ನು ಕೈಬಿಡುವ ಚಿಂತನೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಈ ಕುರಿತು ಹೈಕಮಾಂಡ್ ನಾಯಕರ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಲಾವಣೆ ಬಗ್ಗೆಯೂ ಸಂಪುಟ ಪುನಾರಚನೆ ವೇಳೆಯೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ.
ಜಮ್ಮುಕಾಶ್ಮೀರ, ಹರಿಯಾಣ ಚುನಾವಣೆಯಲ್ಲಿ ಹೈಕಮಾಂಡ್ ನಾಯಕರು ವ್ಯಸ್ತರಾಗಲಿದ್ದಾರೆ. ಹೀಗಾಗಿ ಚುನಾವಣೆ ಬಳಿಕ ಕರ್ನಾಟಕದ ಸಂಪುಟ ಪುನಾರಚನೆ ಬಗ್ಗೆ ಗಮನ ಹರಿಸಲಿದ್ದಾರೆ. ಇತ್ತ ಸಚಿವ ಸ್ಥಾನದ ಮೇಲೆ ಕಣ್ಣೀಟ್ಟ ಕಾಂಗ್ರೆಸ್ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ಹೈಕಮಾಂಡ್ ನಾಯಕರನ್ನ ಸಂಪರ್ಕಿಸಿದ್ದಾರೆ. ಹೀಗಾಗಿ ಕೆಲ ಐದಾರು ಸಚಿವರನ್ನ ಸಂಪುಟದಿಂದ ಕೈ ಬಿಟ್ಟು ಹಿರಿಯ ಕಾಂಗ್ರೆಸ್ ಶಾಸಕರಿಗೆ ಮಣಿ ಹಾಕುವ ಚಿಂತನೆಯಲ್ಲಿ ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಕೆಲ ಜವಾಬ್ದಾರಿಯನ್ನ ನೀಡಿತ್ತು. ಕೈ ಹೈಕಮಾಂಡ್ ಕೊಟ್ಟ ಟಾಸ್ಕ್ ವಿಫಲವಾದ ಹಿನ್ನೆಲೆ ಕೆಲ ಸಚಿವರಿಗೆ ಮಂತ್ರಿಗಿರಿ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನ ನಿರ್ವಹಿಸುವಲ್ಲಿ ಕೆಲ ಸಚಿವರು ವಿಫಲರಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದು, ಐದಾರು ಸಚಿವರಿಗೆ ಕೊಕ್ ಕೊಡುವ ಸಾಧ್ಯತೆ ಇದೆ.
ಖಾತೆ ನಿರ್ವಹಣೆಯಲ್ಲಿ ವಿಫಲ ಹಾಗೂ ಕೆಲ ವಿವಾದಾತ್ಮಕ ಹೇಳಿಕೆಯಿಂದ ಪಕ್ಷಕ್ಕೆ ಆದ ಮುಜುಗರದಿಂದಾಗಿ ಕೆಲ ಸಚಿವರಿಗೆ ಕೊಕ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಧು ಬಂಗಾರಪ್ಪ, ರಹೀಂ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್ ಹಾಗೂ ಕೆ ಹೆಚ್ ಮುನಿಯಪ್ಪ ಅವರಿಗೆ ಸಿದ್ದರಾಮಯ್ಯ ಸಂಪುಟದಿಂದ ಕೊಕ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications