Government Schools: ಹೊಂಗಸಂದ್ರ ಸರ್ಕಾರಿ ಶಾಲೆಗೆ ಹೈಟೆಕ್ ರೂಪ, ಉದ್ಘಾಟನೆ ನೆರವೇರಿಸಿದ ಶಾಸಕ ಸತೀಶ್ ರೆಡ್ಡಿ
ಸರ್ಕಾರಿ ಶಾಲೆಗಳಲ್ಲಿ ಓದಿದವರು ಸಮಾಜದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದು, ಸರ್ಕಾರಿ ಶಾಲೆಗಳು ಸಮಾಜಕ್ಕೆ ಮಾದರಿಯಾಗಿವೆ. ಅದರಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ವಿದ್ಯಾ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು. ಹೊಂಗಸಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ಶಿಕ್ಷಣ ಪದ್ಧತಿ ಮತ್ತು ಕರ್ನಾಟಕದ ಸರ್ಕಾರಿ ಶಾಲೆಗಳ ಗುಣಮಟ್ಟದ ವಿಚಾರವು ದೇಶಾದ್ಯಂತ ಹೆಸರು ಮಾಡಿದೆ. ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಲಾಗುತ್ತಿದ್ದು, ಹೀಗಾಗಿ ಹೈಟೆಕ್ ಕಟ್ಟಡಗಳ ನಿರ್ಮಾಣ ಕಾರ್ಯ ಕೂಡ ಅದ್ಧೂರಿಯಾಗಿ ಸಾಗಿದೆ. ಇದೇ ರೀತಿಯಾಗಿ ಈಗ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಂಗಸಂದ್ರ ಸರ್ಕಾರಿ ಶಾಲೆಯನ್ನು ಹೈಟೆಕ್ ಮಾಡಲಾಗಿದ್ದು, ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಹೊಸ ಕಟ್ಟಡವನ್ನು ಉದ್ಘಾಟಿಸಿದರು.

ಶಾಲಾ ಮಕ್ಕಳ ಜೊತೆಗೆ ಚರ್ಚೆ
ಇದೇ ವೇಳೆ ಶಾಸಕರಾದ ಸತೀಶ್ ರೆಡ್ಡಿ ಅವರು ಶಾಲೆಯ ಪುಟಾಣಿಗಳ ಜೊತೆಗೆ ಚರ್ಚೆ ನಡೆಸಿದರು. ಅಲ್ಲದೆ ಶಾಲೆಯಲ್ಲಿ ಲಭ್ಯವಿರುವ ಎಲ್ಲಾ ಆಧುನಿಕ ಸೌಲಭ್ಯ ಬಳಸಿಕೊಂಡು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಲಹೆ ನೀಡಿದರು. ಹಾಗೇ ಬೊಮ್ಮನಹಳ್ಳಿ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಆಧುನಿಕ ರೂಪ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಕ್ಷೇತ್ರದ ಸರ್ಕಾರಿ ವಿದ್ಯಾಸಂಸ್ಥೆಗಳು ರಾಜ್ಯದಲ್ಲೇ ಮಾದರಿ ಆಗುವಂತೆ ನಿರ್ಮಾಣ ಮಾಡಲಾಗುವುದು ಎಂದರು.
ಕಾರ್ಮಿಕರ ಕುಟುಂಬಗಳಿಗೆ ಅನುಕೂಲ
ಹಾಗೇ ಹೊಂಗಸಂದ್ರ ಪ್ರದೇಶದಲ್ಲಿ ಗಾರ್ಮೆಂಟ್ಸ್ ಸೇರಿದಂತೆ ಹಲವು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ನೆಲೆಸಿದ್ದು, ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಸೌಲಭ್ಯ ಕಲ್ಪಿಸಿರುವುದು ಸಾಕಷ್ಟು ನೆರವು ನೀಡಲಿದೆ. ಹೀಗಾಗಿ ಸ್ಥಳೀಯರಿಗೆ ಕೂಡ ಹೊಂಗಸಂದ್ರ ಸರ್ಕಾರಿ ಶಾಲೆ ಅಭಿವೃದ್ಧಿ ಜೊತೆಗೆ ಹೈಟೆಕ್ ಸ್ಪರ್ಶ ನೀಡಿರುವುದು ಸಾಕಷ್ಟು ಸಂತಸ ತಂದಿದೆ. ಹೊಂಗಸಂದ್ರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆಯಲ್ಲಿ ಸ್ಥಳೀಯ ಮುಖಂಡರಾದ ಬಾಬು ರೆಡ್ಡಿ ಅವರು ಸೇರಿ ಹಲವರು ಸ್ಥಳೀಯ ಮುಖಂಡರು ಭಾವಹಿಸಿದ್ದರು.
ಒಟ್ನಲ್ಲಿ ಕರ್ನಾಟಕ ರಾಜ್ಯವು ಶೈಕ್ಷಣಿಕ ಗುಣಮಟ್ಟದಲ್ಲಿ ಉನ್ನತ ಸ್ಥಾನಮಾನ ಪಡೆದಿದ್ದು, ಶೈಕ್ಷಣಿಕ ಗುಣಮಟ್ಟದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ 1 ಆಗಿದೆ. ಹೀಗಾಗಿಯೇ ಕರ್ನಾಟಕದಲ್ಲಿ ಶಿಕ್ಷಣವನ್ನ ಪಡೆಯಲು ಇಡೀ ಭಾರತದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ನಮ್ಮ ಕರ್ನಾಟಕಕ್ಕೆ ಬರುತ್ತಾರೆ. ಹೀಗಿದ್ದಾಗ ಸರ್ಕಾರಿ ಶಾಲೆಗಳ ಉನ್ನತೀಕರಣ ಇದೀಗ ಗಮನವನ್ನ ಸೆಳೆದಿದೆ.












Click it and Unblock the Notifications