ಬೋಗಿಬಿಲ್ ಸೇತುವೆ ಉದ್ಘಾಟನೆ : ಮೋದಿ ವಿರುದ್ಧ ಗೌಡರ ಗುಡುಗು
ಬೆಂಗಳೂರು, ಡಿಸೆಂಬರ್ 25 : 'ತಾನು ಅಡಿಗಲ್ಲು ಹಾಕಿದ್ದ ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಾಧಾನಗೊಂಡಿದ್ದಾರೆ. ಬೋಗಿಬಿಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ.
ಬೆಂಗಳೂರಿನ ಜೆ.ಪಿ.ಭವನದಲ್ಲಿ ಮಂಗಳವಾರ ಮಾತನಾಡಿದ ಎಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 'ಯಾರೊಬ್ಬರು ಅಸ್ಸಾಂನಲ್ಲಿ ನಡೆಯುತ್ತಿರುವ ಬೋಗಿಬಿಲ್ ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ' ಎಂದರು.

'ನಾವು ಮಾಡಿದ ಕೆಲಸವನ್ನು ಯಾರು ನೆನಪು ಇಟ್ಟುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ದೇವೇಗೌಡರು ಅದು ದೊಡ್ಡ ವಿಷಯವಲ್ಲ ಬಿಡಿ. ಕಾಶ್ಮೀರ ರೈಲ್ವೆ, ದೆಹಲಿ ಮೆಟ್ರೋ ಯೋಜನೆಗಳನ್ನು ನಾನೇ ಮಂಜೂರು ಮಾಡಿದ್ದೆ. ನನ್ನ ಕಾಲದಲ್ಲಿಯೇ ಅದಕ್ಕೆ ಹಣ ಬಿಡುಗಡೆ ಮಾಡಿ, ಅಡಿಗಲ್ಲು ಹಾಕಿಸಿದ್ದೆ. ಈಗ ಅದೆಲ್ಲವನ್ನು ಮರೆತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.
'ಹಾಸನ-ಮೈಸೂರು ಯೋಜನೆಯನ್ನು 13 ತಿಂಗಳಿನಲ್ಲಿ ಪೂರ್ಣಗೊಳಿಸಿದೆ. ನಿಗದಿತ ಸಮಯದಲ್ಲಿ ಸೇತುವೆಯನ್ನು ಪೂರ್ಣಗೊಳಿಸಿದ್ದೇನೆ. ಅವುಗಳಲ್ಲಿ ಅಗನವಾಡಿ ಸೇತುವೆ ಸಹ ಒಂದು. ಮೋದಿ ಅವರು ಆ ಸೇತುವೆಯನ್ನು ನೋಡಿಕೊಂಡು ಬರಲಿ' ಎಂದು ದೇವೇಗೌಡರು ವ್ಯಂಗ್ಯವಾಡಿದರು.












Click it and Unblock the Notifications