Urdu Impose: ಸರ್ಕಾರ ಇನ್ನುಳಿದ ಮಾತೃಭಾಷೆಗಳಿಗೇಕೆ ಆದ್ಯತೆ ನೀಡುತ್ತಿಲ್ಲ?: ಮೋಹನ್‌ದಾಸ್ ಪೈ
ರಾಜ್ಯ ಸರ್ಕಾರವು ಅಂಗನವಾಡಿ ಶಿಕ್ಷಕರಿಗೆ ಉರ್ದು ಭಾಷೆಯನ್ನು ಕಡ್ಡಾಯ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ರಾಜ್ಯದೆಲ್ಲೆಡೆ ವಿರೋಧ ಕೂಡ ವ್ಯಕ್ತವಾಗಿದೆ. ಈ ಬಗ್ಗೆ ಒನ್ ಇಂಡಿಯಾ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಉದ್ಯಮಿ ಹಾಗೂ ಆರಿನ್ ಕ್ಯಾಪಿಟಲ್‌ನ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್ ಪೈ, 'ಸರ್ಕಾರ ಉರ್ದು ಭಾಷೆಗೆ ಕೊಡುತ್ತಿರುವ ಆದ್ಯತೆಯನ್ನು ರಾಜ್ಯದಲ್ಲೇ ಇರುವ ಹಲವು ಮಾತೃಭಾಷೆಗಳಿಗೆ ಏಕೆ ಕೊಡುತ್ತಿಲ್ಲ?' ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಚಿಕ್ಕಮಗಳೂರು ಭಾಗದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಅಲ್ಲಿ ಅಲ್ಲಿನ ಅಂಗನವಾಡಿ ಶಿಕ್ಷಕರು ಉರ್ದು ಭಾಷೆಯನ್ನು ಕಡ್ಡಾಯವಾಗಿ ಕಲಿತಿರಬೇಕು ಎಂದು ನೇಮಕಾತಿ ಸೂಚಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಪೈ, 'ನಾಲ್ಕು ವರ್ಷದ ಮಕ್ಕಳೊಂದಿಗೆ ಉರ್ದು ಮಾತನಾಡಲು ಆಗುತ್ತಾ? ಇದು ಒಳ್ಳೆಯ ನಿರ್ಧಾರವಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ರಾಜ್ಯ ಸರ್ಕಾರವು ಮೊದಲಿನಿಂದಲೂ ಮುಸ್ಲಿಮರನ್ನು ಓಲೈಸಿಕೊಂಡು ಬಂದಿರುವ ಪಕ್ಷ. ಅವರು ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಉರ್ದು ಭಾಷೆಗೆ ಆದ್ಯತೆ ನೀಡುವುದಾದರೆ, ಕೊಂಕಣಿ, ತುಳು, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಪ್ರದೇಶಗಳು ನಮ್ಮ ರಾಜ್ಯದಲ್ಲಿವೆ. ಈ ಎಲ್ಲ ಪ್ರದೇಶಗಳಲ್ಲೂ ಆಯಾ ಮಾತೃಭಾಷೆಗಳಿಗೆ ಒತ್ತು ನೀಡುವುದಾದರೆ ನಾನು ಸರ್ಕಾರದ ನಡೆಯನ್ನು ಸ್ವಾಗತಿಸುತ್ತಿದ್ದೆ. ಆದರೆ, ಸರ್ಕಾರ ಆ ಕೆಲಸ ಮಾಡಿಲ್ಲ' ಎಂದು ಖಂಡಿಸಿದ್ದಾರೆ.
'ಭಾಷೆಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುವುದಾದರೆ, ಇದನ್ನು ನಾನು ಒಪ್ಪುತ್ತೇನೆ. ಆದರೆ ಎಲ್ಲೋ ಉರ್ದುಗೆ ಇಷ್ಟು ಒತ್ತು ನೀಡುತ್ತಿರುವುದು ಸರಿಯಲ್ಲ. ಸರ್ಕಾರ ಯಾಕೆ ಒಂದು ಗುಂಪು ಹಾಗೂ ಒಂದು ಭಾಷೆಗೆ ಒತ್ತು ನೀಡಬೇಕು?' ಎಂದು ಕೇಳಿದ್ದಾರೆ.
'ಕಾಂಗ್ರೆಸ್ ಪಕ್ಷವು ಟಿಪ್ಪು ಜಯಂತಿಯನ್ನು ಮೊದಲಿನಿಂದಲೂ ಉತ್ತೇಜಿಸುತ್ತದೆ. ಏಕೆಂದರೆ ಅದು ಕಮ್ಯುನಲ್ ಪಕ್ಷ. ಆದರೆ, ಸರ್ಕಾರವು ಸರ್ವರ ಭಾವನೆಗಳ ಹಿತ ಕಾಯಬೇಕು. ಮುಸ್ಲಿಮರು ಪಡೆಯುತ್ತಿರುವ ಆದ್ಯತೆಗಳನ್ನು ಕೊಂಕಣಿಯಂತಹ ಎಷ್ಟೋ ಸಮುದಾಯಗಳು ಪಡೆಯುತ್ತಿಲ್ಲ. ಕೊಡವರು, ತುಳುವರು ಸೇರಿದಂತೆ ಹಲವು ಸಮುದಾಯಗಳು ಮೂಲೆಗುಂಪಾಗಿವೆ. ಮುಸ್ಲಿಮರು ಕೋಟಿಗಟ್ಟಲೆ ಜನಸಂಖ್ಯೆ ಇದ್ದವರನ್ನು ಅಲ್ಪಸಂಖ್ಯಾತರು ಎನ್ನುತ್ತಾರೆ. ಆದರೆ, ನಿಜವಾದ ಅಲ್ಪಸಂಖ್ಯಾತರು ನಾವಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
'ಬಜೆಟ್‌ನಲ್ಲೂ ಮುಸ್ಲಿಂ-ಕ್ರೈಸ್ತರಿಗೆ ಭಾರಿ ಪ್ರಮಾಣದ ಅನುದಾನ ಕೊಡುತ್ತಾರೆ. ಆದರೆ, ನಮ್ಮ ಕೊಡವರಿಗೆ ಏನೂ ಕೊಡುತ್ತಿಲ್ಲ. ಅವರು ನಮಗಾಗಿ ಏನನ್ನೂ ಮಾಡುತ್ತಿಲ್ಲ' ಎಂದು ದೂರಿದ್ದಾರೆ.
'ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಗಣೇಶನ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದಿದೆ. ಇದು ಒಪ್ಪುವಂತದ್ದಲ್ಲ. ಅವರನ್ನು ಜೈಲಿನಲ್ಲಿಡಬೇಕು. ಅವರು ಕೇರಳದ ಎಲ್ಲಿಂದಲೋ ಬಂದು ಇಲ್ಲಿ ಗಲಭೆ ಎಬ್ಬಿಸಿದರೂ ಕನ್ನಡಿಗರ ಪ್ರತಿದಾಳಿ ನಡೆಸಲಿಲ್ಲ. ಮಂಡ್ಯ ಜಿಲ್ಲೆಯು ಕನ್ನಡಿಗರು ಹೆಚ್ಚಾಗಿರುವ ಪ್ರದೇಶ. ಆದರೆ, ಸರ್ಕಾರ, ಪೊಲೀಸರು ಗಲಭೆ ಎಬ್ಬಿಸಿದವರ ವಿಚಾರಗಳಲ್ಲಿ ಮೃದುಧೋರಣೆ ತಾಳುತ್ತಿದೆ' ಎಂದು ಆರೋಪಿಸಿದ್ದಾರೆ.
'ಕನ್ನಡವನ್ನು ಪ್ರಧಾನವಾಗಿ ಬಳಸಲೇಬೇಕು. ಅದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಅದು ನಮ್ಮ ರಾಜ್ಯದ ಪ್ರಧಾನ ಭಾಷೆ. ನನ್ನ ಪ್ರಕಾರ ರಾಜ್ಯದಲ್ಲಿ ನೆಲೆಸಿರುವ ಎಲ್ಲರೂ, ಬೇರೆ ಭಾಗದಿಂದ ಇಲ್ಲಿಗೆ ಬಂದವರು ಕೂಡ ಕನ್ನಡವನ್ನು ಕಲಿತು ಮಾತನಾಡಲೇಬೇಕು. ಅದು ಇಲ್ಲಿನ ಸ್ಥಳೀಯರಿಗೆ ನೀಡುವ ಗೌರವʼ ಎಂದಿದ್ದಾರೆ.
ʼನನ್ನ ಪ್ರಕಾರ, ತ್ರಿಭಾಷಾ ನೀತಿ ಒಳ್ಳೆಯದು. ವ್ಯವಹಾರಕ್ಕೆ ಇಂಗ್ಲೀಷ್, ಆಡಳಿತ ಭಾಷೆಗೆ ಸ್ಥಳೀಯ ಕನ್ನಡ ಹಾಗೂ ಬೇರೆ ಭಾಗಗಳಿಗೆ ಹೋದಾಗ ಹಿಂದಿ ಕಲಿಯುವುದು ಒಳ್ಳೆಯದು. ಆದರೆ, ತಮಿಳುನಾಡಿನವರು ಹಿಂದಿಯನ್ನು ದೂರವಿಟ್ಟಿದ್ದಾರೆ. ಇದು ಅವರು ಮಾಡುತ್ತಿರುವ ದೊಡ್ಡ ತಪ್ಪುʼ ಎಂದು ಮೋಹನ್‌ದಾಸ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications