ಅಮಿತ್ ಶಾ ಭೇಟಿ ಬಳಿಕ ಮಹತ್ವದ ಸಭೆ ನಡೆಸುತ್ತಿರುವ ಬಿ. ಎಲ್. ಸಂತೋಷ್
ಬೆಂಗಳೂರು, ಏಪ್ರಿಲ್ 22; ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣಗೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡು ಪ್ರಚಾರದ ಭರಾಟೆ ಹೆಚ್ಚಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಪ್ರಚಾರದ ರೂಪುರೇಷೆ ಅಂತಿಮಗೊಳಿಸಲು ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಶನಿವಾರ ನಡೆಯುತ್ತಿದೆ.

ಚುನಾವಣಾ ನಿರ್ವಹಣಾ ಸಮಿತಿಯ 32 ವಿಭಾಗಗಳ ಮುಖಂಡರು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಅಮಿತ್ ಶಾ ಭೇಟಿ ಬಳಿಕ ಸಭೆ; ಶುಕ್ರವಾರ ಸಂಜೆ ಅಮಿತ್ ಶಾ ಬೆಂಗಳೂರು ನಗರಕ್ಕೆ ಬಂದಿದ್ದರು. ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮುಂತಾದ ನಾಯಕರು ಸಭೆ ನಡೆಸಿದ್ದರು. ಈ ಸಭೆಯ ಬಳಿಕ ಬಿ. ಎಲ್. ಸಂತೋಷ್ ಶನಿವಾರ ನಾಯಕರ ಜೊತೆ ಸಭೆ ನಡೆಸುತ್ತಿದ್ದಾರೆ.

ಏಪ್ರಿಲ್ 23ರ ಭಾನುವಾರದಿಂದಲೇ ಬಿಜೆಪಿಯ ವಿವಿಧ ನಾಯಕರ ರಾಜ್ಯ ಪ್ರವಾಸ ಆರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಲಿದ್ದಾರೆ. ಬಸವರಾಜ ಬೊಮ್ಮಾಯಿ ಒಂದೇ ದಿನ 11 ಕ್ಷೇತ್ರಗಳಲ್ಲಿ ರೋಡ್-ಶೋ ಮತ್ತು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ಮೂಲಕ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಇನ್ನೂ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, "ಏಪ್ರಿಲ್ 23ರಿಂದ ರಾಜ್ಯಾದ್ಯಂತ ಪ್ರವಾಸ ಆರಂಭ ಮಾಡುತ್ತೇನೆ. ಗೃಹ ಸಚಿವ ಅಮಿತ್ ಶಾ ಜೊತೆ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಅವರು ಅನೇಕ ಸಲಹೆ ನೀಡಿದ್ದಾರೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಪ್ರಚಾರಕ್ಕೆ ಬರುತ್ತಾರೆ" ಎಂದರು
ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಮೂಲಕ ಗೆದ್ದು ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ. ಆದ್ದರಿಂದ ವಿವಿಧ ಚುನಾವಣಾ ತಂತ್ರಗಳನ್ನು ಹಣೆಯಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ನಾಯಕರ ಪ್ರಚಾರದ ರೂಪುರೇಷೆ ಅಂತಿಮಗೊಳಿಸಲಾಗುತ್ತಿದೆ. ಏಪ್ರಿಲ್ 25ರ ಬಳಿಕ ರಾಜ್ಯದಲ್ಲಿ ನರೇಂದ್ರ ಮೋದಿ ಸಮಾವೇಶಗಳು ನಡೆಯಲಿವೆ.
ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು ಬಿಜೆಪಿಯನ್ನು ತೊರೆದಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಪ್ರಯತ್ನ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಲಿಂಗಾಯತ ಸಮುದಾಯದ ಮತಗಳನ್ನು ಸಳೆಯಲು ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಡಿ. ಕೆ. ಶಿವಕುಮಾರ್ ಅವರೇ ಲಿಂಗಾಯತ ಡ್ಯಾಮಿನ ಬಗ್ಗೆ ಮಾತನಾಡಿದ್ದೀರಿ. ಇದು ಎಷ್ಟು ಗಟ್ಟಿ ಇದೆ ಎಂದು ಅರಿವು ನಿಮಗಿಲ್ಲ. ನೀವು ಅದನ್ನು ಒಡೆಯುವ ಭ್ರಮೆಯಲ್ಲಿದ್ದೀರಿ. 2018ರಲ್ಲಿ ನಿಮ್ಮ ಸರ್ಕಾರ ಇದ್ದು ಇದನ್ನು ಒಡೆಯಲು ಸಾಧ್ಯವಾಗಿಲ್ಲ. ಈಗೇನು ಮಾಡಲು ಸಾಧ್ಯ. ಮೊದಲು ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ, ನಿಮ್ಮ ಹೇಳಿಕೆನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮೇ 13ಕ್ಕೆ ಯಾರ್ ಯಾರ ಡ್ಯಾಮ್ ನಲ್ಲಿ ಎಷ್ಟು ನೀರಿದೆ ಅಂತ ಗೊತ್ತಾಗುತ್ತದೆ. ನಿಮ್ಮ ಹೇಳಿಕೆಯಿಂದ ಲಿಂಗಾಯತ ಧರ್ಮವನ್ನು ಒಡೆಯುವ ಮತ್ತೊಂದು ಹುನ್ನಾರ ಬಯಲಾಗಿದೆ' ಎಂದು ಟ್ವೀಟ್ ಮಾಡಿದ್ದರು.
ಅಲ್ಲದೇ ಮತ್ತೊಂದು ಟ್ವೀಟ್‌ನಲ್ಲಿ, 'ಜಗದೀಶ್ ಶೆಟ್ಟರ್‌ರವರು ನಮ್ಮ ಪಕ್ಷದಿಂದ ಹೊರ ಹೋಗಿರಬಹುದು, ಆದರೇ ಅಲ್ಲಿನ ಕಾರ್ಯಕರ್ತರು ಅವರೊಂದಿಗೆ ಹೋಗಿಲ್ಲ, ಹಾಗಾಗಿ ನಾವು ಅಲ್ಲಿ ನಮ್ಮ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications