ಜಾತಿ ಜನಗಣತಿ ವಿವಾದ: ಮುಸಲ್ಮಾನರನ್ನು ಎತ್ತಿಕಟ್ಟಿ ಹಿಂದೂಗಳಿಗೆ ಅವಮಾನ: ವಿಜಯೇಂದ್ರ ಕಿಡಿ

ಬೀದರ್‌,ಏಪ್ರಿಲ್‌ 19: ಇವತ್ತು ಜಾತಿ ಜನಗಣತಿ ಎಂದು ಹೇಳಿ ಮುಸಲ್ಮಾನರನ್ನು ಎತ್ತಿಕಟ್ಟಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಹಿಂದೂ- ಮುಸ್ಲಿಮರ ಮಧ್ಯೆ ವೈರತ್ವ ಸೃಷ್ಟಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಆರೋಪಿಸಿದರು. ಬಿಜೆಪಿ ದೇಶಭಕ್ತರ ಪಕ್ಷ. ನಾವು ಕಾಂಗ್ರೆಸ್ಸಿನಿಂದ ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ ಪಕ್ಷದ ದಲಿತ ಶಾಸಕರ ಮನೆಗೆ ದೇಶದ್ರೋಹಿಗಳು ಬೆಂಕಿ ಹಚ್ಚಿದಾಗ ಆ ದೇಶದ್ರೋಹಿಗಳ ಪರ ನಿಂತ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ 150 ಕೋಟಿ ಹಣವನ್ನು ಹೊರರಾಜ್ಯಕ್ಕೆ ಕಳುಹಿಸಿದ ಸಂಬಂಧ ಪ್ರಿಯಾಂಕ್ ಖರ್ಗೆಯವರು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳನ್ನು ಯಾಕೆ ಪ್ರಶ್ನಿಸಿಲ್ಲ ಎಂದು ಕೇಳಿದರು.
ಸಿದ್ದರಾಮಯ್ಯನವರು ಹಿಂದೆ ಲಿಂಗಾಯತ- ವೀರಶೈವ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ರಾಜ್ಯದ ಜನವಿರೋಧಿ, ರೈತ ವಿರೋಧಿ, ಭ್ರಷ್ಟ ಸರಕಾರ, ಇಂಥ ಹಿಂದೂ ವಿರೋಧಿ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರಾದ ನಾವು ಮಾಡಬೇಕಿದೆ ಎಂದು ವಿನಂತಿಸಿದರು. ಅದಕ್ಕಾಗಿ ಬಿಜೆಪಿಯ ಜನಾಕ್ರೋಶ ಯಾತ್ರೆ ಇಲ್ಲಿಗೆ ಬಂದಿದೆ ಎಂದು ತಿಳಿಸಿದರು.

BY Vijayendra Attacks Government Over Caste Census Controversy

ಈ ಸರಕಾರದ ವಿರುದ್ಧ ಮುಂದಿನ 3 ವರ್ಷಗಳ ಕಾಲ ನಾವು ಬೀದಿಗಿಳಿದು ಹೋರಾಟ ಮಾಡಬೇಕಿದೆ. ಸರಕಾರಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಮಾಡಬೇಕೆಂದು ಕೈ ಮುಗಿದು ವಿನಂತಿಸುವುದಾಗಿ ತಿಳಿಸಿದರು. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರವು ದುರುಪಯೋಗ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಮುಖ್ಯಮಂತ್ರಿಗಳು, ಸರಕಾರ ಜವಾಬ್ದಾರಿ ಮರೆತಿವೆ. ಅವರನ್ನು ಎಚ್ಚರಿಸುವ ಕೆಲಸವನ್ನು ವಿಪಕ್ಷವಾಗಿ ನಾವು ಮಾಡುತ್ತಿದ್ದೇವೆ. ಅದಕ್ಕಾಗಿ ಈ ಜನಾಕ್ರೋಶದ ಯಾತ್ರೆ ಎಂದು ತಿಳಿಸಿದರು.

ರಾಜ್ಯದ ಸಿಎಂ ಆಗಿ ರೈತರ ಕಣ್ಣೀರು ಒರೆಸಿದ್ದೀರಾ? ಬಡವರ ಕಣ್ಣೀರು ಒರೆಸಿದ್ದೀರಾ? ಪರಿಶಿಷ್ಟ ಜಾತಿ, ಪಂಗಡದವರ ನೋವಿಗೆ ಸ್ಪಂದಿಸಿದ್ದೀರಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು. ರಾಜ್ಯವು ಹಿಂದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು ಎಂದು ತಿಳಿಸಿದರು. ರಾಜ್ಯವು ಈಗ ಭ್ರಷ್ಟಾಚಾರದಲ್ಲಿ ನಂಬರ್ ವನ್ ಸ್ಥಾನ ಪಡೆದಿದೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಈ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬಡವರ, ರೈತರ, ಪರಿಶಿಷ್ಟ ಜಾತಿ, ಪಂಗಡದ ಪರವಾಗಿದ್ದ ಕಾಳಜಿ ಎಲ್ಲಿ ಹೋಗಿದೆ ಸಿದ್ದರಾಮಯ್ಯನವರೇ ಎಂದು ಕೇಳಿದರು. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಈ ಸರಕಾರದ ಅಲ್ಪಸಂಖ್ಯಾತರ ಪರ ನೀತಿಯಿಂದ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು. ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ. ಪ್ರಧಾನಿ ನರೇಂದ್ರ ಮೋದಿಜೀ ಅವರು ತ್ರಿವಳಿ ತಲಾಖ್ ರದ್ದು ಮಾಡಿ ಮುಸಲ್ಮಾನ ಹೆಣ್ಮಕ್ಕಳಿಗೆ ನ್ಯಾಯ ದೊರಕಿಸಿದ್ದಾರೆ. ಆದರೆ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ನಾವು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ, ಮಾಜಿ ಸಚಿವ ಮತ್ತು ಶಾಸಕ ಪ್ರಭು ಚೌಹಾಣ್, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕರಾದ ಬಸವರಾಜ ಮುತ್ತಿಮೂಡ, ಶರಣು ಸಲಗಾರ್, ಡಾ. ಸಿದ್ದಲಿಂಗ ಪಾಟೀಲ್, ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರ, ಗುಂಡಪ್ಪಾ ವಕೀಲರು, ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ರಾಜಶೇಖರ ನಾಗಮೂರ್ತಿ ಮತ್ತು ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+