BS Yediyurappa: ಇಂದು ಬಿಎಸ್ ಯಡಿಯೂರಪ್ಪ, ಸಂತೋಷ್ ಲಾಡ್ ಹುಟ್ಟುಹಬ್ಬ- ಹೇಗಿದೆ ಆಚರಣೆ?
ಬೆಂಗಳೂರು ಫೆಬ್ರವರಿ 27: ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ ಅಂತಾನೇ ಕರೆಸಿಕೊಳ್ಳುವ ಬಿಎಸ್ ಯಡಿಯೂರಪ್ಪಗೆ ಇಂದು(ಫೆ.27) ಹುಟ್ಟು ಹಬ್ಬದ ಸಂಭ್ರಮ. 82ನೇ ವಸಂತಕ್ಕೆ ಕಾಲಿಟ್ಟಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನರಿಗೆ ಹುಟ್ಟು ಹಬ್ಬದ ಶುಭಾಶಯಗಳು. ರಾಜ್ಯದೆಲ್ಲೆಡೆ ಇವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಈಗಾಗಲೇ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಮನೆ ದೇವರಿಗೆ ಪೂಜೆ ಮಾಡಲಾಗಿದೆ. ಪ್ರತೀ ಬಾರಿ ಮನೆ ದೇವರಿಗೆ ಯಡಿಯೂರಪ್ಪ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಇಂದು ಮಧ್ಯಾಹ್ನ ಎರಡು ಗಂಟೆ ನಂತರ ಹುಟ್ಟೂರಿಗೆ ತೆರಳಿ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಸಾಧ್ಯತೆ ಇದೆ.

ದಲಿತರು, ರೈತರು, ಬಡವರ ಪರ ಹೋರಾಟ ನಡೆಸಿದ ಹೆಮ್ಮೆಯ ನಾಯಕ ಬಿಎಸ್ ವೈ. ಅಸಾಧಾರಣ ನಾಯಕನಾಗಿ, ರಾಜ್ಯದ ಜನರ, ರೈತ ಬಂಧುಗಳ, ದುರ್ಬಲರ ಆಶೋತ್ತರಗಳಿಗಾಗಿ ದುಡಿದ ನಾಯಕ. ರಾಜ್ಯ ಕಂಡ ಧೀಮಂತ ನಾಯಕ, ಹುಟ್ಟು ಹೋರಾಟಗಾರ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ.
ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬ
ಅಲ್ಲದೆ ಇಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ಚೇತನ ಮಕ್ಕಳೊಂದಿಗೆ ಸಂತೋಷ ಲಾಡ್ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ 50ನೇ ಜನ್ಮದಿನದ ಪ್ರಯುಕ್ತ ಸಂತೋಷ್‌ಲಾಡ್ ಫೌಂಡೇಶನ್ ವತಿಯಿಂದ ಈಚೆಗೆ ಆಯೋಜಿಸಿದ್ದ ತಾಲ್ಲೂಕಿನ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಆಶಾ ಹಾಗೂ ಕೃಷಿ ಸಖಿಯರಿಗೆ ಸಹಾಯಧನ ವಿತರಣೆ ಮಾಡಿದರು.

ಇನ್ನೂ ಈ ದಿನವನ್ನು ಆಪತ್ ರಕ್ಷಕ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಂಜೀವಿನಿ ಜೀವ ರಕ್ಷಕ ಟ್ರಸ್ಟ ಮತ್ತು ಬಿ ಮಾರ್ಮಿ ಭಾರತ ಏಕತಾ ಮಷನ್ ನಿಂದ ಈ ದಿನವನ್ನು ಆಪತ್ ರಕ್ಷಕ ದಿನಾಚರಣೆಯನ್ನಾಗಿ ಆಚರಿಸಲಾಗುವುದು ಎಂದು ಟ್ರಸ್ಟ್ ರಾಜ್ಯಾಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.
ಒರಿಸ್ಸಾದ ರೈಲು ದುರಂತ, ಕೇರಳದ ಗುಡ್ಡ ಕುಸಿತ, ಕೇದಾರನಾಥದಲ್ಲಿ ಪ್ರವಾಹದ ವೇಳೆ ಸಂತೋಷ್ ಲಾಡ್ ನೆರವಿಗೆ ನಿಂತು ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ. ಹಲವರ ಜೀವ ಕಾಪಾಡಿದ್ದಾರೆ. ಇವರ ಈ ಕೆಲಸಗಳನ್ನು ಗಮನಿಸಿ ರಾಜ್ಯದ 15 ಜಿಲ್ಲೆಗಳಲ್ಲಿ ಆಪತ್ ರಕ್ಷಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಆಚರಣೆಯ ವೇಳೆ ಕ್ರೀಡಾಪಟುಗಳಿಗೆ, ರೈತ ಪರ ಹೋರಾಟಗಾರರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.












Click it and Unblock the Notifications