BS Yediyurappa: ಚುನಾವಣಾ ಅಖಾಡಕ್ಕೆ ಬಿಎಸ್‌ವೈ ಎಂಟ್ರಿ: ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರ್ತೀವಿ ಎಂದ ರಾಜಾಹುಲಿ
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದ್ದು ಯಾರ ಸಹಾಯವೂ ಇಲ್ಲದೆ ಸರ್ಕಾರ ರಚನೆ ಮಾಡುವುದಾಗಿ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಿಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು ಇಂದಿನಿಂದ ತಾವು ಪ್ರಚಾರ ಕಾರ್ಯದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಗಳೂರಿನಲ್ಲಿ ಬಿಎಸ್‌ವೈ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಇನ್ನು ಮಧ್ಯಾಹ್ನ 3 ಗಂಟೆಗೆ ಬಾಡ ಗ್ರಾಮದಲ್ಲಿ ಸಾರ್ವಜನಿಕ ಪ್ರಚಾರದಲ್ಲಿ ಕೂಡ ಅವರು ಭಾಗವಹಿಸಲಿದ್ದಾರೆ. ಬಾಡ ಕಾರ್ಯಕ್ರಮ ಮುಕ್ತಾಯದ ಬಳಿಕ ಹುಬ್ಬಳ್ಳಿಗೆ ತೆರಳಲಿದ್ದು ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್ 26ರಂದು ಬಿಎಸ್‌ವೈ ಬೆಳಿಗ್ಗೆ 10.30ಕ್ಕೆ ಅಥಣಿಯಲ್ಲಿ ಸಾರ್ವಜನಿಕರ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕುಡಚಿಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದು, ಮಧ್ಯಾಹ್ನ ಮೂರು ಗಂಟೆಗೆ ಖಾನಾಪುರದಲ್ಲಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮತ್ತೆ ಹುಬ್ಬಳ್ಳಿಗೆ ಆಗಮಿಸಲಿದ್ದು ವಾಸ್ತವ್ಯ ಹೂಡಲಿದ್ದಾರೆ.
ಏಪ್ರಿಲ್ 27ರಂದು ಬೆಳಿಗ್ಗೆ 11 ಗಂಟೆಗೆ ಬಸವನಬಾಗೇವಾಡಿಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದು, ಮಧ್ಯಾಹ್ನ 12.30ಕ್ಕೆ ಮುದ್ದೇ ಬಿಹಾಳದಲ್ಲಿ ನಡೆಯಲಿರುವ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಇಂಡಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿದ ಬಳಿಕ ಗುರುವಾರ ರಾತ್ರಿ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸ್ಟಾರ್ ಪ್ರಚಾರಕರು ಭಾಗಿ
ರಾಜ್ಯ ಚುನಾವಣೆಯನ್ನು ಗೆಲ್ಲಲೇಬೇಕೆನ್ನುವ ಹಠಕ್ಕೆ ಬಿದ್ದಿರುವ ಬಿಜೆಪಿ ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ಹಲವು ಹಿರಿಯ ನಾಯಕರಿಗೆ, ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೊಸ ಮುಖಗಳನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಮುಂತಾಧ ಘಟಾನುಘಟಿ ನಾಯಕರನ್ನು ಕರೆಸಿ ಪ್ರಚಾರ ಮಾಡಿಸಲು ಮುಂದಾಗಿದೆ.












Click it and Unblock the Notifications