ಕಾಂಗ್ರೆಸ್‌ನ STD ಬೂತ್ ಟೀಕೆ, ಖಡಕ್ ತಿರುಗೇಟು ಕೊಟ್ಟ ಸಂತೋಷ್!
ಬೆಂಗಳೂರು, ಮೇ 14; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸ್ಪಷ್ಟ ಬಹುಮತ ಪಡೆದಿರುವ ಪಕ್ಷ ಸರ್ಕಾರ ರಚನೆ ಮಾಡಲಿದೆ.
ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ಯುದ್ಧ ಆರಂಭವಾಗಿದೆ. ಕಾಂಗ್ರೆಸ್ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಟೀಕೆ ಮಾಡಿ ಟ್ವೀಟ್ ಮಾಡುತ್ತಿದೆ.

ಮೇ 10ರ ಬುಧವಾರ ಮತದಾನ ಮುಗಿದ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದವು. ಈ ಕುರಿತು ಟ್ವೀಟ್ ಮಾಡಿದ್ದ ಬಿ. ಎಲ್. ಸಂತೋಷ್, "ಈ ಬಾರಿ ನಾವು 31,000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ" ಎಂದು ಹೇಳಿದ್ದರು. ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಇದನ್ನು ಮುಂದಿಟ್ಟುಕೊಂಡು ಬಿ. ಎಲ್. ಸಂತೋಷ್ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಟ್ವೀಟ್; ಶನಿವಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ಹೀನಾಯ ಸೋಲು ಕಂಡಿತ್ತು. ರಾಜ್ಯದ ಆಡಳಿತ ಪಕ್ಷವಾಗಿದ್ದ ಬಿಜೆಪಿ ಪಡೆದಿರುವುದು ಕೇವಲ 66 ಸೀಟು. ಕಾಂಗ್ರೆಸ್ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿ ಸಂತೋಷ ಟ್ಯಾಗ್ ಮಾಡಿತ್ತು.

"@blsanthosh ಅವರೇ, ಸೌಖ್ಯವೇ, ಸಂತೋಷವೇ?! ಅಂದಹಾಗೆ ತಾವು ಹೇಳಿದ 31,000 ಬೂತ್‌ಗಳು ಯಾವವು? STD ಬೂತ್‌ಗಳಾ?" ಎಂದು ಪ್ರಶ್ನೆ ಮಾಡಿತ್ತು.
ಭಾನುವಾರ ಈ ಟ್ವೀಟ್‌ಗೆ ಬಿ. ಎಲ್. ಸಂತೋಷ್ ತಿರುಗೇಟು ನೀಡಿದ್ದಾರೆ. "ಕಲಿಯುತ್ತೇವೆ ಸೋಲಿನಿಂದ , ಹಿನ್ನಡೆಗಳಿಂದ , ತಪ್ಪುಗಳಿಂದ ಉತ್ತರಿಸುತ್ತೇವೆ. ಟೀಕೆಗಳಿಗೆ, ಕುಹಕಗಳಿಗೆ , ಒಡಕು ಮಾತುಗಳಿಗೆ ನಮ್ಮ ಗತಿಶೀಲತೆಯಿಂದ ನಾವು ಇರಲಿಕ್ಕೇ ಬಂದವರು ...ಗೆಲ್ಲಲಿಕ್ಕೇ ಬಂದವರು...ನಮಗೆ ಸೋಲು ಕ್ಷಣಿಕ...ಮುನ್ನಡೆ ಸತತ...ಇನ್ನು 12 ತಿಂಗಳಿನೊಳಗೆ 31000ಕ್ಕೆ ಮತ್ತೆ 10000 ಸೇರಿಸಿ 41000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ" ಎಂದು ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾದ ಬಳಿಕ ಟ್ವೀಟ್ ಮಾಡಿದ್ದ ಬಿ. ಎಲ್. ಸಂತೋಷ್, "2018ರಲ್ಲಿ ಕರ್ನಾಟಕದಲ್ಲಿ ಬಿಜೆಪಿ 14 ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನೆಡೆಯೊಂದಿಗೆ 24,000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಈ ಬಾರಿ ನಾವು 31,000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ನೀವು ನೀಡಿರುವ ಸಂಖ್ಯೆಗಳು ಕೇವಲ ನಿಮ್ಮ ಊಹೆಯಷ್ಟೇ" ಎಂದು ಹೇಳಿದ್ದರು.
ಕಾಂಗ್ರೆಸ್ ಶಾಸಕಾಂಗದ ಪಕ್ಷದ ಸಭೆ; ಕರ್ನಾಟಕ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ 66, ಜೆಡಿಎಸ್ 19 ಮತ್ತು ಇತರರು 4 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಶನಿವಾರ ಸಂಜೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೊಸ ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕಾರ ಮಾಡುವ ತನಕ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿ ಭಾನುವಾರ ಸಂಜೆ 5.30ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ದೆಹಲಿಯಿಂದ ಆಗಮಿಸುವ ವೀಕ್ಷಕರ ಸಮ್ಮುಖದಲ್ಲಿ ಪಕ್ಷ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದೆ.
ಶನಿವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಈಗಾಗಲೇ ನಾವು 5 ಗ್ಯಾರಂಟಿಗಳನ್ನು ನೀಡಿದ್ದೇವೆ ಅದನ್ನು ಮೊದಲ ಸಂಪುಟ ಸಭೆಯಲ್ಲೇ ಆದೇಶ ಹೊರಡಿಸಿ ಜಾರಿಗೆ ಕೊಡುತ್ತೇವೆ. ನರೇಂದ್ರ ಮೋದಿ ಅವರು ಈ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಸಾಲ ಮಾಡಿ ದೇಶವನ್ನು ದಿವಾಳಿ ಮಾಡಿರುವುದು ಮೋದಿ ಅವರು. ರಾಜ್ಯವನ್ನು ದಿವಾಳಿ ಮಾಡಿರುವುದು ಕೂಡಾ ಬಿಜೆಪಿಯವರು" ಎಂದು ಬಿಜೆಪಿ ಟೀಕಿಸಿದ್ದಾರೆ.












Click it and Unblock the Notifications