Dawood Ibrahim: "ರಿಯಲ್ ಡಾನ್ ದಾವೂದ್ ಇಬ್ರಾಹಿಂ" ಸ್ಟಿಕ್ಕರ್ ಹಾಕಿಸಿದ್ದ ಬಸ್ ಚಿಕ್ಕಮಗಳೂರಿನಲ್ಲಿ ಪೊಲೀಸ್ ವಶಕ್ಕೆ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಶನಿವಾರ ಮಧ್ಯಾಹ್ನ ಆತಂಕಕಾರಿ ಘಟನೆಯೊಂದು ನಡೆದಿದೆ. ಅಂತರಾಷ್ಟ್ರೀಯ ಮಟ್ಟದ ಘೋಷಿತ ಭಯೋತ್ಪಾದಕ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ಪ್ರಚೋದನಾಕಾರಿ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡಿದ್ದ ಖಾಸಗಿ ಬಸ್ಸನ್ನು ಬಸವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವ ಇಂತಹ ಕೃತ್ಯದ ವಿರುದ್ಧ ಪೊಲೀಸರು ಈಗ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಬಸ್ ಮೇಲೆಲ್ಲ ದಾವೂದ್ ಹೆಸರು
ತಮಿಳುನಾಡು ನೋಂದಣಿಯ ಸಂಖ್ಯೆ (TN21AU2699) ಹೊಂದಿರುವ ಈ ಬಸ್ ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ನಗರದ ಆರ್.ಜಿ. ರಸ್ತೆಯಲ್ಲಿ ಸಂಚರಿಸುತ್ತಿತ್ತು. ಈ ಬಸ್ಸಿನ ಗಾಜು ಹಾಗೂ ಹೊರಭಾಗದ ಮೇಲೆ "ಬಾಂಬೆ ಅಂಡರ್‌ವರ್ಲ್ಡ್ ದಾವೂದ್ ದಿ ರಿಯಲ್ ಡಾನ್" (Bombay Underworld Dawood the Real Don), "ಡಿ ಗ್ಯಾಂಗ್ಸ್ ಆಫ್ ಮುಂಬೈ" (D Gangs of Mumbai) ಮತ್ತು "ರಿಯಲ್ ಕ್ರಿಮಿನಲ್ ಡಾನ್" (Real Criminal Don) ಎಂಬ ಬರಹಗಳಿದ್ದ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು.

ಈ ಬಗ್ಗೆ ಸಾರ್ವಜನಿಕರಿಂದ ದೂರು ಹಾಗೂ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಎಚ್ಚೆತ್ತ ಬಸವನಹಳ್ಳಿ ಪಿಎಸ್‌ಐ ಅಜರುದ್ದೀನ್ ಎಂ.ಎಸ್. ಮತ್ತು ಅವರ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಬಸ್ಸನ್ನು ತಡೆಹಿಡಿದು ಪರಿಶೀಲನೆ ನಡೆಸಿದರು. ತನಿಖೆಯ ವೇಳೆ ಈ ಬಸ್ ಕೊಯಮತ್ತೂರು ಮೂಲದ ಟ್ರಾವೆಲ್ ಏಜೆನ್ಸಿಗೆ ಸೇರಿದ್ದು ಎಂಬುದು ತಿಳಿದುಬಂದಿದೆ.
ಬಸ್ಸಿನಲ್ಲಿ ಕೊಯಮತ್ತೂರಿನ ಕಾಲೇಜೊಂದರ ಸುಮಾರು 48 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಪ್ರವಾಸಕ್ಕೆಂದು ತೆರಳುತ್ತಿದ್ದರು ಎಂದು ತಿಳಿದುಬಂದಿದ್ದು, ಪೊಲೀಸರು ಬಸ್ಸನ್ನು ಸೀಜ್ ಮಾಡಿದ ಕಾರಣ ವಿದ್ಯಾರ್ಥಿಗಳು ಅರ್ಧ ದಾರಿಯಲ್ಲೇ ತೊಂದರೆ ಅನುಭವಿಸುವಂತಾಯಿತು. ಆದರೆ, ಮಾನವೀಯತೆಯ ದೃಷ್ಟಿಯಿಂದ ಪೊಲೀಸರೇ ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮೂರಿಗೆ ಮರಳಲು ಪರ್ಯಾಯ ವಾಹನದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
ಕಾನೂನು ಕ್ರಮ ಮತ್ತು ತನಿಖೆ
ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮತ್ತು ಘೋಷಿತ ಭಯೋತ್ಪಾದಕನಾಗಿರುವ ವ್ಯಕ್ತಿಯನ್ನು ಸಾರ್ವಜನಿಕವಾಗಿ ವೈಭವೀಕರಿಸುವುದು ಗಂಭೀರ ಅಪರಾಧ. ಈ ಹಿನ್ನೆಲೆಯಲ್ಲಿ ಬಸವನಹಳ್ಳಿ ಪೊಲೀಸರು ಚಾಲಕ ಮತ್ತು ಮಾಲೀಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 197(1)(d) ಅಡಿಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಚಾಲಕ ತನಗೆ ಸ್ಟಿಕ್ಕರ್‌ಗಳ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಸದ್ಯ ಕೊಯಮತ್ತೂರು ಮೂಲದ ಬಸ್ ಮಾಲೀಕನಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದ್ದು, ಈ ಕೃತ್ಯದ ಹಿಂದಿನ ಉದ್ದೇಶ ಮತ್ತು ಜವಾಬ್ದಾರಿಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications