BS Yediyurappa ಮನೆ ಮೇಲೆ ಕಲ್ಲು: ಬಿಎಸ್‌ವೈ ಮುಗಿಸಲು ಬಿಜೆಪಿಯೇ ಹೆಣೆದ ಕುತಂತ್ರವಿದು- ಡಿಕೆಶಿ ಶಾಕಿಂಗ್ ಹೇಳಿಕೆ
ಬೆಂಗಳೂರು, ಮಾರ್ಚ್ 28: ಸೋಮವಾರ ಬಂಜಾರ ಸಮುದಾಯದವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ( BS Yediyurappa ) ಶಿಕಾರಿಪುರದ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಅವರ ಮನೆಯ ಗಾಜುಗಳು ಪುಡಿಯಾಗಿದ್ದು, ಶಿಕಾರಿಪುರ ಪಟ್ಟಣದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಈ ಪ್ರಕರಣವೀಗ ರಾಜ್ಯ ರಾಜಕಾರಣದಲ್ಲಿ ( Karnataka Politics ) ಭಾರೀ ಸದ್ದು ಮಾಡುತ್ತಿದೆ.
ಪರಿಶಿಷ್ಟ ಜಾತಿ ಕೋಟಾವನ್ನು ವಿವಿಧ ಎಸ್‌ಸಿ ಉಪಜಾತಿಗಳಿಗೆ ಹಂಚಲು ರಾಜ್ಯ ಸಚಿವ ಸಂಪುಟದ ನಿರ್ಧಾರ ಕೈಗೊಂಡಿದೆ. ಇದಕ್ಕೆ ಕರ್ನಾಟಕದಾದ್ಯಂತ ಬಂಜಾರರು ಸೇರಿದಂತೆ ಇತರ ದಲಿತ ಸಮುದಾಯದ ಜನರು ಪ್ರತಿಭಟನೆ ಮಾಡುತ್ತಿದ್ದಾರೆ.

ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದ ಯುವಕರು, ಯಡಿಯೂರಪ್ಪ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಅವರು ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲದಿದ್ದರೂ, ಪ್ರತಿಭಟನಾಕಾರರು ಮಾಜಿ ಸಿಎಂ ಮನೆಯನ್ನು ಗುರಿಯಾಗಿಸಿದ್ದು ಈ ಚರ್ಚೆಗೆ ಗ್ರಾಸವಾಗಿದೆ.
ಎಸ್‌ಸಿ ಕೋಟಾದೊಳಗಿನ ಉಪ- ವರ್ಗೀಕರಣದಿಂದ ಅತೃಪ್ತಿ ಹೊಂದಿದವರು ತುಲನಾತ್ಮಕವಾಗಿ ಮುಂದುವರಿದ ಉಪ- ಜಾತಿಗಳಿಗೆ ಸೇರಿದವರಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪ್ರತಿಭಟನಾಕಾರರು ತಮ್ಮ ಮನೆಯನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
ನಾಳೆ ಅಥವಾ ನಾಡಿದ್ದು ಶಿಕಾರಿಪುರಕ್ಕೆ ಹೋದಾಗ ಒಮ್ಮೆ ಅವರೊಂದಿಗೆ ಮಾತನಾಡುತ್ತೇನೆ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.
ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿ ತಮ್ಮ ದೀರ್ಘಕಾಲದ ಶಿಕಾರಿಪುರ ಕ್ಷೇತ್ರವನ್ನು ತಮ್ಮ ಕಿರಿಯ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಘೋಷಿಸಿರುವ ಸಮಯದಲ್ಲಿ ಈ ಘಟನೆ ನಡೆದಿದೆ.
ಈ ದಾಳಿಯು ತನ್ನ ಇಮೇಜ್‌ಗೆ ಕಳಂಕ ತರುವ ಬಿಜೆಪಿ ಪಿತೂರಿಯೇ ಎಂಬ ಪ್ರಶ್ನೆಗೆ, 'ಕೆಲವು ತಪ್ಪು ತಿಳುವಳಿಕೆಯಿಂದ ಅವರು (ಪ್ರತಿಭಟನಕಾರರು) ಇದನ್ನು ಮಾಡಿದ್ದಾರೆ ಎಂಬುದಾಗಿ ನಾನು ಭಾವಿಸುತ್ತೇನೆ' ಎಂದು ಬಿಎಸ್‌ವೈ ತಿಳಿಸಿದ್ದಾರೆ.

ಇದರ ಹಿಂದೆ ಯಾವುದೇ ಗುಪ್ತ ಕೈವಾಡವಿಲ್ಲ. ಕಳೆದ ವಾರದ ಕ್ಯಾಬಿನೆಟ್ ನಿರ್ಧಾರದ ಪ್ರಕಾರ, ಕರ್ನಾಟಕದ ಎಸ್‌ಸಿ ಸಮುದಾಯಗಳನ್ನು 'ಎಡ', 'ಬಲ', 'ಸ್ಪೃಶ್ಯರು' ಮತ್ತು ಹೆಸರಿಸದ ನಾಲ್ಕನೇ ಗುಂಪು ಎಂದು ವಿಂಗಡಿಸಲಾಗಿದೆ ಎಂಬುದಾಗಿ ಯಡಿಯೂರಪ್ಪ ಹೇಳಿದ್ದಾರೆ.
ಶೇ 17 ಎಸ್‌ಸಿ ಕೋಟಾವನ್ನು ಎಡ ಉಪ- ಗುಂಪಿಗೆ ಶೇ 6, ಬಲ ಗುಂಪಿಗೆ ಶೇ 5.5, ಸ್ಪೃಶ್ಯರಿಗೆ ಶೇ 4.5 ಹಂಚಲಾಗಿದೆ. ಅದರ ಅಡಿಯಲ್ಲಿ ಬಂಜಾರ ಸಮುದಾಯವು ಬರುತ್ತದೆ.
ನಿನ್ನೆ ನಡೆದ ಪ್ರತಿಭಟನೆಯಲ್ಲಿ ಬಂಜಾರ ಸಮುದಾಯದ ಯುವಕರು ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದ್ದಾರೆ.
ಯಡಿಯೂರಪ್ಪ ಅವರ ಮನೆ ಸುತ್ತಲಿನ ರಸ್ತೆಗಳನ್ನು ತಡೆದು ಬಿಜೆಪಿ ಧ್ವಜ, ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಕಿತ್ತುಹಾಕಿದ್ದಾರೆ. ಟೈರ್‌ಗಳಿಗೆ ಬೆಂಕಿ ಹಚ್ಚಿ, ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಪ್ರತಿಭಟನಾಕಾರರು ಗಲಭೆ ನಿಗ್ರಹ ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿದ್ದಂತೆ, ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ
ಸಂಪುಟ ಉಪ ಸಮಿತಿಯ ಶಿಫಾರಸಿನ ಮೇರೆಗೆ ಉಪವರ್ಗೀಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
ಘಟನೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ
ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಯಾವುದೇ ಅಧಿಕಾರದಲ್ಲಿ ಇರದ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಅವರನ್ನು ರಾಜಕೀಯದಿಂದ ಮುಗಿಸಲು ಬಿಜೆಪಿಯೇ ಆಂತರಿಕವಾಗಿ ಕುತಂತ್ರ ನಡೆಸಿದೆ ಎಂದು ತಿಳಿಸಿದ್ದಾರೆ.












Click it and Unblock the Notifications