ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ, ಲೆಕ್ಕ ಬಿಚ್ಚಿಟ್ಟ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಮಾರ್ಚ್ 17: ಕೇಂದ್ರ ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನ ರಾಜ್ಯಕ್ಕೆ ಬರುತ್ತಿದೆ, ಅದರಿಂದ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ, ಅನುದಾನ ಕಡಿಮೆಯಾಗಿದೆ ಎಂಬುದು ಸುಳ್ಳು ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಹಣ ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆ ಹಣ, ಈ ಹಣದಲ್ಲಿ ಯಾರಿಗೆ ಎಷ್ಟು ಪಾಲು ಎಂದು ಪ್ರತೀ ಐದು ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚನೆಯಾಗಿ ನಿರ್ಧರಿಸುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ರಾಜ್ಯ ಬಜೆಟ್ ಮೇಲಿನ ಚರ್ಚೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ನೀಡಿರುವ ಉತ್ತರಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅಂಕಿ ಅಂಶ ಮೂಲಕ ಪ್ರತಿಕ್ರಿಯೆ ನೀಡಿದರು.

ಈಗ ಹದಿನೈದನೆಯ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ನಮಗೆ ಅನುದಾನ ಸಿಗುತ್ತಿದೆ. ಈ ಹಿಂದಿನ ಹದಿನಾಲ್ಕು ಮತ್ತು ಈಗಿನ ಹದಿನೈದನೆಯ ಆಯೋಗದ ನಡುವೆ ನಮ್ಮ ರಾಜ್ಯದ ಪಾಲು 1.07% ಕಡಿಮೆಯಾಗಿದೆ. ಹದಿನೈದನೆಯ ಹಣಕಾಸು ಆಯೋಗದಿಂದ ಅತಿ ಹೆಚ್ಚು ಅನ್ಯಾಯಕ್ಕೊಳಗಾಗಿರುವ ರಾಜ್ಯ ಕರ್ನಾಟಕ.

ಇದೇ ಕಾರಣಕ್ಕೆ ಹದಿನೈದನೆಯ ಹಣಕಾಸು ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ನಮ್ಮ ರಾಜ್ಯಕ್ಕೆ ರೂ. 5,495 ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು, ಇದನ್ನು ಸರ್ಕಾರ ಪಡೆದುಕೊಳ್ಳಲು ವಿಫಲವಾಗಿದೆ. ಈ ಅನುದಾನದ ಬದಲಿಗೆ ಪೆರಿಫೆರಲ್ ರಿಂಗ್ ರಸ್ತೆಗೆ ಅನುದಾನ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ಉತ್ತರದಲ್ಲಿ ಹೇಳಿದ್ದಾರೆ, ಇದು ತಪ್ಪು ಮಾಹಿತಿ. ಪೆರಿಫೆರಲ್ ರಿಂಗ್ ರಸ್ತೆಯೆ ಪ್ರತ್ಯೇಕ ಯೋಜನೆ, ತೆರಿಗೆ ಪಾಲಿನಲ್ಲಾದ ನಷ್ಟದ ಪರಿಹಾರವಾಗಿ ನೀಡುವ ವಿಶೇಷ ಅನುದಾನವೇ ಬೇರೆ. ಎರಡೂ ಒಂದೇ ಆಗಲು ಸಾಧ್ಯವಿಲ್ಲ ಎಂದರು.

ಜಿಎಸ್‌ಟಿ ಪರಿಹಾರದ ಬದಲಿಗೆ ಸಾಲ:

ಜಿಎಸ್‌ಟಿ ಪರಿಹಾರದ ಬದಲಿಗೆ ಸಾಲ:

ರಾಜ್ಯದಿಂದ ಪ್ರತೀ ವರ್ಷ ರೂ. 3 ಲಕ್ಷ ಕೋಟಿ ಹಣ ವಿವಿಧ ರೂಪದ ತೆರಿಗೆ ಮೂಲಕ ಕೇಂದ್ರ ಸರ್ಕಾರಕ್ಕೆ ಸಂಗ್ರಹವಾಗುತ್ತಿದೆ. ಇದರಲ್ಲಿ ನಮ್ಮ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿ ಒಟ್ಟು ರೂ. 47,000 ಕೋಟಿ ರಾಜ್ಯಕ್ಕೆ ಮುಂದಿನ ವರ್ಷ ಬರಲಿದೆ ಎಂದು ಸರ್ಕಾರ ಹೇಳಿದೆ. ಈಗ ಜಿಎಸ್‌ಟಿ ಪರಿಹಾರದ ಬದಲಿಗೆ ಸಾಲ ಪಡೆಯಲು ಹೇಳಿದ್ದಾರೆ, ಈ ಸಾಲವನ್ನು ರಾಜ್ಯಗಳ ಮೇಲೆ ಸೆಸ್ ವಿಧಿಸಿ ಕೇಂದ್ರ ಸರ್ಕಾರ ಸಾಲ ಮರುಪಾವತಿ ಮಾಡುತ್ತದೆ. ರಾಜ್ಯದಿಂದಲೇ ಕೇಂದ್ರ ಸಂಪನ್ಮೂಲ ಸಂಗ್ರಹ ಮಾಡಬೇಕೇ ಹೊರತು ಕೇಂದ್ರ ಸರ್ಕಾರಕ್ಕೆ ಬೇರೆ ಆದಾಯದ ಮೂಲಗಳು ಇಲ್ಲ.

2013-14 ನಮ್ಮ ತೆರಿಗೆ ಪಾಲು ರೂ. 13,809 ಕೋಟಿ, ಆಗ ಕೇಂದ್ರದ ಬಜೆಟ್ ಗಾತ್ರ ರೂ. 16,65,297 ಕೋಟಿ.
2017-18 ರಲ್ಲಿ ನಮ್ಮ ತೆರಿಗೆ ಪಾಲು ರೂ. 31,752 ಕೋಟಿ.
2018-19 ರಲ್ಲಿ ನಮ್ಮ ತೆರಿಗೆ ಪಾಲು 35,895 ಕೋಟಿ. ಬಜೆಟ್ ಗಾತ್ರ ರೂ. 24,42,213 ಕೋಟಿ ಇತ್ತು.
2019-20 ರಲ್ಲಿ ನಮ್ಮ ತೆರಿಗೆ ಪಾಲು ರೂ. 30,913 ಕೋಟಿ.
2020-21 ರಲ್ಲಿ ನಮ್ಮ ತೆರಿಗೆ ಪಾಲು 21,495 ಕೋಟಿ ಬಂದಿದೆ.
2021-22 ರಲ್ಲಿ ನಮ್ಮ ತೆರಿಗೆ ಪಾಲು ರೂ. 27,145 ಕೋಟಿ ಬಂದಿದೆ.
2022-23 ರಲ್ಲಿ ರೂ. 29,783 ಕೋಟಿ ಬರಲಿದೆ ಎಂದು ಅಂದಾಜಿಸಲಾಗಿದೆ. ಎಷ್ಟು ಬರುತ್ತೋ ಗೊತ್ತಿಲ್ಲ. 2017-18 ನೇ ಸಾಲಿಗೆ ಹೋಲಿಕೆ ಮಾಡಿದರೆ ಈಗಿನ ತೆರಿಗೆ ಪಾಲು ಕಡಿಮೆಯಾಗಿದೆ. ಇದು ಅನ್ಯಾಯ ಅಲ್ಲ ಎಂದು ನೀವು ಸಮರ್ಥನೆ ಮಾಡೋದಾದರೆ ನನ್ನ ತಕರಾರು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಸಾಲ ಪ್ರಮಾಣ

ರಾಜ್ಯದ ಸಾಲ ಪ್ರಮಾಣ

ನಮ್ಮ ಸರ್ಕಾರ ಹೆಚ್ಚು ಸಾಲ ಮಾಡಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ವಿತ್ತೀಯ ಹೊಣೆಗಾರಿಕೆ ನೀತಿ ಅನುಮೋದನೆಗೊಂಡ ನಂತರದಿಂದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ಸಾಲದ ಶೇಕಡಾವಾರು ಪ್ರಮಾಣ ಎಷ್ಟಿದೆ ಎಂದು ಲೆಕ್ಕಹಾಕಬೇಕು. ಫಿಸ್ಕಲ್ ಡಿಫಿಸಿಟ್ 3% ಒಳಗಿರಬೇಕು, ರಾಜಸ್ವ ಉಳಿಕೆ ಇರಬೇಕು. ನಮ್ಮ ಆಡಳಿತದಲ್ಲಿ ಒಂದು ಬಾರಿಯೂ ಈ ನೀತಿಯನ್ನು ಮೀರಿ ಸಾಲ ಮಾಡಿಲ್ಲ, ಎಲ್ಲಾ ವರ್ಷವೂ ಆರ್ಥಿಕ ಶಿಸ್ತನ್ನು ಪಾಲನೆ ಮಾಡಿದ್ದೇವೆ. ಆದರೂ ಸಾಲ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುವುದಾದರೆ ಈ ನಿಯಮವೇ ಸರಿ ಇಲ್ಲ ಎಂಬುದು ಅವರ ಮಾತಿನ ಅರ್ಥವೇ?

2012-13 ರಲ್ಲಿ ನಾವು ಅಧಿಕಾರಕ್ಕೆ ಬರುವ ಹಿಂದಿನ ವರ್ಷ ಬಿಜೆಪಿ ಸರ್ಕಾರ ಮಾಡಿದ್ದ ಸಾಲ ರೂ. 13,465 ಕೋಟಿ.
ನಮ್ಮ ಸರ್ಕಾರ 2013-14 ರಲ್ಲಿ ಮಾಡಿದ ಸಾಲ ರೂ. 17,284 ಕೋಟಿ, ಇದು ರಾಜ್ಯದ ಜಿಎಸ್‌ಡಿಪಿ ಗೆ 16.2% ಇತ್ತು. ಜಿಎಸ್‌ಡಿಪಿ ಯ 25% ವರೆಗೆ ಸಾಲ ಪಡೆಯಲು ಅವಕಾಶ ಇದೆ.
2014-15 ರಲ್ಲಿ ಮಾಡಿದ ಸಾಲ ರೂ. 21,875 ಕೋಟಿ. ಇದು ರಾಜ್ಯದ ಜಿಎಸ್‌ಡಿಪಿ ಯ 17% ಇದೆ.
2015-16 ರಲ್ಲಿ ಮಾಡಿದ ಸಾಲ ರೂ. 21,072 ಕೋಟಿ. ಇದು ರಾಜ್ಯದ ಜಿಎಸ್‌ಡಿಪಿ ಯ 17.4% ಇದೆ.
2016-17 ರಲ್ಲಿ ಮಾಡಿದ ಸಾಲ ರೂ. 31,056 ಕೋಟಿ. ಇದು ರಾಜ್ಯದ ಜಿಎಸ್‌ಡಿಪಿ ಯ 17.8% ಇದೆ.
2017-18 ರಲ್ಲಿ ಮಾಡಿದ ಸಾಲ ರೂ. 25,122 ಕೋಟಿ. ಇದು ರಾಜ್ಯದ ಜಿಎಸ್‌ಡಿಪಿ ಯ 17.5% ಇದೆ.
2018-19 ರಲ್ಲಿ ರಾಜ್ಯದ ಜಿಎಸ್‌ಡಿಪಿ ಯ 18.4% ಸಾಲ ಮಾಡಲಾಗಿತ್ತು.
2019-20 ರಲ್ಲಿ ಬಿಜೆಪಿ ಸರ್ಕಾರ ಜಿಎಸ್‌ಡಿಪಿ ಯ 19.2 % ಸಾಲ ಮಾಡಿತು.
2020-21 ರಲ್ಲಿ ರಾಜ್ಯದ ಜಿಎಸ್‌ಡಿಪಿ ಯ 22.37% ಸಾಲ ಮಾಡಲಾಗಿತ್ತು.
2021-22 ರಲ್ಲಿ ರಾಜ್ಯದ ಜಿಎಸ್‌ಡಿಪಿ ಯ 26.61% ಸಾಲ ಮಾಡಲಾಗಿತ್ತು.
2022-23 ರಲ್ಲಿ ರಾಜ್ಯದ ಜಿಎಸ್‌ಡಿಪಿ ಯ 27.49% ಸಾಲ ಮಾಡಲು ಅಂದಾಜಿಸಲಾಗಿದೆ.

ವಿತ್ತೀಯ ಹೊಣೆಗಾರಿಕೆ ನೀತಿ

ವಿತ್ತೀಯ ಹೊಣೆಗಾರಿಕೆ ನೀತಿ

ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ, ಅದರ 25% ಒಳಗೆ ಸಾಲ ಮಾಡಬೇಕು ಎಂಬುದು ವಿತ್ತೀಯ ಹೊಣೆಗಾರಿಕೆ ನೀತಿ ಹೇಳಿದೆ. ಆದರೆ ಬಿಜೆಪಿ ಸರ್ಕಾರ ವಿತ್ತೀಯ ಹೊಣೆಗಾರಿಕೆ ನೀತಿಗೆ ತಿದ್ದುಪಡಿ ಮಾಡಿ ಸಾಲದ ಮಿತಿಯನ್ನು ಹೆಚ್ಚು ಮಾಡಿಕೊಂಡು ಅದರ ಆಧಾರದ ಮೇಲೆ ಹೆಚ್ಚು ಸಾಲ ಮಾಡಿದೆ. ಇದರಿಂದ ಮುಂದಿನ ವರ್ಷ ಅಸಲು ಮತ್ತು ಬಡ್ಡಿ ಸೇರಿ ರೂ. 43,000 ಕೋಟಿ ಪಾವತಿಸಬೇಕು. ಹೀಗಾಗಿ ಅನಗತ್ಯ ಖರ್ಚು ಮತ್ತು ಹುದ್ದೆಗಳನ್ನು ಕಡಿಮೆ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೆ.

ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 2013-14 ರಲ್ಲಿ ಕೇಂದ್ರದ ಪಾಲು 75%, ರಾಜ್ಯದ ಪಾಲು 25% ಇತ್ತು. ಈಗ ರಾಜ್ಯದ ಪಾಲು 49.85% ಗೆ ಹೆಚ್ಚಾಗಿ, ಕೇಂದ್ರದ ಪಾಲು 50.15% ಗೆ ಇಳಿದಿದೆ. ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲು ಜಾಸ್ತಿಯಾಗ್ತಿದೆ, ಇದು ಸರಿಯಲ್ಲ ಎಂದು ಹೇಳಿದ್ದೆ. ಬದ್ಧತಾ ಖರ್ಚನ್ನು ಕಡಿಮೆ ಮಾಡುತ್ತಾ ಹೋದಾಗ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಹಣ ಸಿಗುತ್ತದೆ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಹಣ ಕೊಡುವುದನ್ನು ನಿಲ್ಲಿಸಬಾರದು ಎಂದು ತಿಳಿಸಿದರು.

ಈಗಿನ ಬಜೆಟ್ ಗಾತ್ರ ರೂ. 2.65 ಲಕ್ಷ ಕೋಟಿ

ಈಗಿನ ಬಜೆಟ್ ಗಾತ್ರ ರೂ. 2.65 ಲಕ್ಷ ಕೋಟಿ

ನಮ್ಮ ಸರ್ಕಾರದ ಕೊನೆ ಬಜೆಟ್‌ಗೂ ಹಾಗೂ ಈಗಿನ ಬಜೆಟ್‌ಗೂ ನಡುವಿನ ವ್ಯತ್ಯಾಸ ರೂ. 64,000 ಕೋಟಿ. ಬಜೆಟ್‌ನ ಒಟ್ಟು ಯೋಜನಾ ವೆಚ್ಚದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗೆ 24.1% ಅನುದಾನ ನೀಡಬೇಕು. 2018 ರ ನಮ್ಮ ಬಜೆಟ್‌ ಗಾತ್ರ ರೂ. 2.02 ಲಕ್ಷ ಕೋಟಿ. ನಾವು ನೀಡಿದ್ದ ಅನುದಾನ ರೂ. 29,600 ಕೋಟಿಗೂ ಹೆಚ್ಚು. ಈಗಿನ ಬಜೆಟ್ ಗಾತ್ರ ರೂ. 2.65 ಲಕ್ಷ ಕೋಟಿಗೆ ಹೆಚ್ಚಾದರೂ ಈ ಯೋಜನೆಗೆ ನೀಡಿರುವ ಅನುದಾನ ರೂ. 28,000 ಕೋಟಿ. ಕನಿಷ್ಠ ರೂ. 40,000 ಆಗಬೇಕಿತ್ತು ಎಂಬುದು ನನ್ನ ಅನಿಸಿಕೆ.

ಈ ಬಜೆಟ್‌ನಲ್ಲಿ ಸಾಲ ಮತ್ತು ಮರುಪಾವತಿ ಪ್ರಮಾಣ ಮಿತಿಮೀರಿ ಹೆಚ್ಚಾಗಿದೆ, ಆದ್ದರಿಂದ ಇದು ಜನಪರವಾದ, ಬಡವರ ಪರವಾದ, ಅಭಿವೃದ್ಧಿ ಪರವಾದ ಬಜೆಟ್ ಅಲ್ಲ ಎಂಬುದು ನನ್ನ ಸ್ಪಷ್ಟವಾದ ಅಭಿಪ್ರಾಯ ಎಂದು ಹೇಳಿದರು.

Recommended Video

ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ಇಸ್ಲಾಂ ಬಗ್ಗೆ ಭೀತಿ ಶುರು :ಪಾಕ್ PM | Oneindia Kannada

English summary
Budget Session: Opposistion leader Siddaramaiah targetted CM Basavaraj Bommai on GST compensation from Centre and revenue shortfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X