ವರ್ಷಾಂತ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ!
ಬೆಂಗಳೂರು, ಡಿಸೆಂಬರ್ 27 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರುವ ಆಕಾಂಕ್ಷಿಗಳಿಗೆ ವರ್ಷಾಂತ್ಯದಲ್ಲಿ ನಿರಾಸೆಯಾಗಿದೆ. ಸಂಪುಟ ವಿಸ್ತರಣೆ ಜೊತೆಗೆ ಪುನಾರಚನೆಗೂ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಪ್ರಕ್ರಿಯೆ ಫೆಬ್ರವರಿಗೆ ಮುಂದಕ್ಕೆ ಹೋಗಿದೆ.
ಡಿಸೆಂಬರ್ 5ರಂದು ನಡೆದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ. ಉಪ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರು ಸಂಪುಟ ಸೇರುವುದು ಯಾವಾಗ? ಎಂಬ ಪ್ರಶ್ನೆಗಳು ಎದ್ದಿವೆ. ಆದರೆ, ಸಂಪುಟ ಸೇರಲು ಹಲವು ಅಡೆ-ತಡೆಗಳು ಎದುರಾಗುತ್ತಿವೆ.
ಬಿಜೆಪಿ ಹೈಕಮಾಂಡ್ ಜನವರಿಯಲ್ಲಿ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಆದರೆ, ಈಗ ಬಿಜೆಪಿಯ ಶಾಸಕರಿಗೂ ಅವಕಾಶ ನೀಡಲು ಸಂಪುಟ ಪುನಾರಚನೆ ಮಾಡಲು ತೀರ್ಮಾನಿಸಲಾಗಿದೆ. ಆದ್ದರಿಂದ, ಫೆಬ್ರವರಿಗೆ ಈ ಪ್ರಕ್ರಿಯೆ ನಡೆಯಲಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ, ಕಂಕಣ ಸೂರ್ಯ ಗ್ರಹಣ, ಧರ್ನುಮಾಸ ಮುಂತಾದ ಕಾರಣಗಳಿಂದಾಗಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಿದೆ. ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ನಿರೀಕ್ಷೆ ಇಟ್ಟುಕೊಂಡವರಿಗೆ ಹಿನ್ನಡೆಯಾಗಿದೆ.

ಜನವರಿ 16ಕ್ಕೆ ಸಂಪುಟ ವಿಸ್ತರಣೆ
ಕಂದಾಯ ಸಚಿವ ಆರ್. ಅಶೋಕ, "ಜನವರಿ 16ರಂದು ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಧರ್ನುಮಾಸದ ಕಾರಣದಿಂದಾಗಿ ವಿಸ್ತರಣೆ ತಡವಾಗಿತ್ತು. ಸಂಪುಟ ವಿಸ್ತರಣೆ ಮಾಡಿ ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತದೆ" ಎಂದು ಹೇಳಿದ್ದರು.

ಸಂಪುಟ ವಿಸ್ತರಣೆ ಜೊತೆ ಪುನಾರಚನೆ
ಬಿಜೆಪಿ ಸಂಪುಟ ವಿಸ್ತರಣೆ ಜೊತೆ ಪುನಾರಚನೆ ಮಾಡಲು ಮುಂದಾಗಿದೆ. ಪುನಾರಚನೆಯಾದರೆ ಮೂವರು ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ. ಬಿಜೆಪಿಯ ಮೂವರು ಹಿರಿಯರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದೆ. ಆದ್ದರಿಂದ, ಪ್ರಕ್ರಿಯೆ ವಿಳಂಬವಾಗಲಿದೆ.

ಅಧಿವೇಶನಕ್ಕೆ ಸಚಿವ ಸ್ಥಾನವಿಲ್ಲ
ಕರ್ನಾಟಕ ಬಿಜೆಪಿ ಸರ್ಕಾರದ ಮೊದಲ ಅಧಿವೇಶನ ಜನವರಿ 20ರಿಂದ ನಡೆಯಲಿದೆ. 9 ದಿನಗಳ ಕಾಲ ಅಧಿವೇಶನ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದೆ. ಅಧಿವೇಶನಕ್ಕೂ ಮೊದಲು ಸಚಿವರಾಗಬೇಕು ಎಂಬ ಶಾಸಕರ ಆಸೆಗೆ ಈಗ ತಣ್ಣೀರು ಸುರಿದಂತಾಗಿದೆ.

ಉಪ ಮುಖ್ಯಮಂತ್ರಿ ಹುದ್ದೆ ಯಾರಿಗೆ?
ಸಂಪುಟ ವಿಸ್ತರಣೆ ವೇಳೆ ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆಯೂ ತೀರ್ಮಾನ ಕೈಗೊಳ್ಳಬೇಕು. ಈಗಾಗಲೇ ಯಡಿಯೂರಪ್ಪ ಸಂಪುಟದಲ್ಲಿ ಮೂವರು ಉಪ ಮುಖ್ಯಮಂತ್ರಿಗಳು ಇದ್ದಾರೆ. ಬಿ. ಶ್ರೀರಾಮುಲು, ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.












Click it and Unblock the Notifications