BJP President Post: ಬಿ ಎಸ್ ಯಡಿಯೂರಪ್ಪ ಭೇಟಿ ಮಾಡಿದ ಜನಾರ್ದನ ರೆಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಇಲ್ಲ? ಯಾಕೆ?
ಬೆಂಗಳೂರು, ಮಾರ್ಚ್ 11: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತು ಚರ್ಚೆ ಜೋರಾಗಿದೆ. ಇತ್ತ ಬಿಜೆಪಿಯಲ್ಲಿ ಬಣ ಬಡಿದಾಟದಿಂದಾಗಿ ಕಾರ್ಯಕರ್ತರು ತೀವ್ರ ಗೊಂದಲದಲ್ಲಿದ್ದಾರೆ. ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯಡಿಯೂರಪ್ಪ ಅವರ ವಿರೋಧಿ ಬಣ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದೆ. ರಾಜ್ಯಾಧ್ಯಕ್ಷರ ಬದಲಾವಣೆಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಣ ಪಟ್ಟು ಹಿಡಿದಿದ್ದು, ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ಹಲವರ ಹೆಸರುಗಳು ಕೇಳು ಬಂದಿದ್ದು,ಗಾಲಿ ಜನಾರ್ದನ ರೆಡ್ಡಿ ಹೆಸರು ಮುಂಚೂಣಿಯಲ್ಲಿದೆ.
ಬಣ ಬಡಿದಾಟ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ನಡುವೆ ರಾಜ್ಯ ಬಿಜೆಪಿಯಲ್ಲಿ ಹಲವು ಬದಲಾವಣೆಗಳು ನಡೆಯುತ್ತಿದೆ. ರಾಜ್ಯಕ್ಕೆ ಅಮಿತ್ ಶಾ ಬಂದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಶಾ ಅವರನ್ನು ಭೇಟಿಯಾಗಿ ಗೌಪ್ಯ ಚರ್ಚೆ ನಡೆಸಿದ್ದಾರೆ ಎಂಬ ವಿಚಾರ ಸಂಚಲನ ಸೃಷ್ಟಿಸಿದೆ. ಅಲ್ಲದೇ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆಗೆ ರಹಸ್ಯ ಸಭೆ ನಡೆಸಿದ್ದು, ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೂ ಅಮಿತ್ ಶಾ ಭೇಟಿ ಮಾಡಿದ ಬಳಿಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಭೇಟಿ ಮಾಡಿದ್ದು, ಚರ್ಚೆ ನಡೆಸಿದ್ದಾರೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ರೇಸ್‌ಗೆ ಜನಾರ್ದನ ರೆಡ್ಡಿಯೂ ಇದ್ದಾರೆ ಎನ್ನುವ ಚರ್ಚೆ ಕಮಲ ಪಾಳಯದಲ್ಲಿ ಹುಟ್ಟಿಕೊಂಡಿದೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್ ಜನಾರ್ದನ ರೆಡ್ಡಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಣೆ ಹಾಕುವುದಿಲ್ಲ ಎಂದು ತಿಳಿದು ಬಂದಿದೆ. ಬಿಜೆಪಿಯಿಂದ ಬರೋಬ್ಬರಿ 12 ವರ್ಷಗಳ ಕಾಲ ದೂರವಿದ್ದ ಜನಾರ್ದನ ರೆಡ್ಡಿ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಸಾಧ್ಯವಿಲ್ಲ ಎನ್ನಲಾಗಿದೆ.
ಬಿಜೆಪಿಯಿಂದ ಹಲವು ವರ್ಷಗಳಿಂದ ದೂರವಿದ್ದ ಕಾರಣಕ್ಕೆ ಬಿಜೆಪಿಯಲ್ಲಿ ಜನಾರ್ದನ ರೆಡ್ಡಿ ಅವರನ್ನ ಬಹಳಷ್ಟು ಸಮುದಾಯದ ನಾಯಕರು ಒಪ್ಪುವುದಿಲ್ಲ. ಒಂದು ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜನಾರ್ದನ ರೆಡ್ಡಿ ಅವರ ಹೆಸರು ಕೇಳಿ ಬಂದರೇ ಹಲವು ಸಮುದಾಯದ ನಾಯಕರು ವಿರೋಧ ವ್ಯಕ್ತಪಡಿಸಿಲಿದ್ದಾರೆ. ಈಗಾಗಲೇ ದೋಸ್ತಿಗಳಂತಿದ್ದ ಜನಾರ್ದನ ರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ನಡುವೆ ಇದೀಗ ಒಡಕು ಮೂಡಿದೆ. ಅಲ್ಲದೆ ಪಕ್ಷದಲ್ಲಿನ ಕಚ್ಚಾಟ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಾನು ಹೈಕಮಾಂಡ್ ನಾಯಕರಿಗೆ ತಿಳಿಸಿ ಬರುತ್ತೇನೆ ಎಂದು ಶ್ರೀರಾಮುಲು ಹೇಳಿದ್ದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಬಹಿರಂಗವಾಗಿಯೇ ಶ್ರೀರಾಮುಲು ಅಸಮಾಧಾನ ಹೊರ ಹಾಕಿದ್ದು, ರಾಜಕೀಯವಾಗಿ ನನ್ನನ್ನು ಮುಗಿಸಲು ಜನಾರ್ದನ ರೆಡ್ಡಿ ಪ್ರಯತ್ನ ನಡೆಸಿದ್ದಾರೆ ಎಂದು ಅಸಮಾಧನ ಹೊರ ಹಾಕಿದ್ರು. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜನಾರ್ದನರೆಡ್ಡಿ ಅವರ ಹೆಸರು ಕೇಳಿ ಬಂದರೇ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಶ್ರೀರಾಮುಲು ತೀವ್ರವಾಗಿ ವಿರೋಧ ವ್ಯಕ್ತಪಡಿಸಲಿದ್ದಾರೆ. ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವನ್ನ ಕಡೆಗಣಿಸಲು ಬಿಜೆಪಿ ಇಷ್ಟ ಪಡುವುದಿಲ್ಲ. ಹೀಗಾಗಿ ಜನಾರ್ದನ ರೆಡ್ಡಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದು ಕಷ್ಟ ಎನ್ನಲಾಗಿದೆ.












Click it and Unblock the Notifications