ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ
ಬೆಂಗಳೂರು, ಆ.7 : ಸಚಿವ ಸಂಪುಟ ವಿಸ್ತರಣೆಗಾಗಿ ಕಾದು ಕುಳಿತಿದ್ದ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಉಪ ಚುನಾವಣೆ ನಂತರ ಅಂದರೆ ಆ.21ರ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಯಾರು ಸಂಪುಟ ಸೇರುತ್ತಾರೆ ಎಂಬ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ.
ಸಚಿವ ಸಂಪುಟ ವಿಸ್ತರಣೆಗೆ ಆಕಾಂಕ್ಷಿ ಶಾಸಕರಿಂದ ಒತ್ತಡ ನಿರ್ಮಾಣ ಪ್ರಯತ್ನಗಳು ತೀವ್ರಗೊಳ್ಳುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಅಸ್ತ್ರ ಪ್ರಯೋಗಿಸಿದ್ದರು. ಈಗ ಉಪ ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಗುರುವಾರ ವಿಧಾನಸೌಧದಲ್ಲಿ ಹೇಳಿದ್ದಾರೆ.

ಹೈಕಮಾಂಡ್ ನಾಯಕರು ಸೂಚನೆ ನೀಡಿದರೆ ಯಾವುದೇ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ಈ ಬಗ್ಗೆ ಚರ್ಚೆ ನಡೆಸಲು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಆಗಸ್ಟ್ ಮೊದಲವಾರದಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತೆರಳಬೇಕಿತ್ತು. ಆದರೆ, ಉಪ ಚುನಾವಣೆ ಬಂದ ಕಾರಣ ಈ ಭೇಟಿ ರದ್ದಾಗಿತ್ತು. [ಹುಟ್ಟುಹಬ್ಬದಂದು ಮನಬಿಚ್ಚಿ ಮಾತನಾಡಿದ ಪರಮೇಶ್ವರ್]
ಇತ್ತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ನಡೆದರೆ, ಯಾರು ಸಂಪುಟ ಸೇರಬಹುದು ಪುನರ್ ರಚನೆ ಮಾಡುವುದಾದರೆ ಯಾರನ್ನು ಕೈಬಿಡಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸಚಿವ ಸಂಪುಟಕ್ಕೆ ಸರ್ಜರಿ ಮಾಡಿದರೆ, ಖಾಲಿ ಇರುವ 5 ಸ್ಥಾನಗಳ ಪೈಕಿ ನಾಲ್ಕನ್ನು ತುಂಬುವ ಹಾಗೂ ಮೂರರಿಂದ ನಾಲ್ಕು ಮಂದಿ ಹಾಲಿ ಸಚಿವರನ್ನು ಬದಲಾಯಿಸುವ ಉದ್ದೇಶವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. [ನಾನು ಡಿಸಿಎಂ ಸ್ಥಾನದ ಆಕಾಂಕ್ಷಿಯಲ್ಲ : ಡಿಕೆಶಿ]
ಪರಮೇಶ್ವರ್ ಸೇರುತ್ತಾರೆಯೇ? : ಸಚಿವ ಸಂಪುಟ ಸೇರುವವರ ಹೆಸರಿನಲ್ಲಿ ಮೊದಲು ಕೇಳಿಬರುತ್ತಿರುವುದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಹೆಸರು. ಉಪ ಮುಖ್ಯಮಂತ್ರಿ ಹುದ್ದೆಯ ಬಯಕೆ ಹೊಂದಿರುವ ಪರಮೇಶ್ವರ್ ಯಾವ ಸ್ವರೂಪದಲ್ಲಿ ಸಂಪುಟ ಸೇರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications