ಶಿವಮೊಗ್ಗ ಅಭ್ಯರ್ಥಿ ನಾನೇ: ಯಡಿಯೂರಪ್ಪ ಘೋಷಣೆ

ಶಿವಮೊಗ್ಗದ ಹಾಲಿ ಸಂಸದ, ಪುತ್ರ ಬಿ ವೈ ರಾಘವೇಂದ್ರ ಅವರ ಸಮ್ಮುಖದಲ್ಲಿ ಯಡಿಯೂರಪ್ಪ ಈ ವಿಷಯವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಅವರು ಶಿಕಾರಿಪುರದ ಶಾಸಕರಾಗಿದ್ದಾರೆ. ಅಂದಹಾಗೆ, ಬಿಜೆಪಿ ಸೇರಿದಂತೆ ಯಾವುದೇ ಪಕ್ಷವು ಮುಂದಿನ ಚುನಾವಣೆಗೆ ಇದುವರೆಗೂ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ.
ನಿನ್ನೆ ರಾತ್ರಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರನ್ನು 'ನಿಮ್ಮ ನಾಯಕರೆಲ್ಲಾ ಹೇಳುತ್ತಿದ್ದಾರೆ ಶಿವಮೊಗ್ಗದ ಅಭ್ಯರ್ಥಿ ನೀವೇ ಎಂದು, ಹೌದಾ?' ಎಂದು ಕೇಳಿದ್ದಕ್ಕೆ ಯಡಿಯೂರಪ್ಪ ಅವರು 'ಹೌದು. ವರಿಷ್ಠರೂ ನನ್ನ ಬಗ್ಗೆಯೇ ಹೇಳಿದ್ದಾರೆ. ಹಾಗಾಗಿ ನಾನೇ ಇಲ್ಲಿಂದ ಸ್ಪರ್ಧಿಸುತ್ತೇನೆ' ಎಂದು ಹೇಳಿದ್ದಾರೆ.
ಇದರೊಂದಿಗೆ ಎಲ್ಲ ಊಹಾಪೋಹಗಳು/ ಗಾಳಿಸುದ್ದಿಗೆ ಬ್ರೇಕ್ ಬಿದ್ದಂತಾಗಿದೆ. ಯಡಿಯೂರಪ್ಪ ನಿರ್ಧಾರವನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
'ದೇಶದ ಹಿತದೃಷ್ಟಿಯಿಂದ ಮೋದಿ ಗೆಲುವು ಅನಿವಾರ್ಯ. ಅವರು ಪ್ರಧಾನಿ ಪ್ರಧಾನಿಯಾಗಬೇಕೆಂದು ಪಕ್ಷವಾಗಲಿ/ಮುಖಂಡರಾಗಲಿ ತೀರ್ಮಾನಿಸಿದ್ದಲ್ಲ. ಪತ್ರಿಕೆ, ಟಿವಿ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿ ಕುರಿತ ಅಭಿಮಾನ ಮತ್ತು ಒಕ್ಕೊರಲ ಅಭಿಮತದ ಹೊಳೆ ಹರಿದಿದೆ. ಇದೇ ಅವರನ್ನು ಪ್ರಧಾನಿ ಆಗುವ ಹಂತಕ್ಕೆ ತಂದು ನಿಲ್ಲಿಸಿದೆ. ಮೋದಿ ಪರ ಅಲೆಗೆ ಕರ್ನಾಟಕದ ಕೊಡುಗೆ ಮುಖ್ಯವಾಗುತ್ತದೆ. ಹಾಗಾಗಿ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಇದಕ್ಕೆ ಕಾರ್ಯಕರ್ತರು ಈಗಿಂದಲೇ ಕಾರ್ಯೋನ್ಮುಖರಾಗಬೇಕು' ಎಂದು ಯಡಿಯೂರಪ್ಪ ಆಶಿಸಿದರು.












Click it and Unblock the Notifications