'Operation Kamala': ಅಪರೇಷನ್ ಕಮಲಕ್ಕೆ ಬಿಜೆಪಿಯಿಂದ 1000 ಕೋಟಿ ರೂ. ಬಳಕೆ- ಪ್ರಿಯಾಂಕ್ ಖರ್ಗೆ ಆರೋಪ

ಬೆಂಗಳೂರು ಅಕ್ಟೋಬರ್ 31: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಆಂತರಿಕ ವಲಯದಲ್ಲಿ ಹುನ್ನಾರಗಳು ನಡೆಯುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಅಪರೇಷನ್ ಕಮಲಕ್ಕೆ ಬಿಜೆಪಿ ಒಂದು ಸಾವಿರ ಕೋಟಿ ರೂ. ಬಳಕೆ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಹತಾಶರಾಗಿರುವ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ 1,000 ಕೋಟಿ ರೂಪಾಯಿ ಕೇಳಿರಬಹುದು ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

bjp-used-1000-crores-for-operation

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರಿದಾಗಿನಿಂದಲೂ ಬಿಜೆಪಿ ಆಪರೇಷನ್ ಕಮಲ ಶುರುಮಾಡಿದೆ ಎನ್ನುವ ಆರೋಪಗಳು ಕೇಳಿ ಬರುತ್ತಲೇ ಇವೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗಾಣಿಗ, ಬಿಜೆಪಿ ತಂಡ ನಾಲ್ವರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ತಲಾ 50 ಕೋಟಿ ರೂಪಾಯಿ ನಗದು ಮತ್ತು ಬಿಜೆಪಿಗೆ ಬದಲಾದರೆ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಕೆಲಸ ಮಾಡುತ್ತಿರುವ ಬಿಜೆಪಿ ತಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ನವದೆಹಲಿಗೆ ವಿಶೇಷ ವಿಮಾನವನ್ನು ಕಾಯ್ದಿರಿಸಿದೆ ಎಂದು ಖರ್ಗೆ ಅವರು ಆರೋಪಿಸಿದ್ದಾರೆ. ಬಿಜೆಪಿ ತಂಡದಿಂದ ನನಗೆ ಯಾವುದೇ ಆಫರ್ ಬಂದಿಲ್ಲ, ಆದರೆ ಹಾಲಿ ಶಾಸಕರೊಬ್ಬರು ಇಂತಹ ಆರೋಪ ಮಾಡಿದರೆ ರಾಜ್ಯದಲ್ಲಿ ಆಪರೇಷನ್ ಕಮಲವನ್ನು ತಳ್ಳಿಹಾಕುವಂತಿಲ್ಲ ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.

"ಆಪರೇಷನ್ ಕಮಲಕ್ಕೆ ಕರ್ನಾಟಕದಲ್ಲಿ ಬೇರುಗಳಿವೆ. ಬಿಜೆಪಿಯ ಟ್ರ್ಯಾಕ್ ರೆಕಾರ್ಡ್ ನಲ್ಲಿ ದೇಶಾದ್ಯಂತ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಿದ್ದಾರೆ ಎಂದು ತೋರಿಸುತ್ತದೆ. 2019 ರಲ್ಲಿ ಅವರು ಕರ್ನಾಟಕದಲ್ಲಿ ಅದೇ ರೀತಿ ಮಾಡಲಿಲ್ಲವೇ? ಮಧ್ಯಪ್ರದೇಶದಲ್ಲಿ ಅವರು ಇದೇ ರೀತಿ ಮಾಡಲಿಲ್ಲವೇ? ಹೀಗೆ ಹೇಳುತ್ತಾ ಹೋದರೆ ಪಟ್ಟಿ ತುಂಬಾ ದೊಡ್ಡದಿದೆ. ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಲು, ಶಾಸಕರಿಗೆ ಹುದ್ದೆಯನ್ನು ನೀಡುವ ಹಾಗೂ ಅವರಿಗೆ ನಗದು ಆಮಿಷಕ್ಕೆ ಬಿಜೆಪಿ ಮುಂದಾಗಿದೆ" ಎಂದು ಅವರು ಆರೋಪಿಸಿದರು.

ಬಿಜೆಪಿಗೆ ಬಹುಮತ ಬರದೇ ಇರುವ ಮಹಾರಾಷ್ಟ್ರ, ಬಿಹಾರ, ಅಸ್ಸಾಂ, ಮಧ್ಯ ಪ್ರದೇಶದಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದರು. ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದರು. ಕರ್ನಾಟಕದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ. ಇದು ಬಿಜೆಪಿಯ ಸ್ಟಾಂಟರ್ಡ್ ಆಪರೇಷನ್ ಆಗಿದೆ ಎಂದು ವ್ಯಂಗ್ಯವಾಡಿದರು.

ಒಂದು ಸಾವಿರ ಕೋಟಿ ರೂಪಾಯಿ ಕೊಡಿ, ಸರ್ಕಾರ ರಚನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈ ಕಾಲು ಬಿದ್ದಿದ್ದಾರೆ. ಅದೇ ದುಡ್ಡು ತಂದು ಇಲ್ಲಿ ಆಪರೇಷನ್ ಕಮಲ ಆಮಿಷಕ್ಕೆ ಬಳಕೆ ಮಾಡುತ್ತಿರಬಹುದು. ಆಪರೇಷನ್ ಕಮಲ ಮಾಡುವವರು ನನ್ನನ್ನಂತೂ ಸಂಪರ್ಕ ಮಾಡಿಲ್ಲ. ನಾವೆಲ್ಲ ಹುಟ್ಟ ಕಾಂಗ್ರೆಸಿಗರು. ನಮ್ಮ ಹತ್ತಿರ ಬರುವುದಿಲ್ಲ. ಆದರೆ ನಮ್ಮ ಪಕ್ಷದ ಒಬ್ಬ ಶಾಸಕರು ಹೇಳುತ್ತಾರೆ ಎಂದರೆ ನಂಬಬೇಕಲ್ಲ ಎಂದು ತಿಳಿಸಿದರು.

ಇದಕ್ಕಾಗಿ ರಾಜ್ಯ ಬಿಜೆಪಿ ನಾಯಕರು ಶಾ ಅವರ ಸಹಾಯವನ್ನು ಕೇಳಿರಬೇಕು ಎಂದು ದೂರಿದ್ದಾರೆ. ರಾಜ್ಯದಲ್ಲಿ ಎಂದಾದರೂ ಜನಾದೇಶ ಗೆದ್ದಿದ್ದಾರಾ, ಆಪರೇಷನ್ ಕಮಲದ ಮೂಲಕವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಖರ್ಗೆ ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+