BK Hariprasad: ನಾನು ತುಳಿದಷ್ಟು ಚೆಂಡಿನಂತೆ ಮೇಲೆ ಪುಟಿಯುತ್ತೇನೆ: ಸಿಎಂಗೆ ಸೆಡ್ಡು ಹೊಡೆದ್ರಾ? ಬಿಕೆಎಚ್
ಹುಬ್ಬಳ್ಳಿ, ಡಿಸೆಂಬರ್ 10: ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು, ನಾನು ತುಳಿದಷ್ಟು ಮೇಲೆ ಚೆಂಡಿನಂತೆ ಪುಟಿಯುತ್ತೇನೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿನ ಈಡಿಗ ಸಮಾವೇಶದ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಈಡಿಗ ಸಂಘದಲ್ಲಿ ಬಹಳ ದೊಡ್ಡ ದೊಡ್ಡ ನಾಯಕರು ಸಂಘ ಕಟ್ಟಿದ್ದಾರೆ. ಸರ್ಕಾರದ ಗಮನ ಸೆಳೆಯಲು, ಸಮಾಜದ ಹಿತ ಕಾಪಾಡಲು ಸಂಘ ಇತ್ತು. ಆದರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

50 ಲಕ್ಷ ಜನ ಸಂಖ್ಯೆ ಇರುವ ಈಡಿಗ ಸಮಾಜದಲ್ಲಿ ಕೇವಲ ಹನ್ನೆರಡು ಸಾವಿರ ಸದಸ್ಯರು ಇರುವ ಸಂಘದಿಂದ ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇದೊಂದು ರಾಜಕೀಯ ಕುತಂತ್ರದಿಂದ ಮಾಡಿದ ಸಮಾವೇಶ ಆಗಿದೆ. ಕುತಂತ್ರ ಅಂತಲೇ ಹೇಳುತ್ತೇನೆ ನೀವೆನಾದರೂ ಭಾವಿಸಿಕೊಳ್ಳಿ ಎಂದು ಹೇಳಿದರು.
ಸಮಾಜಕ್ಕೆ ಏನು ಮಾಡಿದ್ದಾರೆಂದು ಹೇಳಬೇಕು
ಬಿಲ್ಲವ ಸಮುದಾಯಕ್ಕೆ ಜಾಗ ಕೊಟ್ಟಿದ್ರು. ಅದನ್ನು ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಗೆ ಕೊಟ್ಟಿದ್ದಾರೆ.
ಗುರುನಾರಾಯಣ ಅಧ್ಯಯನ ಪೀಠಕ್ಕೆ ಹಣ ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನು ಮಾಡಿದಾರೆ ಎಂಬುದನ್ನು ತಿಳಿಸಬೇಕು. ರಾಜಕೀಯ ಪ್ರೇರಿತ ಈಡಿಗ ಸಮಾವೇಶಕ್ಕೆ ನಾನು ಹೋಗುವುದಿಲ್ಲ. ಅಲ್ಲದೇ ಸಮಾಜ ಇಬ್ಬರು ಸ್ವಾಮೀಜಿಗೆ ಸಮಾವೇಶಕ್ಕೆ ಆಹ್ವಾನಿಸಿಲ್ಲ ಎಂದರು.

ಮುಖ್ಯಮಂತ್ರಿಗಳ, ಡಿಸಿಎಂ ಅವರು ಪಾಲ್ಗೊಳ್ಳುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸಿದರು. ಅಲ್ಲದೇ ಬಿಜೆಪಿಯವರ ವಿರುದ್ಧ ಹರಿಹಾಯ್ದ ಅವರು, ಆಪರೇಷನ್ ಕಮಲದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದಾರೆ. ಸದ್ಯ ಬೆಳಗಾವಿಯಲ್ಲಿ ಸದನ ಚೆನ್ನಾಗಿ ನಡೆಯುತ್ತಿತ್ತು, ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಆದಷ್ಟು ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಕೆಎಚ್-ಸಿಎಂ ಮಧ್ಯೆ ಶೀತಲ ಸಮರ
ಸಿಎಂ ಸಿದ್ದರಾಮಯ್ಯ ಮತ್ತು ಬಿಕೆ ಹರಿಪ್ರಸಾದ್ ಮಧ್ಯೆ ಶೀತಲ ಸಮರ ಮುಂದುವರಿದಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಕೆ ಹರಿಪ್ರಸಾದ್ ಅವರಿಗೆ ಸ್ಥಾನ ನೀಡಿದ ಸಿಎಂ ಸಿದ್ದರಾಮಯ್ಯ ಮತ್ತೊಬ್ಬ ಈಡಿಗ ಸಮುದಾಯದ ನಾಯಕ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡಿ ಸೆಡ್ಡು ಹೊಡೆದಿದ್ದರು.
ಇತ್ತ ಈಡಿಗ ಸಮಾವೇಶ ಆಯೋಜಿಸಿ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಅವರನ್ನು ಆಹ್ವಾನಿಸಿ ಮಧು ಬಂಗಾರಪ್ಪ ಸಹ ಬಿಕೆ ಎಚ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದೆಲ್ಲ ಗಮನಿಸಿರುವ ಬಿಕೆ ಹರಿಪ್ರಸಾದ್ ಅವರು ಇದು ಕುತಂತ್ರದ ಸಮಾವೇಶ. ನಾನು ಹೋಗುವುದಿಲ್ಲ. ನನ್ನನ್ನು ತುಳಿದಷ್ಟು ನಾನು ಚೆಂಡಿನಂತೆ ಮತ್ತೆ ಮೇಲೆ ಪುಟಿಯುತ್ತೇನೆ ಎಂದು ಮಾರ್ಮಿಕವಾಗಿ ಪ್ರತ್ಯುತ್ತರ ನೀಡಿದ್ದಾರೆ.












Click it and Unblock the Notifications