ಬೆಂಗಳೂರು–ಚೆನ್ನೈ ಕೇವಲ 73 ನಿಮಿಷ! ಭಾರತದಲ್ಲಿ ಪ್ರಯಾಣದ ಅರ್ಥವನ್ನೇ ಬದಲಿಸಲಿದೆ ರೈಲ್ವೆ ಇಲಾಖೆ
ಭಾರತದ ಹೈ-ಸ್ಪೀಡ್ ರೈಲು ಕನಸಿಗೆ ಮತ್ತೊಂದು ದೊಡ್ಡ ಬಲ ಸಿಕ್ಕಂತಾಗಿದೆ. ದೇಶದ ಮೊದಲ ಬುಲೆಟ್ ರೈಲು ಯೋಜನೆಯಾದ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ 7 ಹೊಸ ಬುಲೆಟ್ ರೈಲು ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಘೋಷಣೆ ಭಾರತದ ರೈಲ್ವೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಹೈ-ಸ್ಪೀಡ್ ರೈಲು ಸೇವೆಯನ್ನು ದೇಶದ ವಿವಿಧ ಭಾಗಗಳಿಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದು.

ಕೇಂದ್ರ ಸರ್ಕಾರ ಅನುಮೋದಿಸಿದ 7 ಹೊಸ ಬುಲೆಟ್ ರೈಲು ಮಾರ್ಗಗಳು ಯಾವುವು?
ದೇಶದಲ್ಲಿ ಹೈ-ಸ್ಪೀಡ್ ರೈಲು(ಬುಲೆಟ್ ರೈಲು) ಸಂಪರ್ಕವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಮುಖ 7 ಹೊಸ ಕಾರಿಡಾರ್‌ಗೆ ಅನುಮೋನೆ ನೀಡಿದೆ. ಆ 7 ಪ್ರಮುಖ ಮಾರ್ಗಗಳು ಈ ಕೆಳಗಿನಂತಿವೆ.
ಬೆಂಗಳೂರು-ಚೆನ್ನೈ
ಬೆಂಗಳೂರು - ಹೈದರಾಬಾದ್
ಮುಂಬೈ - ಪುಣೆ
ಪುಣೆ - ಹೈದರಾಬಾದ್
ದೆಹಲಿ - ಲಖನೌ
ದೆಹಲಿ - ವಾರಣಾಸಿ
ದೆಹಲಿ - ಸಿಲಿಗುರಿ
ಈ ಮಾರ್ಗಗಳು ದಕ್ಷಿಣ, ಪಶ್ಚಿಮ ಮತ್ತು ಉತ್ತರ ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸಲಿದ್ದು, ಬುಲೆಟ್ ರೈಲು ಸೇವೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ಗುರಿಯನ್ನು ಹೊಂದಿವೆ.
ಯಾವ ಮಾರ್ಗದಲ್ಲಿ ಎಷ್ಟು ಸಮಯ ಉಳಿಯಲಿದೆ?
ದೇಶದಲ್ಲಿ ಬುಲೆಟ್ ರೈಲು ಸೇವೆ ಆರಂಭವಾದ ಬಳಿಕ ವಿವಿಧ ಪ್ರಮುಖ ನಗರಗಳ ನಡುವಿನ ಪ್ರಯಾಣ ಅವಧಿ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು - ಚೆನ್ನೈ: 73 ನಿಮಿಷ
ಬೆಂಗಳೂರು - ಹೈದರಾಬಾದ್: 2 ಗಂಟೆ 10 ನಿಮಿಷ
ಮುಂಬೈ - ಅಹಮದಾಬಾದ್: 1 ಗಂಟೆ 57 ನಿಮಿಷ
ಮುಂಬೈ - ಪುಣೆ: 48 ನಿಮಿಷ
ಪುಣೆ - ಹೈದರಾಬಾದ್: 2 ಗಂಟೆ 8 ನಿಮಿಷ
ದೆಹಲಿ - ಲಖನೌ: 2 ಗಂಟೆ
ದೆಹಲಿ - ವಾರಣಾಸಿ: 3 ಗಂಟೆ 15 ನಿಮಿಷ
ದೆಹಲಿ - ಸಿಲಿಗುರಿ: 6 ಗಂಟೆ
ಬೆಂಗಳೂರು-ಚೆನ್ನೈ ಪ್ರಯಾಣ ಇನ್ಮುಂದೆ ಕೇವಲ 73 ನಿಮಿಷ!
ದಕ್ಷಿಣ ಭಾರತದ ಜನರಲ್ಲಿ ಅತ್ಯಂತ ಭಾರಿ ಕುತುಹಲ ಮೂಡಿಸಿರುವ 'ಬೆಂಗಳೂರು-ಚೆನ್ನೈ ಬುಲೆಟ್ ರೈಲು ಯೋಜನೆ'ಯ ಪ್ರಮುಖ ಮುಖ್ಯಾಂಶಗಳು ಈ ರೀತಿ ಇದೆ.
ಸಮಯದ ಉಳಿತಾಯ: ಸದ್ಯ ರಸ್ತೆ ಮುಖಾಂತರ ಅಥವಾ ರೈಲುಗಳ ಮೂಲಕ ಹಲವು ಗಂಟೆಗಳಲ್ಲಿ ತೆಗೆದುಕೊಳ್ಳುವ ಪ್ರಯಾಣವನ್ನು ಈ ಬುಲೆಟ್ ರೈಲು ಕೇವಲ 73 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
ಯಾರಿಗೆಲ್ಲಾ ಲಾಭ?: ಈ ಹೈ-ಸ್ಪೀಡ್ ರೈಲು ಸಂಪರ್ಕವು ಪ್ರತಿದಿನ ಪ್ರಯಾಣಿಸುವ ಐಟಿ ಉದ್ಯೋಗಿಗಳು, ದೊಡ್ಡ ಮಟ್ಟದ ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ವರದಾನವಾಗಲಿದ್ದು, ಉಭಯ ನಗರಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಲಭಗೊಳಿಸಲಿದೆ.
ನಗರಗಳ ಆರ್ಥಿಕ ಜೋಡಣೆ: ಭಾರತದಲ್ಲಿ ಜಪಾನ್-ಚೀನಾ ಮಾದರಿ ಅಭಿವೃದ್ಧಿ
ವೇಗದ ಪ್ರಯಾಣದ ಜೊತೆಗೆ ಪ್ರಾದೇಶಿಕ ಆರ್ಥಿಕ ಪ್ರಗತಿ, ಉದ್ಯೋಗ ಮತ್ತು ಹೂಡಿಕೆಗೆ ಉತ್ತೇಜನ ನೀಡುವುದು ಈ ಯೋಜನೆಗಳ ಮೂಲ ಉದ್ದೇಶ ಎಂದು ಸಚಿವರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಂತೆ ಮುಂಬೈ, ಪುಣೆ, ಹೈದರಾಬಾದ್, ಅಹಮದಾಬಾದ್ ಹಾಗೂ ಸೂರತ್ ನಗರಗಳು ಇನ್ಮುಂದೆ ಒಂದೇ ಆರ್ಥಿಕ ಹಬ್ ಆಗಿ ಕಾರ್ಯನಿರ್ವಹಿಸಲಿವೆ. ಜಪಾನ್ ಮತ್ತು ಚೀನಾದಲ್ಲಿ ಬುಲೆಟ್ ರೈಲು ನೆಟ್‌ವರ್ಕ್ ಮೂಲಕ ನಗರಗಳನ್ನು ಆರ್ಥಿಕವಾಗಿ ಬೆಸೆದು ಯಶಸ್ವಿಯಾದ ಜಾಗತಿಕ ಮಾದರಿಯನ್ನು ಇದೀಗ ಭಾರತದ ಪ್ರಗತಿಗಾಗಿಯೂ ಅಳವಡಿಸಿಕೊಳ್ಳಲಾಗುತ್ತಿದೆ.














Click it and Unblock the Notifications