BREAKING : ನೂತನ ಶಾಸಕರಾಗಿ ಸಿ.ಪಿ.ಯೋಗೇಶ್ವರ, ಅನ್ನಪೂರ್ಣ, ಪಠಾಣ್ ಪ್ರಮಾಣವಚನ ಸ್ವೀಕಾರ
ಬೆಳಗಾವಿ, ಡಿಸೆಂಬರ್ 09: ಬೆಳಗಾವಿ ಸುವರ್ಣ ಸೌಧದಲ್ಲಿ 16ನೇ ವಿಧನಸಭೆಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು(ಸೋಮವಾರ) ಉಪಚುನಾವಣೆಯಲ್ಲಿ ಗೆದ್ದ ಮೂವರು ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಂದ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ್ದು, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಾಸೀರ್ ಪಠಾಣ್ ಹಾಗೂ ಸಂಡೂರು ವಿಧಾನಸಭೆ ಕ್ಷೇತ್ರದ ಶಾಸಕಿ ಅನ್ನಪೂರ್ಣ ಪ್ರಮಾಣವಚನ ಸ್ವೀಕರಿಸಿದ್ದಾರೆ. ಯು.ಟಿ. ಖಾದರ್ ಅವರು ಸಂವಿಧಾನ ಪೀಠಿಕೆ ಬೋಧಿಸಿದ್ದಾರೆ.

ಚಳಿಗಾಲದ ಅಧಿವೇಶನದ ಪ್ರಥಮ ದಿನ ಸುವರ್ಣಸೌಧದಲ್ಲಿ ಮೂವರು ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ಪಠಾಣ್ ಅವರು ಸಂವಿಧಾನ ಪ್ರತಿಯನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸದನದ ಗಮನ ಸೆಳೆದರು. ಅಲ್ಲದೇ ಸಂಡೂರು ಕ್ಷೇತ್ರದ ಅನ್ನಪೂರ್ಣಮ್ಮ, ಚನ್ನಪಟ್ಟಣ ಕ್ಷೇತ್ರದ ಯೋಗೇಶ್ವರ್ ಅವರು ತಂದೆ ತಾಯಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಇತರ ಸಚಿವರು, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಹಿರಿಯ ಸದಸ್ಯರ ಆಸನಗಳ ಬಳಿ ತೆರಳಿ ನೂತನ ಶಾಸಕರು ಕೃತಜ್ಞತೆ ಸಲ್ಲಿಸಿದರು.
ಪತ್ನಿಯ ಪ್ರಮಾಣ ವಚನಕ್ಕೆ ಸಾಕ್ಷಿಯಾದಸಂಸದ ಈ.ತುಕಾರಾಂ
ಸಂಡೂರು ವಿಧಾನ ಸಭಾಕ್ಷೇತ್ರದಿಂದ ಚುನಾಯಿತರಾಗಿರುವ ಅನ್ನಪೂರ್ಣ ತುಕಾರಾಂ ಅವರ ಪ್ರಮಾಣ ವಚನಕ್ಕೆ ಅವರ ಪತಿ ಬಳ್ಳಾರಿ ಸಂಸದ ಈ.ತುಕಾರಾಂ ಅವರು ಸಾಕ್ಷಿಯಾದರು. ಈವರೆಗೆ ಸಂಡೂರು ಕ್ಷೇತ್ರದ ಶಾಸಕರಾಗಿದ್ದ ಈ.ತುಕಾರಾಂ ಅವರು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಗೊಂಡ ಬಳಿಕ ಸಂಡೂರು ವಿಧಾನ ಸಭಾಕ್ಷೇತ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ನಂತರ ನಡೆದ ಉಪಚುನಾವಣೆ ಅವರ ಪತ್ನಿ ವಿಜೇತರಾಗಿದ್ದರು. ವಿಧಾನ ಸಭೆಯ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತು ಪತ್ನಿ ಅನ್ನಪೂರ್ಣ ಅವರ ಪ್ರಮಾಣ ವಚನ ಸ್ವೀಕರಿಸುವುದನ್ನು ಈ.ತುಕಾರಾಂ ವೀಕ್ಷಿಸಿ ಖುಷಿಪಟ್ಟರು.
ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರದ ಬಳಿಕ ಸದನದಲ್ಲಿ ಸಂವಿಧಾನ ಪೀಠಿಕೆಯನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಸದನದ ಸದಸ್ಯರಿಗೆ ಬೊಧಿಸಿದರು.












Click it and Unblock the Notifications