ರಾಜ್ಯದ ಅಭಿವೃದ್ಧಿ ಬಗ್ಗೆ "ಬ್ರೇಕ್‌ಫಾಸ್ಟ್" ಚರ್ಚೆ: ಡಿ.ಕೆ ಶಿವಕುಮಾರ್
ಕರ್ನಾಟಕದಲ್ಲಿ ಬ್ರೇಕ್‌ಫಾಸ್ಟ್ ರಾಜಕೀಯ ಮುಂದುವರಿದಿದ್ದು, ಇದು ರಾಜ್ಯದ ಜನರ ಅಸಮಾಧಾನಕ್ಕೂ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಬ್ಬರೂ ಪರಸ್ಪರ ಔತಕೂಟವನ್ನು ಏರ್ಪಡಿಸಿದ್ದು ಇದಕ್ಕೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್ ಅವರ ಮನೆಯಲ್ಲಿ ನಾಟಿ ಕೋಳಿ ಸಾರು & ಇಡ್ಲಿ ಸವಿದಿದ್ದಾರೆ. ಆದರೆ ಇದು ರಾಜ್ಯದ ಅಭಿವೃದ್ಧಿ ವಿಚಾರಕ್ಕೆ ನಡೆದ ಬ್ರೇಕ್‌ಫಾಸ್ಟ್ ಎಂದು ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಬ್ರೇಕ್‌ಫಾಸ್ಟ್ ರಾಜಕೀಯ ಮುಂದುವರಿದಿದೆ. ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ (ಅಧಿಕೃತ ಸರ್ಕಾರಿ ನಿವಾಸ) ಡಿ.ಕೆ ಶಿವಕುಮಾರ್ ಅವರು ಭೇಟಿ ನೀಡಿದ್ದರು. ಇದೀಗ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿರುವ ಇಬ್ಬರೂ ಇಂದು ಉಪಹಾರದ ಸಮಯದಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಟ್ವೀಟ್
ಸಿದ್ದರಾಮಯ್ಯ ಭೇಟಿ ಹಾಗೂ ಬ್ರೇಕ್ ಫಾಸ್ಟ್‌ಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಕರ್ನಾಟಕಕ್ಕೆ ನಾವು ನೀಡಿರುವ ಭರವಸೆಗಳನ್ನು ಈಡೇರಿಸಲು ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಚರ್ಚಿಸಲು ಮತ್ತು ಬಲಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಪಾಹಾರ ಕೂಟಕ್ಕೆ ಆಹ್ವಾನಿಸಿದ್ದೇನೆ ಎಂದಿದ್ದರು.
ಮುಂದುವರಿದು ಕಾಂಗ್ರೆಸ್ ದೃಷ್ಟಿಕೋನದಡಿಯಲ್ಲಿ ಉತ್ತಮ ಆಡಳಿತ ಮತ್ತು ನಮ್ಮ ರಾಜ್ಯದ ನಿರಂತರ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಉದ್ದೇಶದಿಂದ ಇಂದು ನನ್ನ ನಿವಾಸದಲ್ಲಿ ಮುಖ್ಯಮಂತ್ರಿಗಳಿಗೆ ಉಪಾಹಾರ ಕೂಟವನ್ನು ಆಯೋಜಿಸಿದ್ದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ನನ್ನ ನಿವಾಸಕ್ಕೆ ಬಂದ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಕರ್ನಾಟಕದ ಅಭಿವೃದ್ಧಿ ಮತ್ತು ನಮ್ಮ ಜನರ ಪ್ರಗತಿಗೆ ನಾವು ಬದ್ಧರಾಗಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ವಿರೋಧ ಪಕ್ಷಗಳ ಟೀಕೆ
ಇನ್ನು ಈ ಬೆಳವಣಿಗೆಗೆ ರಾಜ್ಯದ ವಿರೋಧ ಪಕ್ಷಗಳು ಟೀಕೆ ಮಾಡಿವೆ. ಜೆಡಿಎಸ್ ಪಕ್ಷವು ಡಮ್ಮಿ ಸಿಎಂ
ಸಿದ್ದರಾಮಯ್ಯ ; ಕುರ್ಚಿ ಆಸೆಗೆ ಡಿ.ಕೆ ಶಿವಕುಮಾರ್ ಜೊತೆ ಸೆಟಲ್‌ಮೆಂಟ್‌ಗೆ ಬಂದ ಸಿದ್ಧಹಸ್ತ !
ಸಿದ್ದರಾಮಯ್ಯ : ಶಿವಕುಮಾರ್ ಈಗ್ಲೂ ನೀನೇ ಸೂಪರ್ ಸಿಎಂ ಕಣಯ್ಯ. ನೀನೆಷ್ಟೆ ಕಮಿಷನ್ ತಗೊಂಡ್ರು ನಾನ್ಯಾವತ್ತಾದ್ರೂ ಅಡ್ಡಿ ಮಾಡಿದಿನಾ ?
ಡಿಕೆಶಿ: ಅದು ಹಾಗಲ್ಲ ಸರ್. ನೀವ್ ಕೊಟ್ಟ ಮಾತು..
ಸಿದ್ದರಾಮಯ್ಯ : ಏಯ್ ಕೇಳಪ್ಪ ಇಲ್ಲಿ. ಸಂಪುಟದಲ್ಲಿ ನೀನು ಯಾರ್ ಹೇಳ್ತೀಯೋ ಅವ್ರೆ ಮಂತ್ರಿ. ಈಗ ನಡೀ.. ಪ್ರೆಸ್ ಮುಂದೆ ನಾವಿಬ್ಬರು ಅಣ್ತಮ್ಮ ಅಂತ ಹೇಳಿದ್ಯಲ್ಲ. ಹಂಗೇ ನಡ್ಕೋ.
ಇಷ್ಟೇ ಇವರಿಬ್ಬರ ನಡುವಿನ Break _ Fast ಮೀಟಿಂಗ್ ಕಥೆ ಎಂದು ಟ್ವೀಟ್ ಮಾಡಿದೆ.
ಬಿಜೆಪಿ ಟೀಕೆ
ಯುವಕರಿಗೆ ಉದ್ಯೋಗವಿಲ್ಲ, 2 ವರ್ಷದಿಂದ ನೇಮಕಾತಿ ಇಲ್ಲ, ವಯೋಮಿತಿ ಹೆಚ್ಚಳವಿಲ್ಲ, ಕೊಟ್ಟ ಭರವಸೆ ಈಡೇರಿಸಿಲ್ಲ, 2.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಿಲ್ಲ, ನಿರುದ್ಯೋಗ ನಿಯಂತ್ರಣಕ್ಕೆ ಕ್ರಮವಿಲ್ಲ ಸರ್ಕಾರದಲ್ಲಿ ಕುರ್ಚಿ ಕಚ್ಚಾಟ ನಿಂತಿಲ್ಲ ಬ್ರೇಕ್ ಫಾಸ್ಟ್ ಮೀಟಿಂಗ್ ನಿಂತಿಲ್ಲ ಎಂದು ಬಿಜೆಪಿ ದೂರಿದೆ.
2.5 ವರ್ಷಗಳಲ್ಲಿ ಯುವಕರ ಕೈಗೆ ಚಿಪ್ಪು ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಸಿದ್ದರಾಮಯ್ಯ ನವರೇ, ಇನ್ನಾದರೂ ಯುವಜನರ ನೋವು ಆಲಿಸಿ, ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ ಎಂದು ಬಿಜೆಪಿ ಹೇಳಿದೆ.












Click it and Unblock the Notifications