ಯಾವಾಗ ಮೀಸಲಾತಿ ಕೊಡಬೇಕು ಎಂಬುದನ್ನು ಆಯೋಗ ನಿರ್ಧಾರ ಮಾಡುತ್ತದೆ
ಬೆಂಗಳೂರು, ಫೆ. 22: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ರಾಜಕೀಯ ಬಣ್ಣ ಪಡೆದುಕೊಂಡಿದೆ. ಜಂಟಿ ಸುದ್ದಿಗೋಷ್ಠಿ ನಡೆಸಿರುವ ಬಿಜೆಪಿ ಸರ್ಕಾರದ ಇಬ್ಬರು ಸಚಿವರು ಹೋರಾಟವನ್ನು ಪ್ರಶ್ನೆ ಮಾಡಿದ್ದಾರೆ. ಮೀಸಲಾತಿಗಾಗಿ ಪಂಚಮಸಾಲಿ ಸಮಾವೇಶ ಕಾಂಗ್ರೆಸ್ ಸಮಾವೇಶದಂತೆ ಇತ್ತು. ಜೊತೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ಬಿ ಟೀಂ ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿ.ಸಿ. ಪಾಟೀಲ್ ಅವರು ವಿಧಾನಸೌಧದಲ್ಲಿ ಆರೋಪಿಸಿದ್ದರು.
ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದು, ಹಿಂದುಳಿದ ವರ್ಗಗಳ ಆಯೋಗ ಅರೆ ನ್ಯಾಯಿಕ ಸಂಸ್ಥೆಯಾಗಿದ್ದು, ಆಯೋಗವೂ ತನ್ನದೇ ಆದ ರೀತಿಯಲ್ಲಿ ಅಧ್ಯಯನ ನಡೆಸಿ ಕ್ರಮಬದ್ಧವಾಗಿ ವರದಿ ಕೊಡಲಿದೆ ಎಂದಿದ್ದಾರೆ. ಮೀಸಲಾತಿಯನ್ನು ಯಾವಾಗ ಕೊಡಬೇಕು ಎಂಬುದನ್ನು ಆಯೋಗವೇ ನಿರ್ಧಾರ ಮಾಡುತ್ತದೆ. ಕಾನೂನು ಮತ್ತು ಸಂವಿಧಾನಬದ್ಧವಾಗಿ ಮೀಸಲಾತಿ ಕೊಡಲು ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.
ನಿನ್ನೆ ಅರಮನೆ ಮೈದಾನದಲ್ಲಿ 2ಎ ಮೀಸಲಾತಿಗಾಗಿ ನಡೆದ ಸಮಾವೇಶದ ಬಳಿಕ ಇದೀಗ ಫ್ರೀಡಂಪಾರ್ಕ್‌ನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮಾರ್ಚ್ 4ರ ವರೆಗೆ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ಅವರು ಸ್ಷಷ್ಟಪಡಿಸಿದ್ದಾರೆ.