BPL ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ₹2.50 ಲಕ್ಷದವರೆಗೆ ಆದಾಯವಿದ್ದರೂ BPL ಸೌಲಭ್ಯ: ಸರ್ಕಾರದ ಮೇಲೆ ಒತ್ತಡ
ಅರಸೀಕೆರೆ: ಬಿಪಿಎಲ್ ಪಡಿತರ ಚೀಟಿದಾರರಿಗೆ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಸಿಹಿಸುದ್ದಿ ನೀಡಿದ್ದಾರೆ. ವಾರ್ಷಿಕ ₹2.50 ಲಕ್ಷದವರೆಗೆ ಆದಾಯ ಹೊಂದಿರುವ ಕುಟುಂಬಗಳನ್ನು ಬಿಪಿಎಲ್ ವ್ಯಾಪ್ತಿಯಲ್ಲೇ ಉಳಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅರಸೀಕೆರೆಯ ವೆಂಕಟೇಶ್ವರ ಕಲಾ ಭವನದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಬಡ ಕುಟುಂಬಗಳಿಗೆ ಯಾವುದೇ ಅನ್ಯಾಯವಾಗದಂತೆ ಬಿಪಿಎಲ್ ಮಾನದಂಡವನ್ನು ಪರಿಷ್ಕರಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಕುಟುಂಬದ ಒಬ್ಬ ಸದಸ್ಯ ₹1.20 ಲಕ್ಷ ಆದಾಯ ಹೊಂದಿದ್ದಾನೆ ಎಂಬ ಕಾರಣಕ್ಕೆ ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್‌ಗೆ ಪರಿವರ್ತಿಸುವ ಬದಲು, ಆದಾಯ ಹೊಂದಿರುವ ವ್ಯಕ್ತಿಯನ್ನು ಮಾತ್ರ ಬಿಪಿಎಲ್ ಕಾರ್ಡ್‌ನಿಂದ ಹೊರಗಿಟ್ಟು, ಉಳಿದ ಅರ್ಹ ಸದಸ್ಯರಿಗೆ ಬಿಪಿಎಲ್ ಸೌಲಭ್ಯ ಮುಂದುವರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಶಿವಲಿಂಗೇಗೌಡ ಹೇಳಿದರು.
BPL Card: ₹2.50 ಲಕ್ಷದವರೆಗೆ ಆದಾಯ
ಕುಟುಂಬದ ಕಾರ್ಡ್‌ದಾರರು ₹2.50 ಲಕ್ಷದವರೆಗೆ ಆದಾಯ ಹೊಂದಿರುವವರೆಗೆ ಅವರನ್ನು ಬಿಪಿಎಲ್ ವ್ಯಾಪ್ತಿಯಲ್ಲೇ ಉಳಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತೇವೆ. ಈ ನಿಟ್ಟಿನಲ್ಲಿ ಒತ್ತಡ ತರಲಾಗುವುದು ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದರು.
ಬಡವರಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸಬೇಕು ಎಂದ ಅವರು, ಗ್ಯಾರಂಟಿ ಯೋಜನೆಗಳಿಂದ ದೇಶ ಹಾಳಾಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಕಿವಿಗೊಡಬಾರದು. ಅರ್ಹ ಬಡ ಕುಟುಂಬಗಳಿಗೆ ಸಿಗಬೇಕಾದ ಪಡಿತರ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಅನ್ಯಾಯವಾಗಿ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಅರಸೀಕೆರೆಯಲ್ಲೇ ಜಿಲ್ಲಾ ನ್ಯಾಯಾಲಯ
ಹಾಸನ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಅರಸೀಕೆರೆ, ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮಲು ಅಗತ್ಯವಾದ ಎಲ್ಲ ಅರ್ಹತೆಗಳನ್ನು ಹೊಂದಿದೆ. ಇದೀಗ ಸುಸಜ್ಜಿತ ನ್ಯಾಯಾಲಯ ಸಂಕೀರ್ಣವೂ ನಿರ್ಮಾಣವಾಗಿರುವುದರಿಂದ ಅರಸೀಕೆರೆಯಲ್ಲೇ ಜಿಲ್ಲಾ ನ್ಯಾಯಾಲಯವನ್ನು ಮಂಜೂರು ಮಾಡಬೇಕು ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಲಯ ಸ್ಥಾಪನೆ ತಾಲೂಕಿನ ಜನತೆಯ ಬಹುದಿನದ ಬೇಡಿಕೆಯಾಗಿದೆ. ಜಿಲ್ಲಾ ನ್ಯಾಯಾಲಯಕ್ಕೆ ಅಗತ್ಯವಿರುವ ಹೆಚ್ಚುವರಿ ಮೂಲಸೌಕರ್ಯ ಮತ್ತು ಅನುದಾನವನ್ನು ಸರ್ಕಾರದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಅರಸೀಕೆರೆಯಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರ
ಅರಸೀಕೆರೆ ತಾಲೂಕಿನ ಅಭಿವೃದ್ಧಿ ಕುರಿತು ವಿವರಿಸಿದ ಸಚಿವರು, ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು. ಸುಮಾರು 16 ಕೆರೆಗಳಿಗೆ ನೀರು ಒದಗಿಸಲಾಗಿದ್ದು, ಕಣಕಟ್ಟೆ ಹೋಬಳಿಯ 10ರಿಂದ 12 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಗಂಡಸಿ ಹೋಬಳಿಯ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಸುಮಾರು ₹200 ಕೋಟಿ ಅಂದಾಜಿನ ಯೋಜನೆ ಮಂಜೂರಾಗಿದೆ. ಬಾಣಾವಾರ ಹೋಬಳಿಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಒದಗಿಸುವ ಕಾರ್ಯವೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅರಸೀಕೆರೆ ನಗರ ಸೇರಿದಂತೆ ತಾಲೂಕಿನ 549 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ ಅನುಷ್ಠಾನಗೊಂಡಿದ್ದು, ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ನಗರದಲ್ಲಿ ವಿವಿಧ ಸಮುದಾಯಗಳಿಗೆ ಸುಮಾರು 50 ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಮಹಿಳೆಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಲು ಗಾರ್ಮೆಂಟ್ಸ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಸುಮಾರು 10ರಿಂದ 15 ಸಾವಿರ ಮಹಿಳೆಯರು ಸ್ಥಳೀಯವಾಗಿಯೇ ಉದ್ಯೋಗ ಪಡೆದಿದ್ದಾರೆ ಎಂದು ಹೇಳಿದರು.


Click it and Unblock the Notifications
