Karnataka By-election Betting: ನಾಳೆ ಉಪಚುನಾವಣೆಯ ಮತಎಣಿಕೆ.. ಮೂರು ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಭರಾಟೆ
ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ಸೇರಿದಂತೆ ಕರ್ನಾಟಕದ ಮೂರು ಕ್ಷೇತ್ರಗಳ ಬೈ ಎಲೆಕ್ಷನ್ ಫಲಿತಾಂಶ ನಾಳೆ ಪ್ರಕಟವಾಗಲಿದೆ. ರೋಚಕ ಹಣಾಗಣಿಗೆ ಸಾಕ್ಷಿಯಾಗಿದ್ದ ಚನ್ನಪಟ್ಟಣದಲ್ಲಿ ಭರ್ಜರಿ ಬೆಟ್ಟಿಂಗ್ ಭರಾಟೆ ನಡೆಯುತ್ತಿದೆ. ಶಿಗ್ಗಾಂವಿಯಲ್ಲೂ ಕೈ- ಕಮಲ ಅಭ್ಯರ್ಥಿಗಳ ಪರ ಬಾಜಿ ಜೋರಾಗೇ ಇದೆ.
ತೀವ್ರ ಪೈಪೋಟಿ, ಸೋಲು ಗೆಲುವಿನ ಜಿದ್ದಾಜಿದ್ದಿ, ಮತದಾನೋತ್ತರ ಸಮೀಕ್ಷೆಗಳ ಲೆಕ್ಕಾಚಾರ, ಇದೆಲ್ಲದರ ನಡುವೆ ನಾಳೆ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಪಿ-ಮಾರ್ಕ್ ಸಂಸ್ಥೆ ನೀಡಿರುವ ಚುನಾವಣೊತ್ತರ ಸಮೀಕ್ಷೆಯ ವರದಿ ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಚನ್ನಪಟ್ಟಣದಲ್ಲಿ ನಿಖಿಲ್ ಫೇವರ್: ಸೈನಕನ ಪರವೂ ಬ್ಯಾಟಿಂಗ್
ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಸಂಡೂರು ಮಾತ್ರ ಕಾಂಗ್ರೆಸ್ ವಶವಾಗಲಿದೆ ಅಂತ ಸಮೀಕ್ಷಾ ವರದಿ ಭವಿಷ್ಯ ನುಡಿದಿದೆ. ಹೀಗಾಗಿ ನಾಳಿನ ಫಲಿತಾಂಶ ಏನಾಗಲಿದೆ ಅನ್ನೋದು ಕೌತುಕ ಸೃಷ್ಟಿಸಿದೆ. ಇದರ ನಡುವೆ ಅಖಾಡದಲ್ಲಿ ಬೆಟ್ಟಿಂಗ್ ಭರಾಟೆ ರಣ ರಣ ಅಂತಿದೆ. ಅದ್ರಲ್ಲೂ ಮತದಾನೋತ್ತರ ಸಮೀಕ್ಷಾ ವರದಿ ಬಳಿಕ ಚನ್ನಪಟ್ಟಣದಲ್ಲಿ ಮತ್ತು ಶಿಗ್ಗಾಂವಿಯಲ್ಲಿ ಬೆಟ್ಟಿಂಗ್ ಬಾಜಿ ಆಟ ಜೋರಾಗಿದೆ.
ಗೊಂಬೆನಾಡಿನ ಅಧಿಪತಿ ಯಾರಾಗ್ತಾರೆ ಅನ್ನೋದು ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ಸಿಪಿ ಯೋಗೇಶ್ವರ್ ನಡುವೆ ನೆಕ್ ಟು ನೆಕ್ ಫೈಟ್ ಇದೆ. ಆದರೆ ಸಮೀಕ್ಷೆಗಳು ನಿಖಿಲ್ ಕುಮಾರಸ್ವಾಮಿ ಪರ ವರದಿ ನೀಡಿವೆ. ಹೀಗಾಗಿ ಬೆಟ್ಟಿಂಗ್ ಕಟ್ಟೋರಿಗೆ ನಿಖಿಲ್ ಹಾಟ್ ಫೇವರೇಟ್ ಆಗಿದ್ದಾರೆ. ಚನ್ನಪಟ್ಟಣದಲ್ಲಿ ಮಾತ್ರವಲ್ಲ ಮಂಡ್ಯದಲ್ಲೂ ನಿಖಿಲ್ ಪರವಾಗಿ ಜನ ಬಾಜಿ ಕಟ್ಟುತ್ತಿದ್ದಾರೆ.
ಒನ್ ಟು ಡಬಲ್ ಬೆಟ್ಟಿಂಗ್.. ಕೋಟಿ ಕೋಟಿ ಬಾಜಿ..
ಅಲ್ಲದೆ ಮಂಡ್ಯದಲ್ಲೂ ನಿಖಿಲ್ ಪರ ಬೆಟ್ಟಿಂಗ್ ನಡೆದಿದೆ. ತಮ್ಮ ಅಭ್ಯರ್ಥಿ ಗೆಲುವು ಖಚಿತ ಅಂತ ಕಾರ್ಯಕರ್ತರು ಬೆಟ್ಟಿಂಗ್ ಕಟ್ಟಿದ್ದಾರೆ. ಕಾರ್ಯಕರ್ತರು, ಪರಿಚಯಸ್ಥರು ಮತ್ತು ಆತ್ಮೀಯರ ನಡುವೆ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಕೋಟಿ ಕೋಟಿ ಹಣದಲ್ಲಿ ಬೆಟ್ಟಿಂಗ್ ಅನ್ನು ಆಡಲಾಗುತ್ತಿದೆ. ಒಂದು ಲಕ್ಷಕ್ಕೆ ಎರಡು ಲಕ್ಷ ರೂಪಾಯಿ, ಒಂದು ಕೋಟಿಗೆ ಎರಡು ಕೋಟಿ ಕೊಡಿ ಹೀಗೆ ಒನ್ ಟು ಡಬಲ್ ಕಾರುಬಾರು ಕಂಡು ಬರುತ್ತಿದೆ. ಆರಂಭದಲ್ಲಿ ಕಾರ್ಯಕರ್ತರು ಯೋಗೇಶ್ವರ್ ಪರ ಹೆಚ್ಚು ಒಲವು ಹೊಂದಿದ್ದರು. ಆದರೆ ಯೋಗೇಶ್ವರ್ ಅವರ ಹತಾಶ ಮಾತು ಹಾಗೂ ಮತದಾನೋತ್ತರ ಸಮೀಕ್ಷೆ ಬಳಿಕ ಟ್ರೆಂಡ್ ಬದಲಾಗಿದೆ.
ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಬುಕ್ಕಿಗಳ ಫೇವರೇಟ್
ಪ್ರತಿಷ್ಠೆಯ ಕಣವಾಗಿರುವ ಶಿಗ್ಗಾಂವಿಯಲ್ಲೂ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಸಂಸದ, ಮಾಜಿ ಸಿಎಂ ಬೊಮ್ಮಾಯಿ ಪುತ್ರ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಟ್ರೆಂಡ್ ಇದೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಪರವೂ ಕೆಲವರು ಬಾಜಿ ಕಟ್ಟುತ್ತಿದ್ದಾರೆ. ಹಳ್ಳಿಯೊಂದರಲ್ಲಿ ಜೋಡೆತ್ತುಗಳನ್ನು ಬಾಜಿ ಕಟ್ಟೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಂಡೂರಿನಲ್ಲೂ ಬೆಟ್ಟಿಂಗ್ ಅಬ್ಬರ
ಚನ್ನಪಟ್ಟಣ, ಶಿಗ್ಗಾಂವಿಯನ್ನೂ ಮಾತ್ರವಲ್ಲದೆ ಸಂಡೂರಿನಲ್ಲೂ ಬೆಟ್ಟಿಂಗ್ ಅಬ್ಬರ ಕಡಿಮೆಯಿದೆ. ಸಂಡೂರು ಕಾಂಗ್ರೆಸ್ ವಶವಾಗಲಿದೆ ಅಂತ ಸಮೀಕ್ಷಾ ವರದಿ ಹೇಳಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರಿನಲ್ಲಿ ಕಾರ್ಯಕರ್ತರು ಬಿಜೆಪಿ ಸೋಲಿನ ವಿಶ್ವಾಸದಲ್ಲಿ ಇದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಬೆಟ್ಟಿಂಗ್ ಆಡುವ ಆಸಕ್ತಿ ಕೊಂಚ ಕಡಿಮೆ ಇದೆ. ಒಟ್ಟಿನಲ್ಲಿ ನಾಳೆ ಉಪಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಯಾರ ಭವಿಷ್ಯ ಏನಾಗುತ್ತದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.












Click it and Unblock the Notifications