ವರುಣಾದಲ್ಲಿ ಅಮಿತ್ ಶಾ ಭಾಷಣ ಮಧ್ಯೆಯೇ ಎದ್ದು ಹೋದ ಯಡಿಯೂರಪ್ಪ, ಸಿದ್ದು, ಬಿಎಸ್‌ವೈ ಹೊಂದಾಣಿಕೆಯ ಸೂಚನೆಯೇ?
ಹೊಸಕೋಟೆ, ಮೇ 3: ವರುಣಾದಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಅಮಿತ್ ಭಾಷಣ ಮಾಡುವ ವೇಳೆ ಬಿಜೆಪಿ ಹಿರಿಯ ನಾಯಕರಾದ ಬಿಎಸ್ ಯಡಿಯೂರಪ್ಪನವರು ಎದ್ದು ಹೋದ ಘಟನೆ ವೈರಲ್ ಆಗಿದ್ದು, ಇದು ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪನವರ ಹೊಂದಾಣಿಕೆಯ ಸೂಚನೆಯೇ ಎಂದು ಚರ್ಚೆ ಶುರುವಾಗಿದೆ.
ವರುಣಾ ಬಳಿಯ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿ ಸೋಮಣ್ಣ ಪರ ಮತಯಾಚನೆ ಸೂಚಕವಾಗಿ ಬಿಜೆಪಿ ಬೃಹತ್ ಸಮಾವೇಶ ನಡೆಸಲಾಗಿತ್ತು. ಇಲ್ಲಿ ಪಾಲ್ಗೊಂಡಿದ್ದ ಬಿಎಸ್ ಯಡಿಯೂರಪ್ಪನವರು ಗೃಹ ಸಚಿವ ಅಮಿತ್ ಶಾ ಅವರು ಭಾಷಣ ಮಾಡುತ್ತಿದ್ದ ವೇಳೆಯೇ ಅರ್ಧದಲ್ಲೇ ಎದ್ದು ಹೋದ ಘಟನೆ ಅಚ್ಚರಿಗೆ ಕಾರಣವಾಯಿತು.

ಸಿದ್ದರಾಮಯ್ಯ ವಿರುದ್ಧ ಮಾತನಾಡಲೇ ಇಲ್ಲ:
ಅಲ್ಲದೆ ಬಿಎಸ್ ಯಡಿಯೂರಪ್ಪನವರು ಈ ಸಮಾವೇಶದಲ್ಲಿ ಎಲ್ಲಿಯೂ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಲೇ ಇಲ್ಲ. ಎಲ್ಲ ಬಿಜೆಪಿ ಕಾರ್ಯಕ್ರಮಗಳು ಹಾಗೂ ಪ್ರಣಾಳಿಕೆ ವಿಚಾರವನ್ನು ಅವರು ಮಾತನಾಡಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಹಾಗೂ
ಬಿಎಸ್ ಯಡಿಯೂರಪ್ಪನವರ ಮಧ್ಯೆ ಹೊಂದಾಣಿಕೆಯಾಗಿದೆ. ಹಾಗಾಗಿ ಬಿಎಸ್ ಯಡಿಯೂರಪ್ಪನವರು ಸಿದ್ದರಾಮಯ್ಯ ವಿರುದ್ಧ ಮಾತನಾಡಲಿಲ್ಲ ಎಂಬ ಚರ್ಚೆ ಆರಂಭವಾಗಿದೆ.
ಶಿಕಾರಿಪುರದಲ್ಲಿ ಕಣಕ್ಕೆ ವಿಜಯೇಂದ್ರ:
ಹಿಂದೆ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರನ್ನು ನಿಲ್ಲಿಸಲಾಗುತ್ತದೆ. ಈ ಬಗ್ಗೆ ಮಾತುಕತೆ ನಡೆಯುತ್ತದೆ ಎಂದು ಸ್ವತಃ ಬಿಎಸ್ ಯಡಿಯೂರಪ್ಪನವರೇ ಹೇಳಿದ್ದರು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ಬಿವೈ ವಿಜಯೇಂದ್ರ ಅವರು ತಮ್ಮ ತಂದೆಯ ಕ್ಷೇತ್ರವಾದ ಶಿಕಾರಿಪುರದಲ್ಲಿ ಕಣಕ್ಕೆ ಇಳಿದರು.
ಇದಕ್ಕೂ ಮೊದಲು ಬಿಎಸ್ ಯಡಿಯೂರಪ್ಪನವರ ಮಗ ಹಾಗೂ ವಿ ಸೋಮಣ್ಣ ಅವರ ಮಗ ಅರುಣ್ ಸೋಮಣ್ಣ ಅವರ ನಡುವೆ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಇದರಲ್ಲಿ ಅವರು ಇರ್ವರು ಅಷ್ಟಾಗಿ ಹೊಂದಾಣಿಕೆ ಇಲ್ಲ ಎಂದು ಕಂಡು ಬಂದಿತ್ತು. ಈ ಬೆಳವಣಿಗೆ ಇಬ್ಬರು ಹಿರಿಯ ನಾಯಕರ ನಡುವೆ ಎಲ್ಲವೂ ಸರಿ ಇಲ್ಲ ಎಂದೇ ಬಿಂಬಿತವಾಗಿತ್ತು.
ವಿ ಸೋಮಣ್ಣ ಪರ ಅನೇಕ ಕಡೆ ವಿರೋಧ:
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿ ಸೋಮಣ್ಣ ಪರ ಅನೇಕ ಕಡೆ ವಿರೋಧಗಳು ವ್ಯಕ್ತವಾಗಿದ್ದವು. ವರುಣಾದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಪು ಸಿದ್ದಲಿಂಗಸ್ವಾಮಿ ಅವರು ಸೋಮಣ್ಣ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಬಿಎಸ್‌ವೈ ಅವರು ಪಕ್ಷದ ಕೆಲಸ ಮುಖ್ಯ ಎಂದು ಹೇಳಿದ ಮೇಲೆ ಕಾಪು ಸಿದ್ದಲಿಂಗಸ್ವಾಮಿ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ:
ಈ ಮಧ್ಯೆ ಕಾಪು ಸಿದ್ದಲಿಂಗಸ್ವಾಮಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಯೂ ಹರಡಿತ್ತು. ಬಳಿಕ ಕಾಪು ಸಿದ್ದಲಿಂಗಸ್ವಾಮಿ ಅವರು ಬಿಎಸ್ ಯಡಿಯೂರಪ್ಪ ಅವರ ಫೋಟೋ ಹಿಡಿದುಕೊಂಡು ನನ್ನ ಕತ್ತು ಸೀಳಿದರು ನಾನು ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿದ್ದರು. ಹಿಂದೆ ಸಿದ್ದರಾಮಯ್ಯ ಅವರು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದು, ಬಿಎಸ್ ಯಡಿಯೂರಪ್ಪನವರು ಈ ಬಾರಿ ಸಿದ್ದು ಮೇಲೆ ಅನುಕಂಪ ಹೊಂದಿರಬಹುದು ಎಂದು ಹೇಳಲಾಗಿದೆ.
ವಿ ಸೋಮಣ್ಣ ಬಗ್ಗೆ ಮಾತಿಲ್ಲ:
ಮುಖ್ಯವಾಗಿ ತಮ್ಮ ಭಾಷಣದಲ್ಲಿ ಬಿಎಸ್ ಯಡಿಯೂರಪ್ಪನವರು ಹೊಸಕೋಟೆ ಸಮಾವೇಶದಲ್ಲಿ ವಿ ಸೋಮಣ್ಣ ಅವರ ಬಗ್ಗೆ ಹೆಚ್ಚು ಮಾತನಾಡದೇ ಇದ್ದದ್ದು ಕೂಡ ಇಲ್ಲಿ ಅಚ್ಚರಿಗೆ ಕಾರಣವಾಯಿತು. ಹಾಗೇ ಅವರು ಸಿದ್ದರಾಮಯ್ಯ ಬಗ್ಗೆ ಎಲ್ಲಿಯೂ ತೆಗಳಲಿಲ್ಲ. ತಮ್ಮ ಭಾಷಣ ಮುಗಿಸಿದ ಅವರು ಅಮಿತ್ ಶಾ ಭಾಷಣ ಮಾಡುವಾಗ ಎದ್ದು ಹೋದರು. ಆಗ ಹಿಂದೆ ಹೋದ ಸಂಸದ ಪ್ರತಾಪ್ ಸಿಂಹ ಮತ್ತೆ ವಾಪಸ್ ಬಂದರು.












Click it and Unblock the Notifications