ಬ್ರೇಕಿಂಗ್ ನ್ಯೂಸ್: ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ
ಬೆಂಗಳೂರು, ಆಗಸ್ಟ್ 14 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಜುಲೈ 26ರಂದು ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ್ದು, ಇನ್ನೂ ಸಂಪುಟ ವಿಸ್ತರಣೆ ನಡೆದಿರಲಿಲ್ಲ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಗಸ್ಟ್ 16ರಂದು ದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಪೂರ್ಣಗೊಳಿಸಿ ಅವರು ಬೆಂಗಳೂರಿಗೆ ವಾಪಸ್ ಅಗಿದ್ದಾರೆ. ಸಂಪುಟ ಸೇರುವ ಶಾಸಕರು ಯಾರು? ಎಂಬ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ.
ಆಗಸ್ಟ್ 16ರ ಬಳಿಕ ದೆಹಲಿಗೆ ಬರುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪಗೆ ಸೂಚನೆ ಕೊಟ್ಟಿದ್ದಾರೆ. ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಮುಖ್ಯಮಂತ್ರಿಗಳು ಸಿದ್ಧಪಡಿಸಲಿದ್ದು, ದೆಹಲಿಗೆ ತೆಗೆದುಕೊಂಡು ಹೋಗಲಿದ್ದಾರೆ.
ಶೇ 50ರಷ್ಟು ಸಂಪುಟವನ್ನು ಮಾತ್ರ ಭರ್ತಿ ಮಾಡಲಾಗುತ್ತದೆ. ಒಟ್ಟು 2 ಹಂತದಲ್ಲಿ ಸಂಪುಟ ವಿಸ್ತರಣೆ ನಡೆಯಲಿದ್ದು, ಎರಡನೇ ಹಂತದಲ್ಲಿ ಅನರ್ಹ ಶಾಸಕರನ್ನು ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಶಾಸಕರು ಸಚಿವ ಸ್ಥಾನ ಪಡೆಯಲು ಲಾಬಿ ಆರಂಭಿಸಿದ್ದಾರೆ.

ಆಗಸ್ಟ್ 19ರಂದು ಸಂಪುಟ ವಿಸ್ತರಣೆ
ಬಿಜೆಪಿ ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 19ರಂದು ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಶುಕ್ರವಾರ ಯಡಿಯೂರಪ್ಪ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿಯಾಗಲಿದ್ದು, ಸಂಭಾವ್ಯ ಸಚಿವರ ಪಟ್ಟಿಯನ್ನು ನೀಡಿ ಒಪ್ಪಿಗೆ ಪಡೆಯಲಿದ್ದಾರೆ.

ಅನರ್ಹ ಶಾಸಕರು ಸೇರಲ್ಲ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣವಾದ ಯಾವ ಶಾಸಕರು ಸಹ ಸಂಪುಟಕ್ಕೆ ಮೊದಲ ಹಂತದಲ್ಲಿ ಸೇರುವುದಿಲ್ಲ. ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಆದ್ದರಿಂದ, ಕಾದು ನೋಡುವ ತಂತ್ರವನ್ನು ಬಿಜೆಪಿ ಅನುಸರಿಸಲಿದೆ.

ಸಂಭಾವ್ಯ ಸಚಿವರ ಪಟ್ಟಿ
ಮೊದಲ ಹಂತದಲ್ಲಿ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಕೆ. ಎಸ್. ಈಶ್ವರಪ್ಪ, ಆರ್. ಅಶೋಕ, ಜೆ. ಸಿ. ಮಾಧುಸ್ವಾಮಿ, ಶ್ರೀರಾಮುಲು, ಡಾ. ಅಶ್ವತ್ಥನಾರಾಯಣ, ಎಂ. ಪಿ. ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ಕೆ. ಜಿ. ಬೋಪಯ್ಯ, ಕೋಟಾ ಶ್ರೀನಿವಾಸ ಪೂಜಾರಿ, ವಿ. ಸೋಮಣ್ಣ ಹೆಸರುಗಳು ಕೇಳಿಬರುತ್ತಿವೆ.

2 ಹಂತದಲ್ಲಿ ಸಂಪುಟ ವಿಸ್ತರಣೆ
ಒಟ್ಟು 2 ಹಂತದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ. 2 ನೇ ಹಂತದಲ್ಲಿ ಅನರ್ಹ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಲಾಗಿದೆ. ಅಷ್ಟರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆದು ತೀರ್ಪು ಪ್ರಕಟವಾಗಬೇಕಿದೆ.












Click it and Unblock the Notifications